ಟನ್ ಕಬ್ಬಿಗೆ 4500ರೂ. ದರ ನಿಗದಿ, ಹಾಲಿನ ದರ 40 ರೂ. ಹೆಚ್ಚಳಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘ ಕರೆ ನೀಡಿದ್ದ ಡಿ.19ರ ಮಂಡ್ಯನಗರ ಬಂದ್ ಗೆ ನಗರದ ವಾಣಿಜೋದ್ಯಮಿಗಳು, ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘಟನೆಗಳು ವ್ಯಾಪಕ ಬೆಂಬಲ ವ್ಯಕ್ತಪಡಿಸಿ ಬಂದ್ ಗೆ ಅಪೂತ ಪೂರ್ವ ಬೆಂಬಲ ನೀಡಿದವು.
ಸರ್ಕಾರ ವಿರುದ್ಧ ಘೋಷಣೆ
ಮಂಡ್ಯ ನಗರದ ಹೃದಯ ಭಾಗವಾದ ಸಂಜಯ ವೃತ್ತದಲ್ಲಿ ಸಹಸ್ರಾರು ರೈತರು ಕಬ್ಬಿನಗಾಡಿಗಳೊಂದಿಗೆ ಆಗಮಿಸಿ ಸರ್ಕಾರ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು. ಕಾಲೇಜು ವಿದ್ಯಾರ್ಥಿಗಳು ಎತ್ತಿನಗಾಡಿಗಳನ್ನು ಏರಿ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ರೈತ ಹೋರಾಟಕ್ಕೆ ಬೆಂಬಲವಾಗಿ ನಿಂತರು. ರೈತರು, ವಿದ್ಯಾರ್ಥಿಗಳು ಕಬ್ಬಿನ ಲಾರಿಯನ್ನು ಏರಿ ರೈತಸಂಘದ ಹಸಿರು ಧ್ವಜವನ್ನು ಹಾರಿಸಿದರು.

ಪ್ರಮುಖ ವಾಣಿಜ್ಯ ವಹಿವಾಟು ನಡೆಯುವ ಪೇಟೆ ಬೀದಿ, ಜೈನರ ಬೀದಿ,ವಿವಿ ರಸ್ತೆ, ಆರ್.ಪಿ. ರಸ್ತೆ,ನೂರಡಿ ರಸ್ತೆ,ಗುತ್ತಲು ರಸ್ತೆ ಸೇರಿದಂತೆ ನಗರದ ಎಲ್ಲೆಡೆ ಜನರು ಅಂಗಡಿಗಳನ್ನು ಮುಚ್ಚಿ ಬಂದ್ ಗೆ ವ್ಯಾಪಾರಿಗಳು ವ್ಯಾಪಕ ಬೆಂಬಲ ವ್ಯಕ್ತಪಡಿಸಿದರು.

ಹಲವು ಅಂಗಡಿ ಮಳಿಗೆಗಳ ಮೇಲೆ ಮಂಡ್ಯ ಬಂದ್ ಗೆ ನಮ್ಮ ಬೆಂಬಲ ಎಂದು ಅಂಗಡಿಯ ಮೇಲೆ ಚೀಟಿ ಅಂಟಿಸಲಾಗಿತ್ತು. ಪೇಟೆ ಬೀದಿಯಲ್ಲಿ ವರ್ತಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ವಿವಿ ರಸ್ತೆಯಲ್ಲಿ ಕೆಲವು ಅಂಗಡಿಗಳಿಗೆ ರೈತರೊಂದಿಗೆ ನಾವು ಬಂದ್ ಗೆ ಬೆಂಬಲ ವ್ಯಕ್ತಪಡಿಸುತ್ತೇವೆ ಎಂಬ ಚೀಟಿಯನ್ನು ಅಂಟಿಸಿ ಬಾಗಿಲು ಹಾಕಿರುವುದು ಗಮನ ಸೆಳೆಯಿತು.
ರೈತಶಕ್ತಿ ಪ್ರದರ್ಶನ
ಮಂಡ್ಯ ನಗರ ಬಂದ್ ಹಿನ್ನಲೆಯಲ್ಲಿ ರಾಜ್ಯ ರೈತಸಂಘದ ಸಾವಿರಾರು ರೈತರು ಬೈಕ್ ರ್‍ಯಾಲಿ ನಡೆಸಿ ಬಂದ್ ಗೆ ಸಹಕಾರ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಹಸ್ರಾರು ಮಂದಿ ರೈತರು ಪಾಲ್ಗೊಂಡಿದ್ದು, ರೈತಶಕ್ತಿಯನ್ನು ತೋರ್ಪಡಿಸುವಂತಿತ್ತು.

ಬೆಳ್ಳಂಬೆಳಿಗ್ಗೆ ವ್ಯಾಪಾರ ಮಾಡುತ್ತಿದ್ದ ಕೆಲವು ಅಂಗಡಿಗಳನ್ನು ಪ್ರತಿಭಟನಾಕಾರರು ಬಾಗಿಲು ಮುಚ್ಚಿಸಿದರು, ಇದರಿಂದ ಹೋಟೆಲ್ ವ್ಯಾಪಾರಕ್ಕೆ ಅಡೆತಡೆ ಉಂಟಾಯಿತು.ಚಲನಚಿತ್ರ ಮಂದಿರಗಳಲ್ಲಿ ಬೆಳಗಿನ ಪ್ರದರ್ಶನ ರದ್ದು ಮಾಡಲಾಗಿತ್ತು.ಹೆದ್ದಾರಿಯಲ್ಲಿನ ಪೆಟ್ರೋಲ್ ಬಂಕ್ ಗಳು ಕೆಲ ತಾಸು ವ್ಯಾಪಾರ ಸ್ಥಗಿತ ಮಾಡಿದ್ದವು.
ವಾಹನ ಸಂಚಾರ ವಿರಳ
ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ವಿರಳವಾಗಿತ್ತು,ಸರ್ಕಾರಿ ಬಸ್ ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಹೆದ್ದಾರಿಯಲ್ಲಿ ಸಂಚರಿಸುವ ಸರ್ಕಾರಿ ಬಸ್ ಗಳು ಕೆ ಎಸ್ ಆರ್ ಟಿ ಸಿ ನಿಲ್ದಾಣಕ್ಕೆ ಬಾರದ ಹಿನ್ನೆಲೆಯಲ್ಲಿ ಬೆಂಗಳೂರು ಮೈಸೂರಿಗೆ ತೆರಳುವ ಪ್ರಯಾಣಿಕರು ಬಸ್ ಸಿಗದೆ ಪರದಾಡಿದರು.

ರೈತರ ಸಂಘದ ಜೊತೆ ದನಿಗೂಡಿಸಿದ ದಲಿತ, ಪ್ರಗತಿಪರ, ಕನ್ನಡಪರ ಸಂಘಟನೆಗಳು ಮುಖಂಡರು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೃಹತ್ ಹೋರಾಟ ನಡೆಸಿದ ಸಾವಿರಾರು ರೈತಸಂಘದ ಕಾರ್ಯಕರ್ತರು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಕಿಡಿಕಾರಿದರು.




