Wednesday, November 18, 2026

ಪ್ರಾಯೋಗಿಕ ಆವೃತ್ತಿ

ಅಕ್ರಮ ಹುಕ್ಕಾ ಬಾರ್ : ಪೋಲಿಸ್ ಮತ್ತು ಆರೋಗ್ಯಾಧಿಕಾರಿಗಳ ದಾಳಿ

ಕೆಫೆ ಪಾರ್ಟಿ ಎಂದು ಉದ್ದಿಮೆ ಪರವಾನಿಗೆ ಪಡೆದು ಅಕ್ರಮವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದವರ ಮೇಲೆ ಮದ್ದೂರು ಪೋಲೀಸರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣ ದಾಖಲು ಮಾಡಿರುವ ಘಟನೆ ನಡೆದಿದೆ.

ಮದ್ದೂರು ಪಟ್ಟಣದ ಮರಕಾಡುದೊಡ್ಡಿ ಗೇಟ್ ನಲ್ಲಿರುವ ಪಾರ್ಟಿ ವಿಂಗ್ಸ್ ಕೆಫೆಯಲ್ಲಿ ಅಕ್ರಮವಾಗಿ ಹುಕ್ಕಾ ಬಾರ್ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಹಿನ್ನಲೆಯಲ್ಲಿ ಗುರುವಾರ ಪೋಲಿಸರು ಮತ್ತು ಆರೋಗ್ಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದರು.ಈ ಸಂದರ್ಭದಲ್ಲಿ ಹುಕ್ಕಾ ಬಾರ್ ನಲ್ಲಿದ್ದ ಯಂತ್ರಗಳು ಮತ್ತು ತಂಬಾಕು ವಸ್ತುಗಳನ್ನು ವಶಪಡಿಸಿಕೊಂಡರು.

ಗೊರವನಹಳ್ಳಿ ಗ್ರಾಮ ಪಂಚಾಯಿತಿಯಿಂದ ಕೆಫೆ ಪಾರ್ಟಿ ಹಾಲ್ ತೆರೆಯಲು ರಾಮನಗರದ ಕರಣ್ ಎಂಬುವವರು ಉದ್ದಿಮೆ ಪರವಾನಿಗೆ ಪಡೆದುಕೊಂಡಿದ್ದರು. ಆದರೆ, ಈ ಕೆಫೆಯಲ್ಲಿ ಅಕ್ರಮವಾಗಿ ಹುಕ್ಕಾ ಬಾರ್ ನಡೆಯುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿತ್ತು. ಈ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆಗೆ ಇಳಿದ ಮದ್ದೂರು ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ.ರವೀಂದ್ರ ದಿಢೀರ್ ದಾಳಿ ನಡೆಸಿದ ಸಂದರ್ಭದಲ್ಲಿ ಮೂವರು ಯುವಕರು ಹುಕ್ಕಾ ಬಾರ್ ನಲ್ಲಿ ಇರುವುದು ಕಂಡು ಬಂತು.

ದಾಳಿ ವೇಳೆ ತಂಬಾಕು ಸೇವನೆಗೆ ಪ್ರೇರೇಪಿಸುವ ಪೋಟೋಗಳನ್ನು ಹಾಕುವ ಮೂಲಕ ಕಾಯ್ದೆ ಉಲ್ಲಂಘನೆ ಮಾಡಲಾಗಿತ್ತು. ಅಲ್ಲದೆ ಕೋಟ್ಪಾ ಕಾಯ್ದೆ ನಿಯಮಗಳನ್ನು ಉಲ್ಲಂಘನೆ ಮಾಡಿ ತಂಬಾಕು ಉತ್ಪನ್ನಗಳನ್ನು ಶೇಖರಿಸಿದ್ದು ಕಂಡು ಬಂತು.

ಒಂದೇ ಹುಕ್ಕಾ ಸೇವನೆ ಮಾಡುವ ಯಂತ್ರದಿಂದ ಐದಾರು ಮಂದಿ ಸೇವನೆ ಮಾಡುತ್ತಿದ್ದಾರೆ.ಇದು ರೋಗ ಹರಡಲು ಕಾರಣವಾಗಿದೆ.ಮತ್ತು ಆಹಾರ ಸುರಕ್ಷತಾ ಪ್ರಮಾಣ ಪತ್ರ ಪಡೆಯದೇ, ಹಳೆಯ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ನೀಡಲಾಗುತ್ತಿತ್ತು. ಅಲ್ಲದೆ ಅಕ್ರಮವಾಗಿ ತಂಬಾಕು ಉತ್ಪನ್ನಗಳನ್ನು ಶೇಖರಿಸಿದ್ದನ್ನು ಪೋಲಿಸರು ಪತ್ತೆ ಹಚ್ಚಿದರು.

ಮದ್ದೂರು ಮತ್ತು ಭಾರತೀನಗರ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ಹುಕ್ಕಾ ಬಾರ್ ತೆರೆಯಲಾಗಿತ್ತು ಎಂದು ಸಾರ್ವಜನಿಕರ ಆರೋಪದ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ.

ಕಾರ್ಯಾಚರಣೆಯಲ್ಲಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಸಂಜಯ್, ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ.ಬೆಟ್ಟಸ್ವಾಮಿ, ಅಬಕಾರಿ ಉಪ ನಿರೀಕ್ಷಕ ಶಿವಣ್ಣ, ಸಿಡಿಪಿಓ ಪ್ರದೀಪ್, ಸಬ್ ಇನ್ಸ್‌ಪೆಕ್ಟರ್ ಉಮೇಶ್, ತಂಬಾಕು ನಿಷೇಧ ಸಮಿತಿ ಸಹಾಯಕ ನಿರ್ದೇಶಕ ತಿಮ್ಮರಾಜು ಮತ್ತಿತರರು ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ