ಸಾರ್ವಜನಿಕ ಉದ್ಯಾನವನಗಳಲ್ಲಿ ಪರಿಸರ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ನಾಗರೀಕರು ಸಹಕರಿಸಬೇಕಿದೆ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಅಶೋಕ್ ಜಯರಾಂ ಹೇಳಿದರು.
ಮಂಡ್ಯ ನಗರದ ಹೌಸಿಂಗ್ ಬೋರ್ಡ್ ನಲ್ಲಿರುವ ಬೋರೇಗೌಡ ಉದ್ಯಾನವನದಲ್ಲಿ ಎಸ್.ಡಿ.ಜಯರಾಂ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ಸ್ವಚ್ಛ ಮಂಡ್ಯ 10ನೇ ವಾರದ ಶ್ರಮದಾನ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಗರದ ಹಲವು ಬಡಾವಣೆಗಳಲ್ಲಿರುವ ಸರ್ಕಾರಿ ಉದ್ಯಾನವನಗಳು ತಂಬಾಕು ಮುಕ್ತ, ಪ್ಲಾಸ್ಟಿಕ್ ಮುಕ್ತ ತಾಣಗಳಾಗಿ, ಸ್ವಚ್ಛತೆಯಿಂದ ಕೂಡಿರುವಂತೆ ಸ್ಥಳೀಯ ನಾಗರೀಕರು ಹಾಗೂ ಯುವಜನತೆ ನೋಡಿಕೊಳ್ಳುವುದು ಆವಶ್ಯವಿದೆ.ಉತ್ತಮ ಆರೋಗ್ಯಕ್ಕಾಗಿ ಉದ್ಯಾನವನಗಳ ರಕ್ಷಣೆ ಮಾಡಿಕೊಳ್ಳುವ ಸಂಕಲ್ಪ ತೊಡಬೇಕಿದೆ ಎಂದು ನುಡಿದರು.

ಇಂದು ಹೌಸಿಂಗ್ಬೋರ್ಡ್ ನ ಬೋರೇಗೌಡ ಉದ್ಯಾವನದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯ ನಾಗರೀಕರ ಶ್ರಮದಾನದಿಂದ ಸಾಕಷ್ಟು ಪ್ಲಾಸ್ಟಿಕ್ ಮತ್ತು ಅನಗತ್ಯ ತ್ಯಾಜ್ಯವನ್ನು ಸಂಗ್ರಹಿಸಿದ್ದೇವೆ.20 ಕೆ.ಜಿ ಗೂ ಹೆಚ್ಚು ಪ್ಲಾಸ್ಟಿಕ್ ವಸ್ತು ಸಂಗ್ರಹವಾಗಿದೆ ಎಂದರು.
ಸ್ಥಳೀಯ ನಾಗರೀಕರಿಗೆ, ವಾಯುವಿಹಾರಿಗಳಿಗೆ ಉಚಿತವಾಗಿ ಬಿಪಿ, ಶುಗರ್ ತಪಾಸಣೆ ಮಾಡಿ ಮಾಹಿತಿ ನೀಡಲಾಗಿದೆ, ನಾಗರೀಕರು ಉತ್ತಮ ರೀತಿಯಲ್ಲಿ ಸ್ಪಂದಿಸಿ ಆರೋಗ್ಯ ತಪಾಸಣೆ ಕಾರ್ಯ ಸದುಪಯೋಗ ಪಡಿಸಿಕೊಂಡರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಮೋರ್ಚಾ ಅಧ್ಯಕ್ಷ ವಿವೇಕ್, ಗ್ರಾ.ಪಂ. ಸದಸ್ಯ ಅನಿಲ್, ರವಿ, ಮಧು, ನರ್ಸಿಂಗ್ ವಿದ್ಯಾರ್ಥಿ ಸಮೂಹ, ಸ್ಥಳೀಯ ನಾಗರೀಕರು ಪಾಲ್ಗೊಂಡಿದ್ದರು.




