ಮಂಡ್ಯ ತಾಲೂಕಿನ ತಂಡಸನಹಳ್ಳಿಯಲ್ಲಿ ಬೆಂಕಿ ಅವಘಡ ಸಂಭವಿಸಿ ನಾಡ ಹೆಂಚಿನ ಮನೆ ಸಂಪೂರ್ಣ ಭಸ್ಮಗೊಂಡು ಸಾಕು ಪ್ರಾಣಿಗಳು ಸಜೀವ ದಹನ ಗೊಂಡಿರುವ ಮನ ಕಲಕುವ ಘಟನೆ ನಡೆದಿದೆ.
ಬೆಂಕಿಯ ಕೆನ್ನಾಲಿಗೆ ಹಸು, ಕರು, ಕೋಳಿಗಳು ಸಜೀವವಾಗಿ ದಹನವಾಗಿದ್ದು, ಗೃಹೋಪಯೋಗಿ ವಸ್ತುಗಳು, 7ರಿಂದ 8 ಕ್ವಿಂಟಾಲ್ ರಾಗಿ, 30 ಕ್ಕೂ ಹೆಚ್ಚು ಗೊಬ್ಬರಿ ಕಾಯಿಗಳು, ಇನ್ನಿತರೆ ದವಸ ಧಾನ್ಯಗಳು ಸೇರಿದಂತೆ ರಸಗೊಬ್ಬರಗಳು ಸುಟ್ಟು ಕರಕಲಾಗಿವೆ.

ಬೆಂಕಿಯ ಜ್ವಾಲೆಗೆ ಸಿಲುಕಿದ ವ್ಯಕ್ತಿಯೊಬ್ಬ ಗಾಯಗೊಂಡಿದ್ದು, ಈತನನ್ನು ಸ್ಥಳೀಯರು ರಕ್ಷಿಸಿದ ಹಿನ್ನೆಲೆಯಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾನೆ.
ಗ್ರಾಮದ ತಿಮ್ಮಯ್ಯ ಅವರ ಪುತ್ರ ಟಿ. ಕೃಷ್ಣ ರವರ ಮನೆಯಲ್ಲಿ ಭಾನುವಾರ ಮಧ್ಯರಾತ್ರಿ ಮನೆಯವರೆಲ್ಲ ನಿದ್ರಿಸುತ್ತಿದ್ದ ಸಮಯದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿಯ ಜ್ವಾಲೆ ಎಲ್ಲೆಡೆ ಹರಡಿದೆ. ಅಕ್ಕ ಪಕ್ಕದ ಮನೆಯವರು ಬೆಂಕಿಯನ್ನು ಕಂಡು ಕೂಗಿಕೊಂಡಿದ್ದು, ಮನೆಯಲ್ಲಿದ್ದವರು ಮತ್ತೊಂದು ಬಾಗಿಲ ಮೂಲಕ ಹೊರ ಬಂದಿದ್ದು, ಈ ವೇಳೆ ಬೆಂಕಿ ಜ್ವಾಲೆಗೆ ಸಿಲುಕಿ ಕೃಷ್ಣ ಸುಟ್ಟ ಗಾಯಗೊಂಡಿದ್ದಾನೆ.

ಮನೆಯಲ್ಲಿ ಸಾಕಾಣಿಕೆ ಮಾಡಲಾಗಿದ್ದ ಒಂದು ಹಸು, ಒಂದು ಕರು, 20 ಕೋಳಿಗಳು ಬೆಂಕಿಗಾಹುತಿಯಾಗಿವೆ. ದವಸಧಾನ್ಯ, ಬಟ್ಟೆ, ಗೃಹೋಪಯೋಗಿ ಸಾಮಾನುಗಳು, ರಸಗೊಬ್ಬರ ಸೇರಿ ಬೆಲೆಬಾಳುವ ಪದಾರ್ಥಗಳು ಸುಟ್ಟು ಕರಕಲಾಗಿವೆ. ಮನೆಯ ಮೇಲ್ಚಾವಣಿ ಬೆಂಕಿಯ ಜ್ವಾಲೆಗೆ ಸುಟ್ಟು ಕೆಳಕ್ಕೆ ಬಿದ್ದಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಮನೆಯ ಬಹುತೇಕ ಭಾಗ ಸುಟ್ಟುಹೋಗಿತ್ತು. ಇದರಿಂದ ಹೆಚ್ಚಿನ ನಷ್ಟ ಸಂಭವಿಸಿದ್ದು, ಸುಮಾರು 20 ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಸುಟ್ಟು ಕರಕಲಾಗಿದ್ದ ಮನೆಯಲ್ಲಿ ಸಜೀವವಾಗಿ ದಹನಗೊಂಡಿದ್ದ ಸಾಕು ಪ್ರಾಣಿಗಳ ಮೃತದೇಹ ಕಂಡ ಜನತೆ ಮಮ್ಮಲ ಮರಗುತ್ತಿದ್ದ ದೃಶ್ಯ ಕಂಡು ಬಂದಿತು. ಸುಟ್ಟು ಗಾಯಗೊಂಡಿರುವ ಮನೆಯ ಮಾಲೀಕ ಕೃಷ್ಣ ಪ್ರಾಣಪಾಯದಿಂದ ಪಾರಾಗಿದ್ದು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




