ಅಧಿಕಾರ ಇದ್ದಾಗ ಮಜಾ ಮಾಡುವುದು, ಇಲ್ಲದಿದ್ದರೆ ಬಾಯಿ ಬಡಿದುಕೊಳ್ಳುವುದು ಕಾಂಗ್ರೆಸ್ ನೀತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವ್ಯಂಗ್ಯವಾಡಿದರು.
ಮದ್ದೂರಿನಲ್ಲಿ ನಡೆದ ಜನಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರ ತವರು ಜಿಲ್ಲೆಯಲ್ಲಿ ಕನಿಷ್ಠ 5 ಹಾಗೂ ಗರಿಷ್ಠ 7 ಶಾಸಕರ ಆಯ್ಕೆ ಮಾಡಲು ಹಿರಿಯರಾದ ಯಡಿಯೂರಪ್ಪ ಅವರ ಜೊತೆಸೇರಿ ಶ್ರಮಿಸುವುದಾಗಿ ತಿಳಿಸಿದರು.
ಕಾಂಗ್ರೆಸ್ ಧೂಳೀಪಟ
ಕುಕ್ಕರ್ ಬಾಂಬ್ ಆಕಸ್ಮಿಕ ಎಂದು ಡಿ.ಕೆ.ಶಿವಕುಮಾರ್ ಹೇಳಿಕೆ ನೀಡುತ್ತಾರೆ. ಕುಕ್ಕರ್ ನಲ್ಲಿ ಬಾಂಬಿಟ್ಟು ಸಿಕ್ಕಿ ಹಾಕಿಕೊಂಡು ಅಂತರರಾಷ್ಟ್ರೀಯ ಮಟ್ಟದ ಸಂಪರ್ಕ ಇದ್ದ ವ್ಯಕ್ತಿಯನ್ನು ಹಿಡಿದರೆ ಅದು ಆಕಸ್ಮಿಕ ಎನ್ನುತ್ತಾರೆ. ಕಾಂಗ್ರೆಸ್ ಇನ್ನಷ್ಟು ಕರ್ಮಕಾಂಡ ಬಯಲಿಗೆ ಬರಲಿದೆ. ಅದು ದೇಶದಲ್ಲಿ ಈಗಾಗಲೇ ಧೂಳೀಪಟ ಆಗಿದೆ. ಕರ್ನಾಟಕದಲ್ಲೂ ಅದು ಧೂಳೀಪಟ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಗೆ ಮತ ನೀಡಿ
ಮುಚ್ಚಿದ್ದ ಮೈಷುಗರ್ ಕಾರ್ಖಾನೆಯ ಪುನಶ್ಚೇತನಕ್ಕೆ ಯಡಿಯೂರಪ್ಪನವರು ಪ್ರಯತ್ನಿಸಿದ್ದರು.ನಾನು ಮೈಷುಗರ್ ಕಾರ್ಖಾನೆ ಪುನರಾರಂಭ ಮಾಡಿ ಕಬ್ಬು ಅರೆಯುವಂತೆ ಮಾಡಿದ್ದೇನೆ. ಮಂಡ್ಯದ ಕುರಿತು ಬಿಜೆಪಿ ನೈಜ ಕಳಕಳಿ, ಪ್ರೀತಿ, ವಿಶ್ವಾಸ ಹೊಂದಿದೆ ಎಂದು ತಿಳಿಸಿದರು.
ಕರ್ನಾಟಕ ಮತ್ತು ಮಂಡ್ಯದ ಜನರನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದವರು ಬಹಳಷ್ಟು ದಿನ ಮೋಸ ಮಾಡಲು ಸಾಧ್ಯವಿಲ್ಲ. ಭಾವನಾತ್ಮಕವಾಗಿ ಮತ ಪಡೆದು ಗೆಲ್ಲುವ ರಾಜಕಾರಣ ಇನ್ನು ಇಲ್ಲಿ ನಡೆಯುವುದಿಲ್ಲ. ಮಂಡ್ಯದ ಸ್ವಾಭಿಮಾನ ಉಳಿಯಲು ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಶಿಥಿಲಗೊಂಡ ಕೆ.ಆರ್.ಎಸ್ ಗೇಟಿನ ದುರಸ್ತಿ ಕಾರ್ಯವನ್ನು ನಾನು ಮಾಡಿದೆ. ಇನ್ನೂ 80 ಕೋಟಿ ರೂ. ಯೋಜನೆಗೆ ಮಂಜೂರಾತಿ ಕೊಟ್ಟು, ಉಳಿದ ಗೇಟುಗಳ ದುರಸ್ತಿ ಕಾರ್ಯ ಮಾಡಲಿದ್ದೇವೆ. ಮಂಡ್ಯದ ವಿಸಿ ನಾಲೆ ನೆನೆಗುದಿಗೆ ಬಿದ್ದಿತ್ತು. ಕಾಲುವೆ ಆಧುನೀಕರಣಕ್ಕೆ ಹಣ ಕೊಟ್ಟಿದ್ದೇನೆ ಎಂದರು.
ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಒಂದು ಬಾರಿಯೂ ಇತ್ತ ಬರಲಿಲ್ಲ. ಪರಿಹಾರ ಕೊಟ್ಟು ರೈತರ ಪರವಾಗಿ ನಿಲ್ಲಲಿಲ್ಲ ಎಂದು ಟೀಕಿಸಿದರು.
ಸೋಗಿನ ರಾಜಕಾರಣ
ಅಲ್ಪಸಂಖ್ಯಾತರ ಮತ ಪಡೆಯಲು ಕಾಂಗ್ರೆಸ್‍ನವರು ಸೋಗಿನ ರಾಜಕಾರಣ ಮಾಡುತ್ತಾರೆ ಎಂದು ಆರೋಪಿಸಿದರು. ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಒಯ್ಯಲು ಬಿಜೆಪಿಗೆ ಮತ ಕೊಡಿ. ಭಯೋತ್ಪಾದಕರಿಗೆ ಸಹಾನುಭೂತಿ ತೋರುವ, ದೀನದಲಿತರ ವಿರೋಧಿಗಳಾದ, ಹಿಂದುತ್ವದ ವಿರೋಧಿಗಳಾಗಿರುವ, ದುಡಿಯುವವರ, ರೈತರ ಹಿತಚಿಂತನೆ ಮಾಡದ ಕಾಂಗ್ರೆಸ್ ಎಂದಿಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬರಬಾರದು. ಮುಂದಿನ 25 ವರ್ಷಗಳಲ್ಲಿ ಬಿಜೆಪಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸದಿಂದ ತಿಳಿಸಿದರು.
ಮಂಡ್ಯ ಈಸ್ ಇಂಡಿಯಾ ಎಂಬಂತೆ ಇಲ್ಲಿ ಜನ ಸೇರಿದ್ದಾರೆ. ಬದಲಾವಣೆಯ, ಪರಿವರ್ತನೆಯ ಶಕ್ತಿ ಇಲ್ಲಿನ ಜನರಲ್ಲಿದೆ. ನವ ಕರ್ನಾಟಕದಿಂದ ನವ ಭಾರತ ನಿರ್ಮಿಸಲು ಸಹಕರಿಸಿ ಎಂದು ಮನವಿ ಮಾಡಿದರು.
ಸಚಿವರಾದ ಆರ್.ಅಶೋಕ್,ಕೆ.ಗೋಪಾಲಯ್ಯ, ನಾರಾಯಣ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್,ಬಿಜೆಪಿ ಅಧ್ಯಕ್ಷ ಸಿ.ಪಿ.ಉಮೇಶ್, ಎಸ್.ಪಿ.ಸ್ವಾಮಿ,ಇಂಡುವಾಳು ಸಚ್ಚಿದಾನಂದ ಸೇರಿದಂತೆ ಸ್ಥಳೀಯ ಮುಖಂಡರು, ಪಕ್ಷದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಿದ್ದರು.




