ಕಬ್ಬು ಹಾಗೂ ಹಾಲಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಲು ಆಗ್ರಹಿಸಿ ಕಳೆದ 51 ದಿನಗಳಿಂದ ಕರ್ನಾಟಕ ರಾಜ್ಯ ರೈತಸಂಘದ ವತಿಯಿಂದ ಮಂಡ್ಯದಲ್ಲಿ ಅನಿರ್ದಿಷ್ಟಾವದಿ ಅಹೋರಾತ್ರಿ ಧರಣಿ ನಡೆಯುತ್ತಿದ್ದು, ಇದುವರೆಗೆ ಸರ್ಕಾರ ರೈತರ ಬೇಡಿಕೆಗೆ ಸ್ಪಂದಿಸಿಲ್ಲವಾದ್ದರಿಂದ ಡಿ.28 ಮಧ್ಯಾಹ್ನ ಮಂಡ್ಯನಗರದಲ್ಲಿ ಸರ್ಕಾರದ ವಿರುದ್ಧ ವಿಶಿಷ್ಠ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತಸಂಘ ಕರೆ ನೀಡಿದ ಮಂಡ್ಯ ಬಂದ್ ಗೆ ಮಂಡ್ಯ ನಗರದ ವರ್ತರು, ಉದ್ಯಮಿಗಳು, ಅಟೋ ಚಾಲಕರು, ಲಾರಿ ಚಾಲಕರು, ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು. ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ರೈತರ ಬಗ್ಗೆ ಸದನದಲ್ಲಿ ಬಾಯಿ ಬಿಚ್ಚದ ರಾಜಕೀಯ ಪಕ್ಷಗಳು
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಯಾವುದೇ ರಾಜಕೀಯ ಪಕ್ಷದ ಜನಪ್ರತಿನಿಧಿಗಳು ಮಾತನಾಡುತ್ತಿಲ್ಲ, ಎಲ್ಲರೂ ಕೇವಲ ಭರವಸೆಗಳನ್ನು ನೀಡಿ ರೈತರನ್ನು ಯಾಮಾರಿಸುವ ಕೆಲಸ ಮಾಡುತ್ತಿ ದ್ಧಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ರೈತಸಂಘ ಹೋರಾಟ ಮಾಡುತ್ತಿದ್ದ ಸ್ಥಳಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜಕೀಯ ಪಕ್ಷಗಳ ಮುಖಂಡರು ಭೇಟಿ ನೀಡಿ, ವಿಧಾನಸಭೆ ಅಧಿವೇಶನದಲ್ಲಿ ದನಿ ಎತ್ತುವುದಾಗಿ ಭರವಸೆ ನೀಡಿದ್ದರು. ಆದರೆ ಇವರೆಲ್ಲರ ಭರವಸೆಗಳು ಹುಸಿಯಾಗಿವೆ. ಯಾವೊಬ್ಬ ನಾಯಕರು ರೈತರ ಪರವಾಗಿ ಮಾತನಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ರೈತ ಪರವಾಗಿ ಮಾತನಾಡುತ್ತೇವೆ ಎಂಬ ವಿಶ್ವಾಸ ಇಟ್ಟುಕೊಂಡಿದ್ದೇವು, ಆದರೆ ಅವು ಕೂಡ ಮಾತನಾಡುವ ಪ್ರಯತ್ನ ಮಾಡಿಲ್ಲ, ಎಲ್ಲರೂ ರಾಜಕೀಯ ಯಾತ್ರೆ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ಕಿಡಿಕಾರಿದರು.
ಜೆಡಿಎಸ್ ನಾಯಕರು ಪಂಚರತ್ನ ಯಾತ್ರೆ ಮಾಡುವುದನ್ನು ಬಿಟ್ಟು ರೈತರ ಪರವಾಗಿ ಸದನದಲ್ಲಿ ಹೋರಾಟ ಮಾಡಬೇಕಾಗಿತ್ತು. ಆದರೆ ಅವರಿಗೆ ರಾಜಕಾರಣವೇ ಮುಖ್ಯವಾಗಿದೆ, ರೈತರ ಸಮಸ್ಯೆ ಕಣ್ಣಿಗೆ ಕಾಣುತ್ತಿಲ್ಲ ಎಂದರು.
ಅಮಿತ್ ಶಾ ಗೂ ಕಪ್ಪು ಬಾವುಟ
ರೈತರ ಸಮಸ್ಯೆಗಳಿಗೆ ಸ್ಪಂದಿಸದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಗೆ ಬಂದಿದ್ದ ಸಂದರ್ಭದಲ್ಲಿ ಕಪ್ಪು ಬಾವುಟ ತೋರಿದ್ದೇವೆ, ಅದೇ ರೀತಿ ಕೇಂದ್ರ ಸಚಿವ ಅಮಿತ್ ಶಾ ಗೂ ಕಪ್ಪು ಬಾವುಟ ತೋರಿಸುವ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆಂದು ಹೇಳಿದರು.
ಗೋಷ್ಠಿಯಲ್ಲಿ ರೈತಮುಖಂಡರಾದ ಲಿಂಗಾಪ್ಪಾಜಿ, ಗ್ರಾ.ಪಂ. ಅಧ್ಯಕ್ಷ ಚಿದಾನಂದ, ಚಂದ್ರು, ವೆಂಕಟೇಶ್, ಎಂ.ವಿ.ಜಗದೀಶ್, ವಿಜಯ್ ಕುಮಾರ್ ಹಾಗೂ ಕುಮಾರ್ ಉಪಸ್ಥಿತರಿದ್ದರು.




