ರೈತ ಮುಖಂಡ, ಮಾಜಿ ಪ್ರಧಾನಿ ಚೌಧರಿ ಚರಣ್ಸಿಂಗ್ ಜನ್ಮದಿನವನ್ನು (ಡಿಸೆಂಬರ್ 23) ʼರಾಷ್ಟ್ರೀಯ ರೈತರ ದಿನʼ ಎಂದು ಆಚರಿಸಲಾಗುತ್ತಿದೆ. ಇದರ ಆಚರಣೆ ಆಗಲಿ ಸಂಭ್ರಮವಾಗಲಿ ಅನ್ನ ಬೆಳೆಯುವರಲ್ಲಿ ಅಷ್ಟಾಗಿ ಉಳಿದಿಲ್ಲ.
ಹಾಗೆ ಗಮನಿಸಿದರೆ ಉಣ್ಣುವುದನ್ನು ಕೊಳ್ಳುವವರಲ್ಲಿ ಈ ಆಚರಣೆ ಹೆಚ್ಚಾದಂತೆ ಕಾಣುತ್ತದೆ. ಮುಕ್ತ ಆರ್ಥಿಕ ನೀತಿಗಳು ಕೃಷಿ ಮಾರುಕಟ್ಟೆಯನ್ನು ಅಲ್ಲಾಡಿಸುತ್ತಿರುವಾಗ ಖಾಲಿ ಕಿಸೆಗೆ ಕೈ ಹಾಕುತ್ತಿರುವ ರೈತನ ಬದುಕಿನಲ್ಲಿ ರೈತ ದಿನಾಚರಣೆಗೆ ಉತ್ಸಾಹ ಏಲ್ಲಿ ? ಈ ವರ್ಷವಂತು ಹವಾಮಾನ ವೈಪರೀತ್ಯದಿಂದ ಬಹುತೇಕ ಬೆಳೆಗಳು ಕೈ ಹತ್ತದೆ ಕಂಗಾಲಾಗಿರುವ ರೈತನಿಗೆ ಎಲ್ಲಿಯ ಸಂಭ್ರಮ ?
ಒಂದು ವರದಿಯಂತೆ 21- 22 ರಲ್ಲಿ ಹವಾಮಾನ ವೈಪರೀತ್ಯದಿಂದಾಗಿ ರೈತರ ತಲಾ ಆದಾಯ ಶೇಕಡ 12.5ರಷ್ಟು ಕಡಿಮೆಯಾಗಿದೆ ಎಂದು ಕಾರ್ಬನ್ ಡಿಸಲ್ಯೂಷನ್ ಪ್ರಾಜೆಕ್ಟ್ ನ ಆರ್ಥಿಕ ತಜ್ಞರ ವರದಿ ಹೇಳುತ್ತದೆ.
ಇಂದಿಗೂ ನೇರವಾಗಿಯೋ ಪರೋಕ್ಷವಾಗಿಯೋ ಈ ದೇಶದ 52ರಷ್ಟು ಜನಸಂಖ್ಯೆ ಕೃಷಿಯನ್ನೇ ಅವಲಂಬಿಸಿದೆ ಈ ರೈತ ಸಮುದಾಯದ ರಕ್ಷಣೆಗೆ ನಿಲ್ಲದ ಸರ್ಕಾರ ಏಕೆ? ಬೇಕೆ? ಎನಿಸದಿರದು. ಈ ದೇಶದ ರೈತರು ಪ್ರತಿ ಅರ್ಧ ಗಂಟೆಗೆ ಒಬ್ಬರಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ, ದಿನಂಪ್ರತಿ 5300ಕ್ಕೂ ಹೆಚ್ಚು ರೈತರು ಕೃಷಿಗೆ ಬೆನ್ನು ಹಾಕಿ ವಲಸೆಯ ದಾರಿ ಹಿಡಿದಿರುವ ಈ ದಿನಮಾನಗಳಲ್ಲಿ ರೈತ ದಿನಾಚರಣೆಗೆ ಅರ್ಥವಿದೆಯೇ ?
ಜಾಗತೀಕರಣದ ನಂತರ ಎಲ್ಲವೂ ಹಣಮಯವಾಗುತ್ತಿರುವ ಈ ದಿನಗಳಲ್ಲಿ ಸರಾಸರಿ 20,000 ವಾರ್ಷಿಕ ಆದಾಯವಿರುವ ರೈತರು ಬಹಳಷ್ಟು ಇದ್ದಾರೆ ಇವರಿಗೆಲ್ಲಿಯ ರೈತ ದಿನದ ಸಂಭ್ರಮ.?
ಸಾಮಾಜಿಕವಾಗಿಯು ರೈತರು ಎಷ್ಟು ಕುಸಿದಿದ್ದಾರೆ ಎಂದರೆ ಕೃಷಿಕನೆಂಬ ಏಕೈಕ ಕಾರಣಕ್ಕೆ ಆತನನ್ನು ಮದುವೆಯಾಗಲು ಹೆಣ್ಣು ಮಕ್ಕಳು ಒಪ್ಪುತ್ತಿಲ್ಲ, ವಯಸ್ಸು 35 ಮೀರಿದರು ಮದುವೆಗೆ ಹೆಣ್ಣು ಸಿಗದೇ ನಿಂತ ಗಂಡು ಮಕ್ಕಳನ್ನು ನಾವಿಂದು ಹಳ್ಳಿ ಹಳ್ಳಿಗಳಲ್ಲಿ ಕಾಣಬಹುದಾಗಿದೆ. ಈ ಬೆಳವಣಿಗೆಯನ್ನು ಜಗತ್ತಿನ ಹಲವು ದೇಶಗಳಲ್ಲೂ ಕಾಣಬಹುದಾಗಿದೆ.
ಬಿತ್ತಿ , ಬೆಳೆದು, ಬೇಯಿಸಿ, ಬಡಿಸುವವಳಿಲ್ಲದಿದ್ದರೆ ಕೃಷಿ ನಡೆದೀತೇ ? ರೈತ ಮಹಿಳೆಯರು ಕೂಡ ತಾವು ಬದುಕಿದ- ಬದುಕುತ್ತಿರುವ ರೀತಿ, ತಮ್ಮ ಮಗಳದಾಗದಿರಲಿ ಎಂದು ಬಯಸಿ ಒಂದಿಷ್ಟು ಭೂಮಿ ಮಾರಿಯಾದರೂ ಸರಿ ಮಗಳು ನಗರ ಸೇರಲಿ ಎಂದು ಬಯಸುವುದು ಸಾಮಾನ್ಯವಾಗಿದೆ.
ಗ್ರಾಮ ಭಾರತವು ಮೂಲಭೂತ ಸೌಕರ್ಯಗಳಿಂದ ಬಹಳಷ್ಟು ಕಡೆಗಣಿಸಲ್ಪಟ್ಟಿದೆ. ಸರ್ಕಾರದ ನೀತಿ ರೂಪಿಸುವ ಸಂದರ್ಭದಲ್ಲಿ ರೈತರ ಹಾಗೂ ರೈತ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ನಿರ್ಲಕ್ಷಿಸುತ್ತಿರುವುದು ಇದಕ್ಕೆ ಕಾರಣವೂ ಹೌದು.
ವಿಶ್ವ ಸಂಸ್ಥೆ ಮಾನವ ಹಕ್ಕುಗಳನ್ನು ಎತ್ತಿ ಹಿಡಿದಂತೆ ರೈತ ಹಕ್ಕುಗಳನ್ನು ಪರಿಗಣಿಸಿ ಘೋಷಿಸಿದೆ. ಆದರೆ ನಮ್ಮ ಹಕ್ಕುಗಳಿಂದ ನಾವು ವಂಚಿತರಾಗುವುದನ್ನು ತಡೆಗಟ್ಟುವಲ್ಲಿ ಅಥವಾ ನಮ್ಮ ಹಕ್ಕುಗಳ ಬಲವರ್ಧನೆ ಗೊಳಿಸುವಲ್ಲಿ ವಿಶ್ವಸಂಸ್ಥೆಯ ಕಾರ್ಯಸೂಚಿಗಳು ಕೆಲಸ ಮಾಡುತ್ತಿಲ್ಲ ಎಂಬುದು ನೋವಿನ ಸಂಗತಿ ಮತ್ತು ವಾಸ್ತವ.
ರೈತರು ತಮ್ಮ ಉತ್ಪನ್ನಗಳನ್ನು ಸ್ಥಳೀಯವಾಗಿಯೂ, ಪ್ರಾದೇಶಿಕವಾಗಿಯೂ ಮಾರಾಟ ಮಾಡುವ ಮೂಲಕ ನಮ್ಮ ಆರ್ಥಿಕ ಸದೃಢತೆ ಮತ್ತು ಸಾಮಾಜಿಕವಾಗಿ ಗೌರವದ ಬದುಕು ಪಡೆಯಬೇಕು ಆದರೆ ಮುಕ್ತ ಆರ್ಥಿಕ ನೀತಿಗಳಿಂದಾಗಿ ಮಾರುಕಟ್ಟೆಯ ಹಿಡಿತ ಕೃಷಿ ಉತ್ಪಾದಕರಿಂದ ಬಲಿಷ್ಠ ಬಂಡವಾಳಿಗರ ಕೈವಶವಾಗಿ ರೈತರು ತಮ್ಮ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ ಈ ದೇಶದಲ್ಲಿ ಕನಿಷ್ಠ 42,000 ಮಂಡಿಗಳಿರಬೇಕಾಗಿತ್ತು ಆದರೆ ವಸ್ತು ಸ್ಥಿತಿಯಲ್ಲಿ 7,000 ಕೃಷಿ ಮಂಡಿಗಳಿವೆ. ಅವುಗಳು ಕೂಡಾ ಶೇಕಡಾ 85ರಷ್ಟಿರುವ ಸಣ್ಣ ರೈತರ ಕೈಗೆ ದೊರಕದಷ್ಟು ದೂರದಲ್ಲಿದೆ. ಹಾಲಿನ ಮಾರುಕಟ್ಟೆ ಹೊರತುಪಡಿಸಿ ಬೇರಾವ ಮಾರುಕಟ್ಟೆಯು ರೈತರ ಕೈಗೆಟುಕುತ್ತಿಲ್ಲ.
ಗಾಂಧೀಜಿಯವರು ಪ್ರತಿಪಾದಿಸುತ್ತಿದ್ದ ವಿಕೇಂದ್ರೀಕೃತ ಆರ್ಥಿಕತೆ ಅದಕ್ಕೆ ಸಂಬಂಧಪಟ್ಟಂತೆ ನೀತಿಗಳು ಇಂದಿನ ತುರ್ತಾಗಿದೆ. ರೈತರು ಕೂಡ ಇಂದು ರಾಸಾಯನಿಕ ಮುಕ್ತ ಕೃಷಿಯ ಕಡೆಗೆ ತಮ್ಮ ನಡಿಗೆಯನ್ನು ಇಡಬೇಕಾದದ್ದು ಅನಿವಾರ್ಯವಾಗಿದೆ. ಇಂದಿಗೂ ಜಗತ್ತಿನಾದ್ಯಂತ ಸಣ್ಣ ಹಿಡುವಳಿದ್ದಾರರೇ ಹೆಚ್ಚು ಉತ್ಪಾದಿಸುತ್ತಿದ್ದಾರೆ ಮತ್ತು ಜಾಗತಿಕ ತಾಪಮಾನಕ್ಕೆ ಇವರು ಕೊಡುಗೆಯನ್ನು ಕೊಡುತ್ತಿಲ್ಲ. ಒಪ್ಪಂದದ ಕೃಷಿಯಲ್ಲಿ ಕೂಡ ರೈತರಿಗೆ ಭದ್ರತೆ ಕಾಣುತ್ತಿಲ್ಲ .
ಈ ಎಲ್ಲ ಕಾರಣ ರೈತರು ಯಾವ ಮಟ್ಟಕ್ಕೆ ವಂಚಿತರಾಗುತ್ತಿದ್ದಾರೆ ಎಂದರೆ ಒಂದು ಅಧಿಕೃತ ವರದಿಯಂತೆ ಕಳೆದ 16 ವರ್ಷಗಳಲ್ಲಿ ನಾವು ರೈತರು ನಮ್ಮ ದುಡಿಮೆಯಿಂದಾಗಿ ಬೆಳೆ ಬೆಳೆದ ಕಾರಣದಿಂದಾಗಿ ₹44 ಲಕ್ಷ ಕೋಟಿ ನಷ್ಟ ಹೊಂದಿದ್ದೇವೆ. ಈ ದೇಶದ ರೈತರ ಈ ದುಸ್ಥಿತಿಗೆ ಇಂತಹ ಹಲವಾರು ಕಾರಣಗಳಿರುವಾಗ ರೈತ ದಿನಾಚರಣೆಗೆ ಅರ್ಥ ಉಳಿದಿದೆಯೇ?
ಹಲವು ದಶಕಗಳ ಹಿಂದೆ ಚೌಧರಿ ಚರಣ್ ಸಿಂಗ್ ಅವರು ರೈತರ ಸ್ಥಿತಿಗತಿಯ ಸುಧಾರಣೆಯ ಬಗ್ಗೆ ಮಾತನಾಡುತ್ತಾ “ರೈತನ ಒಂದು ಕಾಲು ಹಳ್ಳಿಯಲ್ಲಿದ್ದರೆ ಇನ್ನೊಂದು ಕಾಲು ದಿಲ್ಲಿಯಲ್ಲಿದ್ದರೆ ಮಾತ್ರ ಅವನ ಉಳಿಗಾಲ ಉಂಟು, ಇಲ್ಲದಿದ್ದರೆ ರೈತರಿಗೆ ಉಳಿಗಾಲವಿಲ್ಲ” ಎಂದು ಹೇಳಿದ್ದರು. ಜಾಗತೀಕರಣದ ನಂತರ ರೈತ ಅಂತರರಾಷ್ಟ್ರೀಯ ಕೃಷಿ ನೀತಿಗಳ ಕಡೆಗೂ ಗಮನಹರಿಸಿಬೇಕಾದ ಅನಿವಾರ್ಯತೆ ಬಂದೊದಗಿದೆ.
ಮುಂದಿನ ಹಲವಾರು ದಶಕಗಳ ಕಾಲ ಸರಿಪಡಿಸಲಾಗದ, ಬದಲಾಯಿಸಲಾಗದ, ಪಾರ್ಲಿಮೆಂಟಿನ ಒಳಗಡೆ ಚರ್ಚೆಯಾಗದೆ ಒಪ್ಪಂದಗಳಾಗುತ್ತಿವೆ. ಈ ಮಾಹಿತಿ ರೈತರಿಗೂ ಸಾರ್ವಜನಿಕರಿಗೂ ಪಾರದರ್ಶಕವಾಗಿ ಸಿಗುತ್ತಿಲ್ಲ.
ರೈತ ಮಹಿಳೆಯ ಕಡೆಗಣನೆ
ರೈತರಿಗೆ ಗೌರವದ ಬದುಕಿನ ಹಕ್ಕಿಲ್ಲವೇ ಎನ್ನುವ ಪ್ರಶ್ನೆ ನಮ್ಮ ಮುಂದೆ ಬರುತ್ತದೆ. ಮುಗಿಸುವ ಮುನ್ನ ಮತ್ತೊಂದು ಪ್ರಶ್ನೆ- ರೈತ ದಿನಾಚರಣೆಯನ್ನು ಇಷ್ಟೊಂದು ಪ್ರಚಾರ ಪ್ರಚೂರಾಗಳೊಂದಿಗೆ ವಿಜ್ರಂಬಿಸುವ ವ್ಯವಸ್ಥೆ, ಪ್ರಭುತ್ವ, ಸಮುದಾಯ, ಗ್ರಾಮೀಣ ಮಹಿಳೆಯರ ʼವಿಶ್ವ ರೈತ ಮಹಿಳಾ ದಿನʼವಾದ ಅಕ್ಟೋಬರ್ 16ರನ್ನು ಏಕೆ ಕಡೆಗಣಿಸುತ್ತಿದೆ? ಆಕೆ ಅರ್ಹಳಲ್ಲವೆ? ಉಪನ್ಯಾಸಕಿ, ವೈದ್ಯೆ, ಲೇಖಕಿ ಎಂಬಂತೆ ರೈತ ಪದಕ್ಕೆ ವಿರೋಧ ಪದಗಳೇ ಇಲ್ಲದೆ ಕೃಷಿಯ ಹೆಚ್ಚಿನ ಜವಾಬ್ದಾರಿ ಹೊತ್ತಿರುವ ಈ ಮಹಿಳೆಯ ಕಡೆಗಣನೆ ನ್ಯಾಯವೇ?




