Saturday, November 21, 2026

ಪ್ರಾಯೋಗಿಕ ಆವೃತ್ತಿ

ನಾಯಿಯನ್ನು ಹೊತ್ದೊಯ್ದ ಚಿರತೆ : ಕೆ.ಬೆಳ್ಳೂರಿನಲ್ಲಿ ಚಿರತೆ ಸೆರೆಗೆ ಬೋನಿಟ್ಟ ಅರಣ್ಯ ಸಿಬ್ಬಂದಿ

ವರದಿ : ನ.ಲಿ.ಕೃಷ್ಣ

ಮದ್ದೂರು ತಾಲ್ಲೂಕಿನ ಕೆ.ಬೆಳ್ಳೂರು ಗ್ರಾಮದಲ್ಲಿ ಕಳೆದ ರಾತ್ರಿ ಪತ್ಯೇಕ್ಷವಾಗಿದ್ದ ಚಿರತೆಯೂ ಸಾಕು ನಾಯಿಯೊಂದನ್ನು ಹೊತ್ತೊಯ್ದ ಘಟನೆ ಹಿನ್ನೆಲೆಯನ್ನು ಗ್ರಾಮಸ್ಥರು ಭಯ ಭೀತರಾಗಿದ್ದು, ಚಿರತೆಯ ಸೆರೆಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬೋನನ್ನು ಇಟ್ಟಿದ್ದಾರೆ.

ಈ ಕುರಿತಂತೆ ಅರಣ್ಯಾಧಿಕಾರಿ ಗವಿಯಪ್ಪ ನುಡಿ ಕರ್ನಾಟಕ.ಕಾಮ್ ನೊಂದಿಗೆ ಮಾತನಾಡಿ, ಚಿರತೆ ಪ್ರತ್ಯಕ್ಷದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇನೆ. ಚಿರತೆ ಸೆರೆಗಾಗಿ ಗ್ರಾಮದಲ್ಲಿ ಬೋನೊಂದನ್ನು ಇಟ್ಟಿದ್ದೇವೆ, ಆದರೆ ಗ್ರಾಮಸ್ಥರು ವನ್ಯ-ಮೃಗಗಳ ಜೊತೆ ಹೇಗೆ ವರ್ತಿಸಬೇಕು ಹಾಗೂ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳೇನು ಎಂಬುದರ ಬಗ್ಗೆ ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿ, ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದರು.

3-4 ಚಿರತೆಗಳಿರುವ ಸಾಧ್ಯತೆ ಇದೆ 

ಮದ್ದೂರು ತಾಲ್ಲೂಕಿನ ಕೆ.ಬೆಳ್ಳೂರು, ಹೊನ್ನಲಗೆರೆ, ಕೂಳಗೆರೆ ಹಾಗೂ ಬನ್ನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಅರಣ್ಯ ಪ್ರದೇಶ ಇರುವುದರಿಂದ ಈ ಭಾಗದಲ್ಲಿ ಸುಮಾರು ಮೂರ್‍ನಾಲ್ಕು ಚಿರತೆಗಳಿರುವ ಸಾಧ್ಯತೆ ಇದೆ. ಹಾಗಾಗಿ ಗ್ರಾಮಸ್ಥರು, ರೈತರು, ಕೃಷಿ ಕೂಲಿಕಾರರು ಜಾಗ್ರತೆವಹಿಸಬೇಕು ಎಂದು ತಿಳಿಸಿದರು.

ಗ್ರಾಮಸ್ಥರು ಸಾಧ್ಯವಾದಷ್ಟು ಗುಂಪು ಗುಂಪಾಗಿ ಓಡಾಡಬೇಕು, ಅಲ್ಲದೇ ಶಬ್ದ ಮಾಡಿಕೊಂಡು ಓಡಾಡುವುದರಿಂದ ಚಿರತೆ ದಾಳಿಯನ್ನು ತಪ್ಪಿಸಬಹುದು. ಚಿರತೆಯೂ ಸಂಜೆ 6 ಗಂಟೆಯ ನಂತರ ಆಹಾರಕ್ಕೆ ಹುಟುಕಾಟ ನಡೆಸುತ್ತದೆ, ಆದ್ದರಿಂದ ರಾತ್ರಿ ವೇಳೆಯಲ್ಲಿ ಸಾರ್ವಜನಿಕರು ಕತ್ತಲೆಯಲ್ಲಿ ಓಡಾಟ ನಡೆಸುವುದನ್ನು ಕಡಿಮೆ ಮಾಡಬೇಕು. ಆದಷ್ಟು ಮನೆಯ ಮುಂಭಾಗದಲ್ಲಿ ಲೈಟ್ ಗಳನ್ನು ಆನ್ ಮಾಡಿಕೊಳ್ಳುವುದು ಸೂಕ್ತ ಎಂದು ನುಡಿಕರ್ನಾಟಕ.ಕಾಮ್ ಮಾಹಿತಿ ನೀಡಿದರು.

ಹಗಲಿನಲ್ಲೆ ಪಂಪ್ ಸೆಟ್ ಗಳಿಗೆ ಕರೆಂಟ್ ನೀಡುವುದು ಸೂಕ್ತ 

ಪ್ರಸ್ತುತ ಪಂಪ್ ಸೆಟ್ ಗಳಿಗೆ ರಾತ್ರಿ ವೇಳೆ ವಿದ್ಯುತ್ ನೀಡುತ್ತಿರುವುದರಿಂದ ಗದ್ದಗಳಿಗೆ ನೀರು ಹಾಯಿಸಲು ಬರುವ ರೈತರ ಮೇಲೆ ದಾಳಿಗಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಹಗಲಿನಲ್ಲೆ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ನೀಡುವುದು ಸೂಕ್ತ ಈ ಬಗ್ಗೆ ಸಂಬಂಧಿಸಿ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಅರಣ್ಯಧಿಕಾರಿ ಗವಿಯಪ್ಪ ತಿಳಿಸಿದರು.

ಮೂಲ ಸೌಲಭ್ಯಗಳನ್ನು ಒದಗಿಸಲು ಆಗ್ರಹ 

ಮದ್ದೂರು ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗ್ರಾಮಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗ್ರಾಮದಲ್ಲಿ ಬೀದಿದೀಪಗಳು ಕೆಟ್ಟು ಹೋಗಿದ್ದು, ರಾತ್ರಿ ವೇಳೆಯಲ್ಲಿ ಓಡಾಡುವುದೇ ಕಷ್ಟವಾಗಿದೆ, ಹೀಗಿರುವಾಗ ಚಿರತೆಗಳ ದಾಳಿ ನಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಬೀದಿದೀಪಗಳನ್ನು ಸರಿಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದು, ಪಂಪ್ ಸೆಟ್ ಗಳಿಗೆ ಹಗಲು ಹೊತ್ತಿನಲ್ಲೆ ವಿದ್ಯುತ್ ನೀಡುವಂತೆಯೂ ಒತ್ತಾಯಿಸಿದ್ದಾರೆ.

ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿ

ಚಿರತೆಗಳ ಹಾವಳಿ ಮೇಲಿಂದ ಮೇಲೆ ನಡೆಯಯುತ್ತಲೆ ಇವೆ, ಹಲವು ಕಡೆಗಳಲ್ಲಿ ಮೇಕೆ, ಕುರಿಗಳು, ನಾಯಿಗಳನ್ನಲ್ಲದೇ ಮನುಷ್ಯರ ಮೇಲೆಯೂ ಚಿರತೆಗಳು ದಾಳಿ ನಡೆಸಿ ಕೊಲ್ಲುವುದಲ್ಲದೆ, ಮಾರಣಾಂತಿಕವಾಗಿ  ಗಾಯಗೊಳಿಸಿರುವ ಕೃತ್ಯಗಳು ನಡೆದಿವೆ. ಆದ್ದರಿಂದ ಜಿಲ್ಲಾಡಳಿತ ಸಂಬಂಧಿಸಿದ ಇಲಾಖೆಗಳ ಎಲ್ಲಾ ಅಧಿಕಾರಿಗಳ ಸಭೆ ಕರೆದು ದಾಳಿಗಳನ್ನು ನಿಯಂತ್ರಿಸಲು ಸೂಕ್ತ ಕ್ರಮವಹಿಸಬೇಕೆಂದು ಚಿರತೆ ದಾಳಿಯ ಭಯದಲ್ಲೇ ಜೀವಿಸುತ್ತಿರುವ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ