Thursday, September 19, 2024

ಪ್ರಾಯೋಗಿಕ ಆವೃತ್ತಿ

ಶಿವಣ್ಣನ ಬಹುನಿರೀಕ್ಷಿತ ‘ವೇದ’ ಟೀಸರ್ ಬಿಡುಗಡೆ

ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅಭಿನಯದ ಬಹುನಿರೀಕ್ಷಿತ ‘ವೇದ’ ಸಿನಿಮಾದ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ರಾಯಚೂರಿನಲ್ಲಿ ಅದ್ದೂರಿಯಾಗಿ ಟೀಸರ್‌ ಬಿಡುಗಡೆ ಸಮಾರಂಭ ನಡೆದಿದ್ದು, ಶಿವರಾಜ್‌ ಕುಮಾರ್‌, ಎ ಹರ್ಷ, ನಿರ್ಮಾಪಕಿ ಗೀತಾ ಶಿವರಾಜ್‌ ಕುಮಾರ್‌ ಸೇರಿದಂತೆ ಚಿತ್ರತಂಡದ ಎಲ್ಲರೂ ಕಾರ್ಯಕ್ರದಲ್ಲಿ ಭಾಗವಹಿಸಿದ್ದಾರೆ.

ಈ ಹಿಂದೆ ಬಿಡುಗಡೆಯಾಗಿದ್ದ ʼವೇದʼ ಸಿನಿಮಾದ ʼಗಿಲ್ಲಕ್ಕೋ ಶಿವʼ ಹಾಡು ಭಾರೀ ಜನಪ್ರಿಯತೆ ಗಳಿಸಿತ್ತು. ಇದೀಗ ಬಿಡುಗಡೆಯಾಗಿರುವ ಆಕ್ಷನ್‌ ಪ್ಯಾಕ್‌ ಟೀಸರ್‌ ಕೂಡ ಯುಟ್ಯೂಬ್‌ನಲ್ಲಿ ಸಖತ್‌ ಸದ್ದು ಮಾಡುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ.

ಶಿವಣ್ಣ ಮತ್ತು ಎ ಹರ್ಷ ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ ನಾಲ್ಕನೇ ಸಿನಿಮಾ ವೇದ. ಹರ್ಷ, ಶಿವಣ್ಣನಿಗಾಗಿ ಈ ಹಿಂದೆ ಭಜರಂಗಿ, ವಜ್ರಕಾಯ ಮತ್ತು ಭಜರಂಗಿ 2 ಚಿತ್ರಗಳನ್ನು ನಿರ್ದೇಶಿಸಿದ್ದರು. ಭಜರಂಗಿ ಮತ್ತು ವಜ್ರಕಾಯ ಸಿನಿಮಾಗಳು ಭರ್ಜರಿ ಯಶಸ್ಸು ಕಂಡರೆ, ಪುನೀತ್‌ ನಿಧನದಿಂದಾಗಿ ‘ಭಜರಂಗಿ 2’ ಸಿನಿಮಾವನ್ನು ಚಿತ್ರಮಂದಿರಳಿಂದ ಹಿಂಪಡೆಯಾಗಿತ್ತು. ನಂತರ, ಒಟಿಟಿ ಪ್ಲಾಟ್‌ಫಾಂನಲ್ಲಿ ಬಿಡುಗಡೆ ಮಾಡಲಾಗಿತ್ತು. ಹೀಗಾಗಿ, ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಸೋಲನುಭವಿಸಿತ್ತು. ಇದಾದ ಬೆನ್ನಲ್ಲೇ ಸೆಟ್ಟೇರಿದ್ದ ʼವೇದʼ ಸಿನಿಮಾ ಇದೀಗ ತೆರೆಗೆ ಬರಲು ಸಜ್ಜಾಗಿದೆ. ಚಿತ್ರದ ಟೀಸರ್‌ ಮತ್ತು ಹಾಡುಗಳು ನಿರೀಕ್ಷೆಯನ್ನು ಹೆಚ್ಚಿಸಿವೆ.

60ರ ದಶಕದ ಹಿನ್ನೆಲೆಯಲ್ಲಿ ಮೂಡಿಬಂದಿರುವ ‘ವೇದ’ ಚಿತ್ರಕ್ಕೆ ಎ ಹರ್ಷ ಆಕ್ಷನ್‌ ಕಟ್‌ ಹೇಳಿದ್ದು, ಗಾನವಿ ಲಕ್ಷ್ಮೀ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವೀಣಾ ಪೊನ್ನಪ್ಪ, ರಘು ಶಿವಮೊಗ್ಗ, ಚೆಲುವರಾಜ್‌, ಭರತ್‌ ಸಾಗರ, ಉಮಾಶ್ರೀ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಗೀತಾ ಪಿಕ್ಚರ್ಸ್‌ ಬ್ಯಾನರ್‌ನಡಿ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ ಶಿವರಾಜ್‌ ಕುಮಾರ್‌ ಪತ್ನಿ ಗೀತಾ ಅವರೇ ಬಂಡವಾಳ ಹೂಡಿದ್ದಾರೆ. ಟೀಸರ್‌ ಮತ್ತು ಟೈಟಲ್‌ ಟ್ರ್ಯಾಕ್‌ ಮೂಲಕ ನೋಡುಗರ ಗಮನ ಸೆಳೆಯುತ್ತಿರುವ ‘ವೇದ’ ಡಿಸೆಂಬರ್‌ 23ಕ್ಕೆ ತೆರೆಗೆ ಬರಲಿದೆ. 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!