ರಾಜ್ಯದಲ್ಲಿ ನಿರ್ಮಾಣ ಕಾಮಗಾರಿಗಳಿಗೆ ವಾರ್ಷಿಕ ಅಂದಾಜು 45 ದಶಲಕ್ಷ ಮೆಟ್ರಿಕ್ ಟನ್ ಮರಳಿನ ಬೇಡಿಕೆ ಇದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಬಸಪ್ಪ ಆಚಾರ್ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಶಾಸಕ ಮಧು ಜಿ.ಮಾದೇಗೌಡರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ರಾಜ್ಯದಲ್ಲಿ ಪ್ರಸ್ತುತ 692 ಎಂ–ಸ್ಯಾಂಡ್ ಉತ್ಪಾದನಾ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಅಂದಾಜು 30 ದಶಲಕ್ಷ ಮೆಟ್ರಿಕ್ ಟನ್ ಎಂ ಸ್ಯಾಂಡ್ ಉತ್ಪಾದಿಸಲಾಗುತ್ತಿದೆ. ನದಿ ಪಾತ್ರದ ಮರಳು ಗುತ್ತಿಗೆ ಪ್ರದೇಶಗಳಲ್ಲಿ ಮತ್ತು ಪಟ್ಟಾ ಜಮೀನಿನ ಮರಳು ಗಣಿಗಾರಿಕೆ ಲೈಸೆನ್ಸ್ ಪ್ರದೇಶಗಳಲ್ಲಿ ವಾರ್ಷಿಕ ಅಂದಾಜು 3 ರಿಂದ 4 ದಶಲಕ್ಷ ಮೆಟ್ರಿಕ್ ಟನ್ ಮರಳು ಪೂರೈಸಲಾಗುತ್ತಿದೆ ಎಂದಿದ್ದಾರೆ.
ರಾಜ್ಯದಲ್ಲಿ 6 ರಿಂದ 8 ದಶಲಕ್ಷ ಮೆಟ್ರಿಕ್ ಟನ್ ಮರಳು ಕೊರತೆ ಇದ್ದು, ಹೊರ ರಾಜ್ಯಗಳಿಂದ ಅಂದಾಜು 4 ರಿಂದ 5 ದಶಲಕ್ಷ ಮೆಟ್ರಿಕ್ ಟನ್ ನದಿ ಮರಳು ಹಾಗೂ ಎಂ ಸ್ಯಾಂಡ್ ಪೂರೈಕೆ ಆಗುತ್ತಿದೆ ಎಂದು ತಿಳಿಸಿದ್ದಾರೆ.
ಗಾಮ ಪಂಚಾಯಿತಿ ಮೂಲಕ ಅವಕಾಶ
ಸರ್ಕಾರವು ಸ್ಥಳೀಯ ಕಾಮಗಾರಿಗಳಿಗೆ ಮರಳು ಪೂರಕ ಮಾಡುವ ಉದ್ದೇಶದಿಂದ ಹೊಸ ಮರಳು ನೀತಿ, 2020 ಹಾಗೂ ಕರ್ನಾಟಕ ಉಪ ಖನಿಜ ರಿಯಾಯಿತಿ (ತಿದ್ದುಪಡಿ)-ನಿಯಮಗಳು, 2021ರಲ್ಲಿ 1, 2, ಮತ್ತು 3 ಶ್ರೇಣಿಯ ಹಳ್ಳಗಳ ಪಾತ್ರಗಳಲ್ಲಿ ಲಭ್ಯವಿರುವ ಮರಳನ್ನು ಗಾಮ ಪಂಚಾಯಿತಿ ಮೂಲಕ ಸ್ಥಳೀಯ ನಿರ್ಮಾಣ ಕಾಮಗಾರಿಗಳಿಗೆ ನೀಡಲು ಅವಕಾಶ ಕಲ್ಪಿಸಲಾಗಿರುತ್ತದೆ. ಅದರಂತೆ, 1, 2, ಮತ್ತು 3 ಶ್ರೇಣಿಯ ಹಳ್ಳಗಳ ಪಾತ್ರಗಳಲ್ಲಿ ತಾಲ್ಲೂಕು ಮರಳು ಸಮಿತಿಯಿಂದ ಗುರುತಿಸಿದ ಮರಳು ಬ್ಲಾಕ್ ಗಳನ್ನು ಜಿಲ್ಲಾ ಮರಳು ಸಮಿತಿಯಿಂದ ಸದರಿ ಮರಳು ನಿಕ್ಷೇಪ ಪ್ರದೇಶಗಳಲ್ಲಿ ಮರಳನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳ ಮೂಲಕ ವಿಲೇವಾರಿ ಮಾಡಲು ಆಯಾ ಗ್ರಾಮ ಪಂಚಾಯಿತಿಗಳಿಗೆ ಅಧಿಸೂಚನೆ ಹೊರಡಿಸಿ ಕಾರ್ಯಾದೇಶ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಾದೇಶ ನೀಡಿದ ಮರಳು ಬ್ಲಾಕ್ ಗಳಲ್ಲಿನ ಮರಳನ್ನು ಸ್ಮಳೀಯ ಸಾರ್ವಜನಿಕ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ನೀಡುವ ಸಂಬಂಧ, ಸಂಬಂಧಪಟ್ಟ ಗ್ರಾಮ ಪಂಚಾಯಿತಿಯನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ILMS ತಂತ್ರಾಂಶದಲ್ಲಿ ನೋಂದಾಯಿಸಲಾಗುವುದು. ನಂತರ, ಮರಳು ಪಡೆಯುವ ಯಾವುದೇ ಸ್ಥಳೀಯ ವ್ಯಕ್ತಿಗಳು ಸರ್ಕಾರವು ಪ್ರತಿ ಮೆಟ್ರಿಕ್ ಟನ್ ಮರಳಿಗೆ ನಿಗದಿಪಡಿಸಿರುವ ರೂ.300 ಗಳನ್ನು ಗ್ರಾಮ ಪಂಚಾಯಿತಿಗೆ ಪಾವತಿಸಿ ತನ್ನ ಸ್ವಂತ ಖರ್ಚಿನಲ್ಲಿ ಗ್ರಾಮ ಪಂಚಾಯಿತಿಯ ಪ್ರತಿನಿಧಿಯ ಸಮ್ಮುಖದಲ್ಲಿ ನಿಗದಿತ ಪುದೇಶದಲ್ಲಿ ಮರಳನ್ನು ತುಂಬಿಕೊಂಡು ಹೋಗಬಹುದಾಗಿದೆ ಎಂದಿದ್ದಾರೆ.
ಗ್ರಾಮ ಪಂಚಾಯಿತಿ ವತಿಯಿಂದ ಮಾರಾಟ ಮಾಡುವ ಪ್ರತಿ ಟನ್ ಮರಳು ಮಾರಾಟದ ಮೊತ್ತದಲ್ಲಿ ನಿಯಮಾನುಸಾರದ ರಾಜಧನವನ್ನು ಸರ್ಕಾರಕ್ಕೆ ಹಾಗೂ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯ ವಂತಿಕೆಯನ್ನು ಜಿಲ್ಲಾ ಖನಿಜ ಪ್ರತಿಷ್ಟಾನಕ್ಕೆ ಪಾವತಿಸಿ, ಉಳಿಕೆ ಮೊತ್ತವನ್ನು ಸಂಬಂಧಿಸಿದ ಗ್ರಾಮ ಪಂಚಾಯಿತಿಗಳು ಮರಳಿನ ಸಂಬಂಧದ ನಿರ್ವಹಣಾ ವೆಚ್ಚಕ್ಕೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಹೊಸ ಮರಳು ನೀತಿ, 2020 ಹಾಗೂ ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, 2021 ರಲ್ಲಿ 1, 2, ಮತ್ತು 3 ಶ್ರೇಣಿಯ ಹಳ್ಳಗಳ ಪಾತ್ರಗಳಲ್ಲಿ ಲಭ್ಯವಿರುವ ಮರಳನ್ನು ಗ್ರಾಮ ಪಂಚಾಯಿತಿ ಮೂಲಕ ವಿಲೇಪಡಿಸಲು ಅವಕಾಶ ಕಲ್ಪಿಸಲಾಗಿದ್ದು, ಆಯಾ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಸ್ಥಳೀಯ ಮನೆ ನಿರ್ಮಾಣ, ಸರ್ಕಾರದ ಅನುದಾನಿತ ಯೋಜನೆಯಡಿ ನಿರ್ಮಾಣವಾಗುವ ಮನೆ ಹಾಗೂ ಇತರ ಸಮುದಾಯ ನಿರ್ಮಾಣ ಕಾಮಗಾರಿಗಳಿಗೆ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ ಎಂದಿದ್ದಾರೆ.
ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, 2021 ರ ನಿಯಮ 31-T ರಂತೆ ಗ್ರಾಮ ಆ ಪಂಚಾಯಿತಿ ವ್ಯಾಪ್ತಿಯಲ್ಲಿ ಎತ್ತಿನಗಾಡಿ, ಟ್ರಾಕ್ಟರ್, ಇತ್ಯಾದಿ ವಾಹನಗಳ ಮೂಲಕ ಮರಳು ಸಾಗಾಣಿಕೆ ಮಾಡುವವರು ಪ್ರತಿ ಮೆಟ್ರಿಕ್ ಟನ್ ಗೆ ನಿಗದಿತ ಶುಲ್ಕ ರೂ. 300/-ಗಳನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ ಪಾವತಿಸಿ, ಮರಳು ಸಾಗಾಣಿಕೆ ಪರವಾನಿಗೆ ಪಡೆದು ಸಾಗಾಣಿಕೆ ಮಾಡಬಹುದಾಗಿರುತ್ತದೆ ಎಂದು ವಿವರಿಸಿದ್ದಾರೆ.




