Wednesday, November 18, 2026

ಪ್ರಾಯೋಗಿಕ ಆವೃತ್ತಿ

ಸಮಾಜದ ಏರಿಳಿತ ಚಿತ್ರಿಸುವ ಸಾಹಿತಿಗಳು ಸಾಮಾಜಿಕ ವೈದ್ಯರು : ಡಾ.ಹೆಚ್.ಆರ್.ಕನ್ನಿಕಾ

ಸಾಹಿತಿಗಳು ಸಮಾಜದ ಪ್ರತಿನಿಧಿಗಳು. ಇವರು ಸಾಮಾಜಿಕ ಕ್ರಾಂತಿ, ಪಲ್ಲಟ, ಸಮಾಜದ ಏರಿಳಿತಗಳನ್ನು ಬರೆವಣಿಗೆ ಎನ್ನುವ ಸೂಕ್ಷ್ಮದರ್ಶಕದಿಂದ ವೀಕ್ಷಿಸಿ ಕೃತಿಯೆನುವ ನಿಖರ ಫಲಿತಾಂಶ ಕೊಡುವ ಸಾಮಾಜಿಕ ವೈದ್ಯರು ಎಂದು ಮಂಡ್ಯ ನಗರ 5 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಡಾ.ಹೆಚ್.ಆರ್. ಕನ್ನಿಕಾ ಅಭಿಪ್ರಾಯಪಟ್ಟರು.

ಮಂಡ್ಯನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಡ್ಯ ನಗರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ 5ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅವರು ಮಾತನಾಡಿದರು.

ಆದಿಕವಿ ಪಂಪನಿಂದ ನಮ್ಮ ಸಮಕಾಲೀನ ಅನೇಕ ಮಹಾಕವಿಗಳವರೆಗೆ ಎಲ್ಲರೂ ಕನ್ನಡವನ್ನೇ ಪ್ರೀತಿಸಿದವರು. ನಮ್ಮ ನೆಲದಲ್ಲಿ ಸಾಮಾಜಿಕ, ಧಾರ್ಮಿಕ, ರಾಜಕೀಯ, ಜನಪದ, ವೈಜ್ಞಾನಿಕ ಮೊದಲಾದ ಕ್ಷೇತ್ರಗಳ ಸಾಮಾಜಿಕ ಪರಿವರ್ತನೆ ಹಾಗೂ ಸಾಮೂಹಿಕ ಬದಲಾವಣೆ ಹಾಗೂ ಪ್ರಗತಿ ನಮಗೆ ಗೋಚರವಾಗುವುದು ಸಾಹಿತ್ಯಕೃತಿಗಳಿಂದ ಎಂದು ತಿಳಿಸಿದರು.

ಸಾಹಿತಿಗಳು ಅಂದರೆ ಕಂಡದ್ದನ್ನು, ಕೇಳಿದ್ದನ್ನು ಅನುಸರಿಸಿದುದನ್ನು ಅಕ್ಷರರೂಪದಲ್ಲಿ ತರುವವರು.ಸಾಹಿತ್ಯ ಬಿಟ್ಟು ಸಮಾಜವಿಲ್ಲ, ಸಮಾಜ ಬಿಟ್ಟು ಸಾಹಿತ್ಯವಿಲ್ಲ. ಸಾಹಿತ್ಯ ಎಂದರೆ ಜನಜೀವನದ ಪ್ರತಿಬಿಂಬವಾಗಿದೆ. ‘ಕನ್ನಡವೆಂದರೆ ಬರಿನುಡಿಯಲ್ಲ, ಹಿರಿದಿದೆ ಅದರರ್ಥ’ ಎಂಬ ನಮ್ಮ ಹಿರಿಯಕವಿಗಳ ಮಾತನ್ನು ನೆನೆಯೋಣ. ಕನ್ನಡ ನಮ್ಮ ಮಾತೃಭಾಷೆ ಎಂಬುದನ್ನು ಮರೆಯದಿರೋಣ. ಯಾವ ಭಾಷೆಯನ್ನಾದರೂ ಕಲಿಯೋಣ. ಆದರೆ ಕನ್ನಡವನ್ನು ಮೆರೆಸೋಣ. ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಬೇಕು. ನೆನಪಿರಲಿ, ‘ಮೊದಲು ತಾಯಿಹಾಲು ಕುಡಿದ ನಾವು ಲಲ್ಲೆಯಿಂದ ಅದನ್ನು ನೆನೆಯೋಣ’. ಮರೆತರೆ ಅದು ಮಾತೃದ್ರೋಹವಾಗುತ್ತದೆ ಎಂದು ಎಚ್ಚರಿಸಿದರು.

ಎರಡು ಸಾವಿರ ವರುಷಕ್ಕೂ ಮೀರಿದ ಇತಿಹಾಸವುಳ್ಳ ನಮ್ಮ ಕನ್ನಡ ಭಾಷೆಯನ್ನು ಆಡುವವರ ಹೆಗ್ಗಳಿಕೆಯೆಂದರೆ ಇವರೆಲ್ಲರೂ ‘ಕುರಿತೋದದೆಯಂ ಕಾವ್ಯಪ್ರಯೋಗ ಪರಿಣತಿಮತಿಗಳ್’. ಆ ಕಾರಣವಾಗಿಯೇ ನನ್ನಂತಹವರೂ ಸಾಹಿತ್ಯಾಭಿಮಾನಿಗಳಾಗಿ ಪರಂಪರೆ ಮುಂದುವರಿಸುತ್ತಿದ್ದಾರೆ. ಖಂಡಿತಕ್ಕೂ ಇವೆಲ್ಲದಕ್ಕೂ ಮೂಲ ಪ್ರೇರಣೆ ಕನ್ನಡ ಸಾಹಿತ್ಯ ಪರಿಷತ್ತು. ನಾಲ್ವಡಿಯವರ ಕನಸನ್ನು ನನಸಾಗಿಸಲು ಕನ್ನಡ ಸಾಹಿತ್ಯ ಪರಿಷತ್ತು ದುಡಿಯುತ್ತಿದೆ, ಪ್ರೋತ್ಸಾಹಿಸುತ್ತಿದೆ, ಶತಮಾನ ಮೀರಿ ಮುನ್ನಡೆಯತ್ತಿದೆ ಎಂದರು.

ಓದುವಿಕೆಯ ಆನಂದ ಕಿತ್ತುಕೊಂಡ ಸಾಮಾಜಿಕ ಜಾಲತಾಣಗಳು 

ಇಂದು ಟಿ.ವಿ, ಮೊಬೈಲ್, ಕಂಪ್ಯೂಟರ್ ಮೊದಲಾದ ಮಾಧ್ಯಮಗಳು ಜನರನ್ನು ಓದುವಿಕೆಯ ಆನಂದವನ್ನು ಅನುಭವಿಸಲು ಬಿಡುತ್ತಿಲ್ಲ. ‘ದೇಶ ಸುತ್ತು ಕೋಶ ಓದು’ ಗಾದೆ ಮಾತು ಹಳೆಯದಾಗಿದೆ. ಈಗೇನಿದ್ದರೂ ‘ಮೊಬೈಲ್ ನೋಡು, ಲ್ಯಾಪ್‌ಟಾಪ್ ಕುಟ್ಟು’ ಎಂದಾಗಿದೆ. ಇಂದಿನ ಹಾಗೂ ಮುಂದಿನ ಜನಾಂಗವನ್ನು ಸಾಹಿತ್ಯದತ್ತ ಆಕರ್ಷಿಸಲು ಹಿರಿಯರೆಲ್ಲರು ಒಂದಾಗಿ ಚಿಂತಿಸಬೇಕಾಗಿದೆ.

ಮಂಡ್ಯದಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳು ನಿತ್ಯ ನಿರಂತರವಾಗಿದೆ. ಹಲವಾರು ಸಂಘ ಸಂಸ್ಥೆಗಳು ಈ ಕಾರ್ಯಕ್ಕೆ ನಿರಂತರವಾಗಿ ತೊಡಗಿಸಿಕೊಂಡಿವೆ. ‘ಮಂಡ್ಯ ಅಂದರೆ ಇಂಡಿಯಾ’ ಎಂಬುದು ಮಂಡ್ಯದಲ್ಲಿ ನಡೆಯುತ್ತಿದ್ದ ಚಟುವಟಿಕೆಗಳಿಂದಲೇ ಬಂದ ಹೆಸರಾಗಿತ್ತು. ನಿತ್ಯಸಚಿವರೆಂದು ಕುವೆಂಪುರವರಿಂದ ಗೌರವಿಸಲ್ಪಟ್ಟ ಕೆ.ವಿ.ಶಂಕರಗೌಡರನ್ನು ನಾನೀ ಸಮಯದಲ್ಲಿ ನೆನೆಯುವೆ ಎಂದರು.

ಸಾಹಿತ್ಯ, ಸಂಗೀತ, ನಾಟ್ಯ, ರಂಗಭೂಮಿ, ಜನಪದ, ಗಮಕ, ಹರಿಕಥೆ, ಸಂಗೀತವಾದ್ಯ, ಚಿತ್ರಕಲೆ, ಯಕ್ಷಗಾನ, ಸಂಘಟನೆ…. ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಮಂಡ್ಯವನ್ನು ನಾಡಿಗೆ ಪರಿಚಯಿಸಲು ಪ್ರಯತ್ನಿಸೋಣ.ಬೆಳೆಸೋಣ. ಕನ್ನಡ ಪರ ಹೋರಾಟ ಮಾಡುವ ಸಂಘಟನೆಗಳನ್ನು ಪ್ರೋತ್ಸಾಹಿಸೋಣ. ಇಂದು, ಮುಂದು, ಎಂದೆಂದೂ ನಮ್ಮ ತನು ಕನ್ನಡ, ನಮ್ಮ ಮನ ಕನ್ನಡ, ನಮ್ಮ ಧನ ಕನ್ನಡ, ನಮ್ಮ ಕುಲ ಕನ್ನಡವಾಗಲಿ ನಾವು ಕನ್ನಡಿಗರಾಗಿಯೇ ಇರೋಣ ಎಂದರು.

ಸ್ತ್ರೀಯರ ಸ್ಥಾನಮಾನ ಬದಲಾಗುತ್ತಿದೆ. ತೊಟ್ಟಿಲು ತೂಗುವ ಕೈ ದೇಶವನ್ನು ಆಳಬಲ್ಲುದು ಎಂಬುದನ್ನು ಮಹಿಳೆಯರು ನಿಜವಾಗಿಸುತ್ತಿದ್ದಾರೆ. ನಮ್ಮ ಮಂಡ್ಯದಲ್ಲಂತೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಮಹಿಳೆಯರ ಸಾಹಸಗಾಥೆಗಳನ್ನು ಕೇಳುವಾಗ ಅಭಿಮಾನ ಮೂಡುತ್ತದೆ. ಮಂಡ್ಯದ ಸಾಹಿತಿಗಳು, ಕಲಾವಿದರು, ಹೋರಾಟಗಾರರು ಈ ನಿಟ್ಟಿನಲ್ಲಿ ಸದಾ ಮುಂಚೂಣಿಯಲ್ಲಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ನುಡಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಂ ರಾಯಪುರ ಸಮಾರಂಭ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಅಶೋಕ್ ಜಯರಾಂ, ಜಿ.ಪಂ.ಸಿಇಓ ಶಾಂತ ಎಲ್ ಹುಲ್ಮನಿ, ಕಸಾಪ ಜಿಲ್ಲಾಧ್ಯಕ್ಷ ರವಿಕುಮಾರ ಚಾಮಲಾಪುರ, ಕೋಶಾಧ್ಯಕ್ಷ ಅಪ್ಪಾಜಪ್ಪ, ಹುಸ್ಕೂರು ಕೃಷ್ಣೇಗೌಡ,  ಲೇಖಕಿ ಸುಮಾರಾಣಿ, ಹೊಳಲು ಶ್ರೀಧರ್ ಸೇರಿದಂತೆ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ