Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ಜಿಲ್ಲೆಗೆ ಎಐಸಿಸಿ ವೀಕ್ಷಕ ಚೌಧರಿ ಭೇಟಿ

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ ರಾಜ್ಯದ ಪ್ರತಿ ಜಿಲ್ಲೆಯ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಲು ಹಾಗೂ ಪಕ್ಷವನ್ನು ಬಲಪಡಿಸಿ ಜಯಗಳಿಸಲು ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಕುರಿತು ಪರಿಶೀಲನೆ ನಡೆಸಿ ಎಐಸಿಸಿ ಮಟ್ಟದ ವೀಕ್ಷಕರನ್ನು ನಿಯೋಜಿಸಿದೆ.

ಮಂಡ್ಯ ಜಿಲ್ಲೆಗೆ ಎಐಸಿಸಿ ವೀಕ್ಷಕರಾಗಿ ನಿಯುಕ್ತಿಗೊಂಡಿರುವ ನೆರೆಯ ತೆಲಂಗಾಣ ರಾಜ್ಯದ ಕುಸುಮ್ ಕುಮಾರ್ ಚೌಧರಿ ಇಂದು ಜಿಲ್ಲೆಗೆ ಭೇಟಿ ನೀಡಿದ್ದಾರೆ. ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣಕ್ಕೆ ಭೇಟಿ ನೀಡಿ ಔಪಚಾರಿಕವಾಗಿ ಸಭೆ ನಡೆಸಿದ್ದಾರೆ.

ಚುನಾವಣೆಗೆ ಸ್ಪರ್ಧಿಸಲು ಪಕ್ಷಕ್ಕೆ ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳಾದ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಮುಖಂಡರಾದ ವಿಜಯರಾಮೇಗೌಡ, ಎಂ.ಡಿ.ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್ ಸೇರಿದಂತೆ ಪ್ರಮುಖ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯಲಿರುವ ಚುನಾವಣೆ ಸಂಬಂಧ ಪಕ್ಷದ ಬಲವರ್ಧನೆ, ಅಭ್ಯರ್ಥಿ ಗೆಲುವಿಗೆ ಅಗತ್ಯ ಮಾನದಂಡ ರೂಪಿಸುವುದು, ಪಕ್ಷದ ಪರವಾಗಿ ಮತದಾರರನ್ನು ಸೆಳೆಯಲು ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಮಾಹಿತಿ ಕಲೆ ಹಾಕಿ ಕೆಪಿಸಿಸಿ ಹಾಗೂ ಎಐಸಿಸಿಗೆ ಮಾಹಿತಿ ನೀಡುವುದು ವೀಕ್ಷಕರ ಕಾರ್ಯವಾಗಿದೆ.

ಕೆ.ಆರ್.ಪೇಟೆ ಪ್ರತಿನಿಧಿಸುತ್ತಿರುವ ರಾಜ್ಯದ ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡರು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಮೂಲಕ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ರಾಜಕೀಯ ಚರ್ಚೆಗೆ ಪಕ್ಷದ ವರಿಷ್ಠರು ಮಣೆ ಹಾಕಬಾರದು, ಬಿ ಫಾರಂಗಾಗಿ ಅರ್ಜಿ ಸಲ್ಲಿಸಿರುವ ಆರು ಮಂದಿ ಆಕಾಂಕ್ಷಿತರ ಪೈಕಿ ಪೈಕಿ ಯಾರಿಗೆ ಅವಕಾಶ ಕಲ್ಪಿಸಿದರೂ ಅಭ್ಯರ್ಥಿ ಗೆಲುವಿಗೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತೇವೆ. ಒಂದೊಮ್ಮೆ ಒತ್ತಡಕ್ಕೆ ಮಣಿದು ಸಚಿವ ನಾರಾಯಣಗೌಡ ಅವರಿಗೆ ಮಣೆ ಹಾಕಿದರೆ ಅವರನ್ನು ಸೋಲಿಸಲು ಮುಂದಾಗುತ್ತೇವೆ ಎಂದು ಆಕಾಂಕ್ಷಿತರು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಕೃಷ್ಣ, ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ಚಿನಕುರುಳಿ ರಮೇಶ್ ಸೇರಿದಂತೆ ಹಲವು ಪ್ರಮುಖರು ಭಾಗಿಯಾಗಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ