Thursday, November 19, 2026

ಪ್ರಾಯೋಗಿಕ ಆವೃತ್ತಿ

ಬಿಬಿಸಿ ಡಾಕ್ಯುಮೆಂಟರಿ ಹುಟ್ಟು ಹಾಕಿರುವ ಒಂದು ಪ್ರಶ್ನೆ….

✍️ ಮಾಚಯ್ಯ ಎಂ. ಹಿಪ್ಪರಗಿ


  • ಅಟಲ್‌ಬಿಹಾರಿ ವಾಜಪೇಯಿಯವರು ಮೋದಿಯವರಿಗೆ ‘ರಾಜಧರ್ಮದ ಬೋಧನೆ ಮಾಡಿದ್ದರು
  • ಮಧ್ಯಂತರ ಚುನಾವಣೆಗೆ ಹೋದ ಮೋದಿಯವರು ಆ ಫಲಿತಾಂಶದಲ್ಲಿ ಕಳೆದ ಸಲಕ್ಕಿಂತ ಉತ್ತಮ ಫಸಲು ಕಂಡರು
  • ಸತ್ಯವನ್ನು ಹೇಳುವುದಷ್ಟೇ ಪತ್ರಿಕೋದ್ಯಮದ ಕೆಲಸವೇ?

ಜರ್ನಲಿಸಂ ಎಂದರೇನು ? ( what is Journalism)

ಗೋದ್ರೋತ್ತರ ಗಲಭೆಯಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ಹಾಗೂ ಇಂದಿನ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರ ಎಷ್ಟರಮಟ್ಟದ್ದು ಎಂಬುದನ್ನು ಓರೆಗಚ್ಚುವ ಬಿಬಿಸಿ ನ್ಯೂಸ್ ಸಂಸ್ಥೆಯ ಡಾಕ್ಯುಮೆಂಟರಿ ನಮ್ಮ ಮುಂದಿರಿಸಿರುವ ಹೊಸ ಪ್ರಶ್ನೆ ಇದು.

ಈ ಇಪ್ಪತ್ತು ವರ್ಷಗಳ ಅವಧಿಯ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದಾಗ, ಗುಜರಾತ್ ಗಲಭೆಗಳಿಗೆ ಎರಡು ಆಯಾಮವಿರುವುದನ್ನು ನಾವು ಸ್ಪಷ್ಟವಾಗಿ ಗುರುತಿಸಬಹುದು. ಮೊದಲನೆಯದ್ದು, ಮಾನವಹಕ್ಕು-ನೈತಿಕತೆ-ಮನುಷ್ಯತ್ವ-ಹೊಣೆಗಾರಿಕೆ ಮೊದಲಾದ ಆದರ್ಶಯುತ ನ್ಯಾಯಸಮ್ಮತ ಮೌಲ್ಯಗಳ ತುಲನೆ. ಎರಡನೆಯದ್ದು, only and purely ಪೊಲಿಟಿಕಲ್ ಇಂಪ್ಯಾಕ್ಟ್. ಬಹುಶಃ ಮೊದಲನೇ ಆಯಾಮದಿಂದ ನೋಡುವ ನಮ್ಮಂತವರಿಗೆ, ಇಡೀ ಗಲಭೆಯಲ್ಲಿ ಮೋದಿಯವರ ಪಾತ್ರದ ಬಗ್ಗೆ ಯಾವ ಅನುಮಾನವೂ ಇಲ್ಲ. ಸ್ವತಃ ಎಸ್‌ಐಟಿ ಥರಹದ ತನಿಖಾ ಸಂಸ್ಥೆ ಹಾಗೂ ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಮೋದಿಯವರ ಪಾತ್ರವನ್ನು ದೃಢಪಡಿಸುವಂತಹ ಸಾಕ್ಷ್ಯಗಳನ್ನು ಕಾಣಲು ಸೋತುಹೋದರೂ ಸಹಾ, ಸತತ ಮೂರು ದಿನಗಳ ಕಾಲ ಅಹಮದಾಬಾದ್ ಸೇರಿದಂತೆ ಗುಜರಾತ್‌ನ ಬಹಳಷ್ಟು ಕಡೆ ಒಂದು ವ್ಯವಸ್ಥಿತ ಹತ್ಯಾಕಾಂಡ ನಡೆದದ್ದರ ಹಿಂದೆ ಆಡಳಿತ ಯಂತ್ರದ ಸಹಚರ್ಯವನ್ನು ನಾವು ಮನಗಂಡಿದ್ದೇವೆ. ಮೋದಿಯವರ ಜಾಗದಲ್ಲಿ ಬೇರಾವುದೇ ವ್ಯಕ್ತಿಯಿದ್ದರೂ ಆಡಳಿತ ಯಂತ್ರದ, ಮುಖ್ಯವಾಗಿ ಪೊಲೀಸ್ ಪಡೆಯ, ವೈಫಲ್ಯಕ್ಕೆ ಕಾರಣರಾದ ಅವರನ್ನು ಗುರಿಯಾಗಿಸಿಯೇ ನೋಡಬೇಕಿತ್ತು, ನೋಡುತ್ತಿದ್ದೆವು ಕೂಡಾ. ಹಾಗಾಗಿ ಮೋದಿಯವರ ರಾಜಕೀಯ ಜೀವನವನ್ನು ಕೊನೆಗಾಣಿಸಲು ಗುಜರಾತ್ ಗಲಭೆಗಳನ್ನು ನೆಪ ಮಾಡಿಕೊಂಡು ಹುನ್ನಾರ ನಡೆಸಲಾಯಿತು ಅಂತ ಯಾರಾದರು ಆರೋಪಿಸಿದರೆ, ಅದು ಅವರ ಸೀಮಿತ ನೋಟವಾಗಿರುತ್ತದೆಯೇ ವಿನಾ ವಾಸ್ತವ ಅನ್ನಿಸಿಕೊಳ್ಳುವುದಿಲ್ಲ.

ಆದರೆ ಮೇಲೆ ಉಲ್ಲೇಖಿಸಿದ ಮಾನವಹಕ್ಕು-ನೈತಿಕತೆ-ಮನುಷ್ಯತ್ವ-ಹೊಣೆಗಾರಿಕೆಯನ್ನಾಧರಿಸಿದ ಆಯಾಮವು ನೆಲೆ ನಿಂತಿರುವುದು ಈ ನೆಲದ ನ್ಯಾಯದಾನ ವ್ಯವಸ್ಥೆಯ ಮೇಲೆ. ಈ ನಿಟ್ಟಿನಲ್ಲಿ ನಮ್ಮ ನ್ಯಾಯವ್ಯವಸ್ಥೆ ಸಂಪೂರ್ಣವಾಗಿ ಸೋತುಹೋಯಿತೇನೊ ಎಂಬ ಕೊರಗು ನಮ್ಮನ್ನು ಕಾಡುತ್ತಿದೆ. ಕಾಡಲು ಶುರುವಾಗಿ ಹತ್ತು ವರ್ಷಗಳೇ ಕಳೆದುಹೋಗಿವೆ. ನಮ್ಮ ನ್ಯಾಯವ್ಯವಸ್ಥೆಯ ಚೌಕಟ್ಟಿನಲ್ಲೇ ನಾವು ಆ ಕೊರಗಿಗೆ ಉತ್ತರ ಕಂಡುಕೊಳ್ಳಬೇಕೆ ವಿನಾ ಬೇರಾವುದೇ ಮಾರ್ಗಗಳೂ ಇಲ್ಲಿ ಅಪಥ್ಯ. ಬಿಬಿಸಿ ಡಾಕ್ಯುಮೆಂಟರಿ ಕೂಡಾ!! ಬಿಬಿಸಿ ಡಾಕ್ಯುಮೆಂಟರಿಯನ್ನು ಆಧಾರವಾಗಿಟ್ಟುಕೊಂಡು, ಅದು ಉಲ್ಲೇಖಿಸಿದ ವರದಿಗಳನ್ನು ಸಾಕ್ಷ್ಯಗಳಾಗಿ ಪರಿಗಣಿಸಿ ನಮ್ಮ ನ್ಯಾಯದಾನ ವ್ಯವಸ್ಥೆ ವಿಚಾರಣೆಯನ್ನು ಮತ್ತೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆಯಾ? ಕೈಗೆತ್ತಿಕೊಂಡರೂ ಸಮಗ್ರ ವಿಚಾರಣೆ ನಡೆದು, ನ್ಯಾಯಸಮ್ಮತ ತೀರ್ಪು ಹೊರಬರಬಹುದೆನ್ನುವ ನಿರೀಕ್ಷೆಯನ್ನಾದರೂ ನಮ್ಮ ವ್ಯವಸ್ಥೆ ಉಳಿಸಿದೆಯಾ? ಇತ್ತೀಚೆಗೆ ಬಂದ ಕೆಲವು ಗಂಭೀರ ತೀರ್ಪುಗಳು, ನ್ಯಾಯಾಂಗಣದ ಅಭಿಪ್ರಾಯಗಳು ಇಂಥ ಯಾವ ಭರವಸೆಯನ್ನೂ ಮೂಡಿಸುವುದಿಲ್ಲ.

ಇನ್ನು, ಗುಜರಾತ್ ಗಲಭೆಯ ಪೊಲಿಟಿಕಲ್ ಇಂಪ್ಯಾಕ್ಟ್ ಆಯಾಮದಿಂದ ಇಡೀ ಇಪ್ಪತ್ತು ವರ್ಷದ ಹಾದಿಯನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದರೆ ಹಿಂದೂತ್ವ ರಾಜಕಾರಣದ ದೃವೀಕರಣ ಕಣ್ಣಿಗೆ ರಾಚುತ್ತದೆ. ಗಲಭೆ ನಡೆದಾಗ ಭಾರತದ ಪ್ರಧಾನಿಯಾಗಿದ್ದ ಮತ್ತು ಬಲಪಂಥೀಯರಿಂದಷ್ಟೇ ಅಲ್ಲ, ಬಹಳಷ್ಟು ಪ್ರಗತಿಪರ-ಜಾತ್ಯತೀತವಾದಿಗಳಿಂದಲೂ ‘ಸಜ್ಜನ’ ಎಂಬ ಭ್ರಮೆಯಲ್ಲಿ ಇವತ್ತಿಗೂ ಗೌರವಿಸಲ್ಪಡುತ್ತಿರುವ ಅಟಲ್‌ಬಿಹಾರಿ ವಾಜಪೇಯಿಯವರು ಮೋದಿಯವರಿಗೆ ‘ರಾಜಧರ್ಮದ ಬೋಧನೆ ಮಾಡಿದ್ದರು. ಅಂದರೆ, ಗಲಭೆಗೆ ಹೊಣೆಗಾರಿಕೆ ಹೊತ್ತು ರಾಜೀನಾಮೆ ಕೊಡುವುದು ಸೂಕ್ತ ಎನ್ನುವ ಅರ್ಥದಲ್ಲಿ. ಅಲ್ಲಿಗೆ ಮೋದಿಯವರ ರಾಜಕೀಯ ಜೀವನ ಪರಿಸಮಾಪ್ತಿಯಾಗಬೇಕಿತ್ತು. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಅವರು ರಾಜಕಾರಣದಲ್ಲಿ ಬೆಳೆಯುತ್ತಲೇ ಬಂದರು. ಇದು ಸಾಧ್ಯವಾದದ್ದು ಹೇಗೆ?

ರಾಷ್ಟ್ರೀಯ ಸ್ವಾತಂತ್ರ್ಯ ಚಳವಳಿಯ ಬಳುವಳಿಯಾಗಿ ಮುನ್ನೆಲೆಗೆ ಬಂದಿದ್ದ ‘ಜಾತ್ಯತೀತ ರಾಜಕಾರಣದ’ ಮೇಲೆ ತನ್ನ ಪ್ರಭಾವವನ್ನು ವಿಸ್ತರಿಸಲು ಧಾರ್ಮಿಕ ಬಹುಸಂಖ್ಯಾತ ರಾಜಕಾರಣಕ್ಕೆ ಆರಂಭಿಕ ಕಾಲಘಟ್ಟದಲ್ಲಿ ಒಂದಷ್ಟು ತೊಡಕಾಗಿದ್ದು ನಿಜವಾದರೂ, 90ರ ದಶಕದ ನಂತರದಲ್ಲಿ ಅವು ಜನರ ನಡುವೆ ಮನ್ನಣೆ ಪಡೆಯುತ್ತಾ ಬಂದದ್ದು ಸುಳ್ಳಲ್ಲ. ಅಯೋಧ್ಯೆಯ ರಾಮಮಂದಿರ ವಿವಾದ ಮತ್ತು ಅಡ್ವಾಣಿಯವರ ನೇತೃತ್ವದ ರಥಯಾತ್ರೆಗಳು ‘ಧಾರ್ಮಿಕ ಬಹುಸಂಖ್ಯಾತ’ ರಾಜಕಾರಣವನ್ನು ಇನ್ನಷ್ಟು ಉದ್ದೀಪಿಸಿದವು. ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಓಲೈಕೆ ರಾಜಕಾರಣದ ಅಪಪ್ರಚಾರ…. ಇಂತಹ ಸಮ್ಮತೀಯ ಮುಖವಾಡಗಳನ್ನು ತೊಡಿಸಿ, ಬಹುಸಂಖ್ಯಾತ ರಾಜಕಾರಣಕ್ಕೆ ಬುನಾದಿ ಹಾಕುತ್ತಾ ಬರಲಾಯ್ತು. ಅದು ಕೇವಲ ರಾಜಕಾರಣಕ್ಕಷ್ಟೇ ಸೀಮಿತವಾಗಿರಲಿಲ್ಲ, ಸಮೂಹ-ಸಾಂಸ್ಕೃತಿಕ ಮನಸ್ಥಿತಿಯನ್ನಾಗಿಯೂ ರೂಪಿಸಲಾಗಿತ್ತು. ಇಂಥಾ ಬಹು ಆಯಾಮದ ಬಲೆಗೆ ಸಿಲುಕುತ್ತಾ ಬಂದ ಜನರನ್ನು ಮಾನಸಿಕವಾಗಿ ಬಹುಸಂಖ್ಯಾತ ಧಾರ್ಮಿಕ ರಾಜಕಾರಣಕ್ಕೆ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಗುಜರಾತ್ ಗಲಭೆ!

ಗಲಭೆ ನಡೆದ ವರ್ಷವೇ, ಇನ್ನೂ ಎಂಟು ತಿಂಗಳ ಅಧಿಕಾರಾವಧಿಯಿದ್ದರೂ, ಮಧ್ಯಂತರ ಚುನಾವಣೆಗೆ ಹೋದ ಮೋದಿಯವರು ಆ ಫಲಿತಾಂಶದಲ್ಲಿ ಕಳೆದ ಸಲಕ್ಕಿಂತ ಉತ್ತಮ ಫಸಲು ಕಂಡರು. ಇದು ಬಹುಸಂಖ್ಯಾತ ರಾಜಕಾರಣಕ್ಕೆ ಇರುವ ಅವಕಾಶಕ್ಕೆ ಮುನ್ನುಡಿಯಾಯಿತೆಂದರೂ ತಪ್ಪಲ್ಲ. ಒಂದು ಕಡೆ, ನ್ಯಾಯವ್ಯವಸ್ಥೆಯ ವಿಚಾರಣಾ ಆಯಾಮವು ಮೋದಿಯವರಿಗೆ ತೊಡಕಾಗುತ್ತಿದ್ದರೂ, ಮತ್ತೊಂದೆಡೆ ಬಹುಸಂಖ್ಯಾತ ರಾಜಕಾರಣಕ್ಕಿರುವ ಅದ್ಭುತ ಅವಕಾಶ ಮೋದಿಯವರನ್ನಷ್ಟೇ ಅಲ್ಲ, ಅವರ ಬೆನ್ನಗಿರುವ ಸಮಸ್ತ ಸಂಘ ಪರಿವಾರವನ್ನೂ ರಿಸ್ಕ್‌ಗೆ ಅಣಿಯಾಗಿಸಿದವು. ತಮ್ಮ ಸೈದ್ಧಾಂತಿಕ ಪ್ರಾಬಲ್ಯವನ್ನು ಸ್ಥಾಪಿಸಲು ಅವರು ಅಷ್ಟು ಮಾತ್ರ ಬೆಲೆ ತೆರಲೇಬೇಕಿತ್ತು. ಆ ಬೆಲೆಗೆ ಸಿಗುವ ಪ್ರತಿಫಲದ ಸ್ಪಷ್ಟ ಅಂದಾಜು ಇದ್ದ ಮೋದಿ ಸಹಾ ತನ್ನ ಮೇಲಿನ ಆರೋಪವನ್ನು, ಬಲವಾಗಿ ಪರಿವರ್ತಿಸಿಕೊಳ್ಳುತ್ತಾ ಬಂದರು. ‘ಪ್ರತೀಕಾರ’ ಮತ್ತು ’ಪ್ರತಿಕ್ರಿಯೆ’ಗಳು ಜನರ ಮನಸ್ಸಿನಲ್ಲಿ ಮನ್ನಣೆ ಪಡೆಯುತ್ತಾ ಬಂದವು. ಜನಸಮೂಹದ ಮನಸ್ಥಿತಿ ಅತ್ತ ಜಾರುತ್ತಾ ಬಂತು. ದುರಾದೃಷ್ಟವೆಂದರೆ, ಇದೇ ಸಮಯದಲ್ಲಿ ದೇಶದ ನ್ಯಾಯದಾನ ವ್ಯವಸ್ಥೆ ಕೂಡಾ ಎಡವಿದ್ದು, ಭಾರತದ ಜಾತ್ಯತೀತ ಪ್ರಜಾಪ್ರಭುತ್ವದ ಪಾಲಿಗೆ ದೊಡ್ಡ ಏಟು ನೀಡಿತು.

’ಅಚ್ಚೇ ದಿನಗಳ’ ಆಶ್ವಾಸನೆ ೨೦೧೪ರಲ್ಲಿ ಮೋದಿಯವರನ್ನು ಪ್ರಧಾನಿ ಪಟ್ಟಕ್ಕೇರಿಸಿದ್ದರಲ್ಲಿ ಪ್ರಮುಖ ಪಾತ್ರ ವಹಿಸಿದ್ದೆನ್ನುವುದು ಸತ್ಯವೇ ಆದರೂ, ಅದರ ಕೆಳಗೆ ಅಂತರ್ಗತವಾಗಿ ಕೆಲಸ ಮಾಡಿದ್ದು ಧಾರ್ಮಿಕ ಬಹುಸಂಖ್ಯಾತ ರಾಜಕಾರಣದ ದೃವೀಕರಣ ಎಂಬುದನ್ನು ತಳ್ಳಿ ಹಾಕಲಾಗದು. ಯಾಕೆಂದರೆ ೨೦೧೯ರ ಚುನಾವಣೆಯಲ್ಲಿ ಎಲ್ಲ ರೀತಿಯಿಂದಲೂ ವೈಫಲ್ಯಕ್ಕೆ ತುತ್ತಾಗಿದ್ದ ಮೋದಿಯವರ ನೇತೃತ್ವದ ಬಿಜೆಪಿ ಕಳೆದ ಸಲಕ್ಕಿಂತ ಹೆಚ್ಚಿನ ಸೀಟು ಗೆಲ್ಲುವಲ್ಲಿ ಈ ದೃವೀಕರಣದ ಮುಂದುವರೆದ ಭಾಗ ಕೆಲಸ ಮಾಡಿತ್ತು. ಭಾರತದ ಆಧುನಿಕ ಚರಿತ್ರೆಯಲ್ಲಿ ದಾಖಲಾಗಬಹುದಾದ ಸುದೀರ್ಘ ರೈತ ಪ್ರತಿರೋಧದ ಹೊರತಾಗಿಯೂ, ಆ ಚಳುವಳಿ ಪ್ರಧಾನವಾಗಿ ವ್ಯಾಪಿಸಿದ್ದ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರ ನೇತೃತ್ವದಲ್ಲಿ ಬಿಜೆಪಿ ಎರಡನೇ ಸಲ ರಾಜ್ಯದ ಅಧಿಕಾರಕ್ಕೇರಿದ್ದೂ ಇದೇ ಕಾರಣಕ್ಕೆ. ಎರಡೂ ಕಡೆ, ಎರಡನೇ ಬಾರಿ ಮಾನ್ಯತೆ ಸಿಕ್ಕಿದ್ದು ‘ಅಚ್ಚೇ ದಿನ’ಗಳು, ವಿಕಾಸಗಳು ಅದಾಗಲೇ ಮಸುಕಾಗಿ, ಲೇವಡಿಗೆ ತುತ್ತಾಗಿದ್ದ ಕಾಲದಲ್ಲಿ ಅನ್ನೋದನ್ನು ಮರೆಯಬಾರದು.

ಗುಜರಾತ್ ಗಲಭೆ ನಡೆದಾಗ, ದೇಶದ ಜನಸಮೂಹದ ಒಟ್ಟಾರೆ ಮನಸ್ಥಿತಿ ಇವತ್ತಿನಷ್ಟು ಕೋಮುದೃವೀಕರಣಕ್ಕೆ ತುತ್ತಾಗಿರಲಿಲ್ಲ. ಅಂಥಾ ಸಂದರ್ಭದಲ್ಲೇ ಗೋದ್ರೋತ್ತರ ಹತ್ಯಾಕಾಂಡ ಬಿಜೆಪಿಗೆ ಭರ್ಜರಿ ಫಲಿತಾಂಶವನ್ನು ನೀಡುತ್ತಾ ಬಂತು. ಆದರೆ ಈ ಒಂಬತ್ತು ವರ್ಷಗಳಲ್ಲಿ, ಮಾಧ್ಯಮವೂ ಸೇರಿದಂತೆ ಬಹುತೇಕ ಸಾಂವಿಧಾನಿಕ ಸಂಸ್ಥೆಗಳನ್ನೂ ತನ್ನ ಕೈವಶ ಮಾಡಿಕೊಂಡಿರುವ ಬಹುಸಂಖ್ಯಾತ ರಾಜಕಾರಣವು, ಜನರ ಮನಸ್ಸನ್ನು ಭಾಗಶಃ ಪ್ರಭಾವಿಸಿದೆ. ಈಗ ಮೊದಲಿನಂತೆ ‘ಗಲಭೆಯ ನಿರಾಕರಣೆಯ’ ಅಗತ್ಯವೂ ಬಹುಸಂಖ್ಯಾತ ರಾಜಕಾರಣಕ್ಕಿಲ್ಲ.

ಇಂತಹ ಸಂದರ್ಭದಲ್ಲಿ ಹೊರಬಂದಿರುವ, ಗುಜರಾತ್ ಗಲಭೆಯ ಕುರಿತ ಬಿಬಿಸಿ ನ್ಯೂಸ್‌ನ ಡಾಕ್ಯುಮೆಂಟರಿ ಏನು ಪ್ರಭಾವ ಬೀರಬಲ್ಲದು? ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮೋದಿಯವರಿಗೆ ವೈಯಕ್ತಿಕವಾಗಿ diplomatic ಇರಿಸುಮುರಿಸನ್ನು ಇದು ಉಂಟು ಮಾಡಬಹುದಾದರೂ, ದೇಶದ ರಾಜಕಾರಣವನ್ನು ನಿರ್ಧರಿಸುವ ಮತ್ತು ಈ ದೇಶದ ಆಗುಹೋಗಿನಲ್ಲಿ ಪ್ರಧಾನ ಪಾತ್ರ ವಹಿಸುವ ದೇಶೀ ರಾಜಕಾರಣದಲ್ಲಿ ಯಾರಿಗೆ ತನ್ನ ಅನುಕೂಲ ಮುಂದುವರೆಸಬಲ್ಲದು!? ಗುಜರಾತ್ ಗಲಭೆಯನ್ನು ನಿಭಾಯಿಸುವಲ್ಲಿ ನಮ್ಮ ನೈತಿಕ ಮತ್ತು ನ್ಯಾಯ ವ್ಯವಸ್ಥೆಯ ಆಯಾಮ ಮುಗ್ಗರಿಸುತ್ತಲೇ ಬಂದ ವೇಳೆಯಲ್ಲೇ, ಅದು ಉಂಟುಮಾಡಿದ ಪೊಲಿಟಿಕಲ್ ಇಂಪ್ಯಾಕ್ಟ್ ಈ ದೇಶದ ದುಸ್ಥಿತಿಗೆ ಕಾರಣವಾದದ್ದನ್ನು ಗಮನಿಸಿದ್ದೇವೆ. ಈಗ ಮತ್ತೊಮ್ಮೆ ಬಿಬಿಸಿ ಡಾಕ್ಯುಮೆಂಟರಿ ನೈತಿಕ, ಮಾನವಹಕ್ಕು ಆಯಾಮದಿಂದ qualitative ಹಿನ್ನಡೆ ಉಂಟು ಮಾಡಿರಬಹುದೇ ವಿನಾ, quantitaive ಮತರಾಜಕಾರಣದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಕಮ್ಮಿ.

ಈಗ ಆರಂಭದ ಪ್ರಶ್ನೆಗೆ ಮರಳೋಣ, What is Journalism?

ಈ ಪ್ರಶ್ನೆ ಕಾಡುವಂತೆ ಮಾಡಿದ್ದು, ಡಾಕ್ಯುಮೆಂಟರಿಯ ಚರ್ಚೆಯ ನಂತರ News Minute ನ್ಯೂಸ್ ಪೋರ್ಟಲ್ ಜೊತೆ ಮಾತಾಡುತ್ತಾ ಹರತೋಷ್ ಸಿಂಗ್ ಅವರು (ಡಾಕ್ಯುಮೆಂಟರಿಯಲ್ಲಿ ಭಾಗವಹಿಸಿರುವ) ಬಿಬಿಸಿ ಡಾಕ್ಯುಮೆಂಟರಿಯು, ಸತ್ಯವನ್ನು ಮತ್ತು ವಾಸ್ತವಗಳನ್ನು ಜನರ ಮುಂದಿಡುವ ಶುದ್ಧ ಪತ್ರಿಕೋದ್ಯಮದ ಪ್ರಯತ್ನವೇ ವಿನಾ, ಮೋದಿಯವರ ರಾಜಕೀಯ ಜೀವನಕ್ಕಾಗಲಿ, ಚುನಾವಣೆಗಾಗಲಿ ಹಿನ್ನಡೆ ತರುತ್ತದೆಂಬ ಉದ್ದೇಶದ್ದಲ್ಲ ಎಂದಿದ್ದಾರೆ. ಸತ್ಯವನ್ನು ಹೇಳುವುದಷ್ಟೇ ಪತ್ರಿಕೋದ್ಯಮದ ಕೆಲಸವೇ? ಆ ಸತ್ಯದ ಪರಿಣಾಮ, ಪ್ರಭಾವಗಳಿಗೂ ಪತ್ರಿಕೋದ್ಯಮಕ್ಕೂ ಯಾವುದೇ ಕೊಡುತೆಗೆದುಕೊಳ್ಳುವ ಸಂಬಂಧವಿಲ್ಲವೇ?

ಈ ಹಂತದಲ್ಲಿ, ಪತ್ರಿಕೋದ್ಯಮದ ಕುರಿತು ಮಹಾತ್ಮ ಗಾಂಧಿಯವರು ಹೇಳಿದ ಒಂದು ಮಾತು ನೆನಪಾಗುತ್ತಿದೆ. “ಪತ್ರಿಕೋದ್ಯಮದ ಮುಖ್ಯ ಧ್ಯೇಯ ಸೇವೆಯೇ ಆಗಿರಬೇಕು. ಮಾಧ್ಯಮಗಳಿಗೆ ಅಗಾಧವಾದ ಶಕ್ತಿಯಿದೆ. ಆದರೆ, ಎಲ್ಲೆಮೀರಿ ಉಕ್ಕಿ ಹರಿಯುವ ಪ್ರವಾಹದ ತೊರೆಗಳು ಹೇಗೆ ಮನೆ, ಬದುಕು, ಪೈರುಗಳನ್ನೂ ಧ್ವಂಸ ಮಾಡಬಲ್ಲದೋ, ಹಾಗೆ, ನಿಯಂತ್ರಣವಿಲ್ಲದ ಲೇಖನಿ ಸಹಾ ಸಮಾಜದ ಧ್ವಂಸಕ್ಕೆ ಕಾರಣವಾಗಬಹುದು.”

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ