Monday, November 23, 2026

ಪ್ರಾಯೋಗಿಕ ಆವೃತ್ತಿ

56 ವರ್ಷಗಳ ನಂತರ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿದ ಹಿರಿಯ ವಿದ್ಯಾರ್ಥಿಗಳು !

ನಿವೃತ್ತಿ ವಯೋಮಾನದಲ್ಲಿ ಎಷ್ಟೇ ದೂರವಿದ್ದರೂ ಪ್ರತಿಯೊಬ್ಬರು ತಮ್ಮ ಊರು ಮತ್ತು ಶಾಲೆಯನ್ನು ಜ್ಞಾಪಿಸಿ ಕೊಳ್ಳುತ್ತಾರೆ ಎನ್ನುವುದನ್ನು ಕೇವಲ ಮಾತಿನಲ್ಲಿ ಕೇಳಿರುವುಂಟು. ಆದರೇ ಮಳವಳ್ಳಿ ತಾಲ್ಲೂಕಿನ ತಳಗವಾದಿಯಲ್ಲಿ ಬರೋಬರಿ 56 ವರ್ಷಗಳ ನಂತರ ತಾವು ಓದಿದ ಶಾಲೆಗೆ ಆಗಮಿಸಿದ ಹಿರಿಯ ವಿದ್ಯಾರ್ಥಿಗಳು, ಗುರುಗಳಿಗೆ ವಂದನೆ ಸಲ್ಲಿಸುವುದರ ಜೊತೆಗೆ ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಸ್ಥಾಪಿಸಿ ಶಾಲೆ ಅಭಿವೃದ್ದಿಗೆ ಕೈಜೋಡಿಸಿರುವುದು ವಿಶೇಷ ಎನಿಸಿದೆ.

ಮಳವಳ್ಳಿ ತಾಲ್ಲೂಕಿನ ತಳಗವಾದಿಯಲ್ಲಿ 1967-68ನೇ ನೇ ಸಾಲಿನಲ್ಲಿ ಸ್ಥಾಪನೆಗೊಂಡ ಸರ್ಕಾರಿ ಪ್ರೌಢ ಶಾಲೆಯ ಮೊದಲ ಬ್ಯಾಚ್‌ನಲ್ಲಿ ಓದಿದ 27 ವಿದ್ಯಾರ್ಥಿಗಳು ವಿವಿಧ ಉದ್ಯೋಗವನ್ನರಸಿ ಹೊರ ಜಿಲ್ಲೆಗಳಲ್ಲಿ ನೆಲೆಸಿದ್ದರು. 27 ಮಂದಿ ವಿದ್ಯಾರ್ಥಿಗಳಲ್ಲಿ 7 ಮಂದಿ ಈಗಗಲೇ ನಿಧನರಾಗಿದ್ದಾರೆ. ಉಳಿದ ಇಪ್ಪತ್ತು ಮಂದಿ ನಿವೃತ್ತರಾದ ನಂತರ ತಮ್ಮ ಸ್ವಗ್ರಾಮಕ್ಕೆ ಮರಳಿ, ಗ್ರಾಮಸ್ಥರು ಹಾಗೂ ಯುವಕರ ಸಹಾಯದೊಂದಿಗೆ ಹಿರಿಯ ವಿದ್ಯಾರ್ಥಿಗಳ ಸಂಘ ಸ್ಥಾಪಿಸಿ, ತಮಗೆ ಪಾಠ ಹೇಳಿದ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿದರು.

ಭಾನುವಾರ ನಡೆದ ಹಿರಿಯ ವಿದ್ಯಾರ್ಥಿಗಳ ಸಂಘ ಉದ್ಘಾಟನೆ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ತಳಗವಾದಿ ಪ್ರಕಾಶ್ ಮಾತನಾಡಿ, ಶಿಕ್ಷಕರ ವೃತ್ತಿ ಪವಿತ್ರ ಎನ್ನುವುದಕ್ಕೆ 56 ವರ್ಷಗಳ ನಂತರ ತಮಗೆ ಪಾಠ ಮಾಡಿದ ಶಿಕ್ಷಕರನ್ನು ಗುರುತಿಸಿ ಕರೆ ತಂದು ಗುರುವಂದನೆಯನ್ನು ಸಲ್ಲಿಸುತ್ತಿರುವುದು ಪ್ರಶಂಸನೀಯ ಎಂದರು.

ತಳಗವಾದಿ ಸರ್ಕಾರಿ ಪ್ರೌಢಶಾಲೆಗೆ ಈಗಗಲೇ 56 ವರ್ಷ ತುಂಬಿದ್ದು, ಅಮೃತಮಹೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ, ಪ್ರಾರಂಭದಿಂದ ಹಿಡಿದು ಇಲ್ಲಿಯವರೆಗೆ ಶಾಲೆಯಲ್ಲಿ ಓದಿದ ಸಾವಿರಾರು ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸುವುದು ಮತ್ತು ಶಿಕ್ಷಕರಾಗಿ ಸೇವೆ ಸಲ್ಲಿಸಿದ ಶಿಕ್ಷಕರನ್ನು ಕರೆತಂದು ಗುರುವಂದನೆಯನ್ನು ಸಲ್ಲಿಸುವ ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಆಯೋಜನೆ ಮಾಡಲು ಈಗಗಲೇ ಪೂರ್ವ ಸಿದ್ದತೆಗಳನ್ನು ನಡೆಸಲಾಗುತ್ತಿದೆ ಎಂದರು.

ನಿವೃತ್ತ ಶಿಕ್ಷಕರಾದ ಎಂ ಮುತ್ತಯ್ಯ, ಎಂ ವೀರೇಗೌಡ, ಹೊನ್ನಪ್ಪ, ನಾಗರಾಜು, ಸುಂದರೇಶ್ ಅವರನ್ನು ಹಿರಿಯ ವಿದ್ಯಾರ್ಥಿಗಳು ಅಭಿನಂದಿಸಿ ಗೌರವಿಸಿದರು. ನಿವೃತ್ತ ಶಿಕ್ಷಕರನ್ನು ಕಾರ್ಯಕ್ರಮಕ್ಕೂ ಮುನ್ನಾ ಜಾನಪದ ಕಲಾ ಮೇಳದೊಂದಿಗೆ ಮೆರವಣಿಗೆ ನಡೆಸಿ ವೇದಿಕೆಗೆ ಕರೆ ತರಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಬಿ ಎಸ್ ಮಹದೇವಸ್ವಾಮಿ, ಗ್ರಾ ಪಂ ಅಧ್ಯಕ್ಷ ಟಿ ಎಸ್ ಕಾಳಯ್ಯ, ಕರ್ನಾಟಕ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಬಿ.ಮಹದೇವು, ರಂಗಭೂಮಿ ಕಲಾವಿದೆ ಭಾಗ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ