ರೈತರು ಗುಣಮಟ್ಟದ ಹಾಲನ್ನು ಡೇರಿಗೆ ಸರಬರಾಜು ಮಾಡಿದರೆ ಹಾಲು ಒಕ್ಕೂಟ ಹಾಗೂ ಸಹಕಾರ ಸಂಘಗಳು ಅಭಿವೃದ್ಧಿ ಹೊಂದುತ್ತವೆ.ಗುಣಮಟ್ಟದಲ್ಲಿ ಹೆಚ್ಚು ಕಡಿಮೆಯಾದರೆ ಸಂಘಗಳು ನಷ್ಟಕ್ಕೆ ಸಿಲುಕುತ್ತವೆ ಎಂದು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಬಿ.ಆರ್. ರಾಮಚಂದ್ರ ಹೇಳಿದರು.
ಮಂಡ್ಯ ತಾಲೂಕಿನ ತಂಡಸನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಬೆಳ್ಳಿ ಹಬ್ಬದ ಅಂಗವಾಗಿ ನಿರ್ಮಿಸಿರುವ ನೂತನ ಕಟ್ಟಡ ಉದ್ಘಾಟನೆಯ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಹಾಲು ಒಕ್ಕೂಟದ ವತಿಯಿಂದ ತಂಡಸನಹಳ್ಳಿ ಡೇರಿ ಕಟ್ಟಡಕ್ಕೆ 6.50 ಲಕ್ಷ ರೂ ಅನುದಾನ ನೀಡಲಾಗಿದೆ ಎಂದರು.
ಒಕ್ಕೂಟದ ವತಿಯಿಂದ ಉತ್ಪಾದಕರಿಗೆ ಹಾಲು ಕರೆಯುವ ಯಂತ್ರ, ಹುಲ್ಲು ಕಟ್ ಮಾಡುವ ಯಂತ್ರಕ್ಕೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ.ರೈತರು ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ರೈತರು ತಪ್ಪದೇ ರಾಸುಗಳಿಗೆ ವಿಮಾ ಯೋಜನೆ ಮಾಡಿಸಿ, ರಾಸುಗಳು ಮರಣ ಹೊಂದಿದ ಸಂದರ್ಭದಲ್ಲಿ ವಿಮಾ ಸೌಲಭ್ಯ ಅನುಕೂಲ ಆಗುತ್ತದೆ ಎಂದರು.
ಸಮಾರಂಭ ಉದ್ಘಾಟನೆ ನೇರವೇರಿಸಿ ಮಾತನಾಡಿದ ಶಾಸಕ ಎಂ.ಶ್ರೀನಿವಾಸ್, ತಂಡಸನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘ 25 ವರ್ಷದಲ್ಲಿ ಉತ್ತಮವಾಗಿ ಬೆಳೆದಿದ್ದು, 50 ವರ್ಷಕ್ಕೆ ಬೃಹದಾ ಕಾರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಮನ್ಮುಲ್ ಉಪಾಧ್ಯಕ್ಷ ಎಂ.ಎಸ್. ರಘುನಂದನ್ ಮಾತನಾಡಿ, ಹಾಲು ಉತ್ಪಾದನೆಯ ಗುಣಮಟ್ಟದಲ್ಲಿ ಮಂಡ್ಯ ಜಿಲ್ಲಾ ಒಕ್ಕೂಟ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದೆ. 300 ಕೋಟಿ ರೂ.ವೆಚ್ಚದಲ್ಲಿ ಹಾಲು ಒಕ್ಕೂಟದಲ್ಲಿ ಮೆಗಾಡೇರಿ ಸ್ಥಾಪಿಸಿದ್ದು, ಗುಣಮಟ್ಟದ ಹಾಲನ್ನು ಡೇರಿಗೆ ಉತ್ಪಾದಕರು ಸರಬರಾಜು ಮಾಡಿದರೆ ಸಹಕಾರ ಸಂಘಗಳು ಅಭಿವೃದ್ಧಿ ಹೊಂದುತ್ತವೆ. ಮುಂದಿನ ದಿನಗಳಲ್ಲಿ ಉತ್ಪಾದಕರಿಗೆ ಹಾಲಿನ ದರ ಹೆಚ್ಚಳ ಮಾಡಲಾಗುವುದು. ಈಗಾಗಲೇ ಒಕ್ಕೂಟದ ವತಿಯಿಂದ ಉತ್ಪಾದಕರಿಗೆ ಮ್ಯಾಟ್, ಹಾಲು ಕರೆಯುವ ಯಂತ್ರ,ಚಾಪ್ ಕಟ್ಟರ್ ಗಳನ್ನು ನೀಡುತ್ತಾ ಬಂದಿದ್ದೇವೆ ಎಂದು ತಿಳಿಸಿದರು.
ತಂಡಸನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಟಿ.ಎಸ್. ಮೋಹನ್,ಉಪಾಧ್ಯಕ್ಷ ಟಿ. ವೆಂಕಟೇಶ್,ವಿಸ್ತರಣಾಧಿಕಾರಿ ಪ್ರತಾಪ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಸಿ.ಶಂಕರೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ನಿರ್ಮಲ, ಜಯಮ್ಮ, ಕೆ.ಎಸ್. ಮಂಜು ಇತರರಿದ್ದರು.




