ರೇಷ್ಮೆ ಬೆಳೆಗಾರರು ಆಧುನಿಕ ತಂತ್ರಜ್ಞಾನದ ಬೇಸಾಯ ಪದ್ಧತಿ ಅಳವಡಿಸಿಕೊಂಡು ಹೆಚ್ಚಿನ ಲಾಭ ಗಳಿಸಬೇಕೆಂದು ರೇಷ್ಮೆ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಸಲಹೆ ನೀಡಿದರು.
ಕೆ.ಆರ್.ಪೇಟೆ ಪಟ್ಟಣದ ರೇಷ್ಮೆ ಮಾರುಕಟ್ಟೆಯ ಆವರಣದಲ್ಲಿ ತಾಲ್ಲೂಕಿನ ಪ್ರಗತಿಪರ ರೇಷ್ಮೆ ಬೆಳೆಗಾರರು ಎರಡು ದಿನಗಳ ರೇಷ್ಮೆ ಕೃಷಿ ಅಧ್ಯಯನ ಪ್ರವಾಸಕ್ಕೆ ಹಸಿರು ನಿಶಾನೆ ತೋರಿಸಿ ಶುಭ ಹಾರೈಸಿ ರೈತರಿಗೆ ಬೀಳ್ಕೊಟ್ಟು ಮಾತನಾಡಿದರು.
ರೇಷ್ಮೆ ಬೆಳೆಯು ರೈತರಿಗೆ ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭವನ್ನು ತಂದುಕೊಡುವ ಬಂಗಾರದ ಬೆಳೆಯಾಗಿದೆ. ಆದ್ದರಿಂದ ರೈತರು ರೇಷ್ಮೆ ಬೇಸಾಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಹೆಚ್ಚು ಲಾಭಗಳಿಸಬಹುದು.
ಬೈವೋಲ್ಟಿನ್ ರೇಷ್ಮೆ ಬೇಸಾಯ ಮಾಡಲು ತಾಲ್ಲೂಕಿನ ಹವಾಮಾನ ಹಾಗೂ ಮಣ್ಣಿನ ಫಲವತ್ತತೆಯು ಹೇಳಿ ಮಾಡಿಸಿದಂತಿದೆ ಎಂದರು.
ರೇಷ್ಮೆ ಬೇಸಾಯ ಮಾಡುವ ಪ್ರಗತಿಪರ ರೈತರ ತೋಟಗಳಿಗೆ ಪ್ರವಾಸ ಹೊರಟಿರುವ ತಾಲ್ಲೂಕಿನ ರೇಷ್ಮೆ ಬೆಳೆಗಾರರು ಅಲ್ಲಿನ ಬೆಳೆಗಾರರು ಅಳವಡಿಸಿಕೊಂಡಿರುವ ತಂತ್ರಜ್ಞಾನ ಹಾಗೂ ಬೇಸಾಯ ಕ್ರಮಗಳನ್ನು ಅರಿತು, ಅಲ್ಲಿಯಂತೆಯೇ ಇಲ್ಲೂ ರೇಷ್ಮೆ ಬೆಳೆ ಬೇಸಾಯ ಮಾಡಿ ಹೆಚ್ಚು ಇಳುವರಿಯನ್ನು ಪಡೆದುಕೊಳ್ಳುವ ಮೂಲಕ ಹೆಚ್ಚು ಲಾಭ ಗಳಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷ್ಣರಾಜಪೇಟೆ ತಾಲ್ಲೂಕು ಬೈವೋಲ್ಟಿನ್ ರೇಷ್ಮೆ ಬಿತ್ತನೆಗೂಡು ಉತ್ಪಾದಕರ ಕಂಪನಿಯ ಅಧ್ಯಕ್ಷ ಐಚನಹಳ್ಳಿ ಶಿವಣ್ಣ, ಪ್ರಗತಿಪರ ರೈತರಾದ ಗೋಪಾಲ್, ಹರಳಹಳ್ಳಿ ತಿಮ್ಮೇಗೌಡ, ಲಕ್ಷ್ಮಣ, ಕಾಮನಹಳ್ಳಿ ಬೋರೇಗೌಡ, ಸಿಇಓ ಆನಂದ್,ಡಿಇಓ ಪುನೀತ್, ತಾಲ್ಲೂಕು ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಮಹದೇವಪ್ಪ, ಮಾರುಕಟ್ಟೆ ವಿಭಾಗದ ಸಹಾಯಕ ನಿರ್ದೇಶಕ ಲೋಕೇಶ್ ಸೇರಿದಂತೆ ರೈತರು ಹಾಗೂ ರೇಷ್ಮೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.




