ಶಾಲೆಗೆ ತೆರಳಿದ್ದ ಬಾಲಕಿಯನ್ನು ಅಪಹರಿಸಿ ಗುಜರಾತ್ಗೆ ಕರೆದೊಯ್ದು ಅತ್ಯಾಚಾರ ಎಸಗಿ, ಬಂಧನದಲ್ಲಿರಿಸಿಕೊಂಡಿದ್ದ ಕಾಮಾಂಧ ಯುವಕನನ್ನು ಬೆಳಗಾವಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಗುಜರಾತ್ ಮೂಲದ ಬಿ.ಕೆ.ಕಂಗ್ರಾಳಿಯ ನಿವಾಸಿ ಆಕಾಶ ಭರತಕುಮಾರ ದೋಂಡಿಯಾ (19) ಬಂಧಿತ ಆರೋಪಿ. ಬೆಳಗಾವಿ ಜಿಲ್ಲೆಯ ಗ್ರಾಮವೊಂದರ 14 ವರ್ಷದ ಬಾಲಕಿ ನಗರದ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಳು. ಬಾಲಕಿಯನ್ನು ಪುಸಲಾಯಿಸಿ ಸಲುಗೆ ಬೆಳೆಸಿದ ಆರೋಪಿ, ಆಕೆಯನ್ನು ಅಪಹರಿಸಿ ಗುಜರಾತ್ಗೆ ಕರೆದೊಯ್ದು ಎರಡು ದಿನ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಅಲ್ಲಿಂದ ತಪ್ಪಿಸಿಕೊಂಡು ಬೆಳಗಾವಿಗೆ ಬಂದ ಬಾಲಕಿ ತಮ್ಮ ತಂದೆಗೆ ಕರೆ ಮಾಡಿ, ವಿಷಯ ತಿಳಿಸಿದ್ದಾಳೆ. ಬಾಲಕಿಯೊಂದಿಗೆ ಪೊಲೀಸ್ ಠಾಣೆಗೆ ಬಂದ ಕುಟಂದವರು ದೂರು ದಾಖಲಿಸಿದ್ದರು.
ಬಾಲಕಿಯ ದೂರಿನ ಆಧಾರದ ಮೇಲೆ ಖಡೇಬಜಾರ್ ಎಸಿಪಿ ಚಂದ್ರಪ್ಪ ನೇತೃತ್ವದ ವಿಶೇಷ ತಂಡ ಅಹಮದಾಬಾದ್ಗೆ ಹೋಗಿ ಆರೋಪಿಯನ್ನು ಬಂಧಿಸಿದ್ದಾರೆ. ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.