ಬೆಂಗಳೂರು-ಮೈಸೂರು ಹೆದ್ದಾರಿ -275ರ ಯ ಹನಕರೆ ಮತ್ತು ಮಲ್ಲಯ್ಯನ ದೊಡ್ಡಿ ಬಳಿಯಲ್ಲಿ ಸ್ಥಳೀಯ ಸಾರ್ವಜನಿಕರ ಓಡಾಟಕ್ಕಾಗಿ ಹೆದ್ದಾರಿ ಕೆಳಸೇತುಗಳನ್ನು ನಿರ್ಮಿಸುವಂತೆ ಒತ್ತಾಯಿಸಿ ಫೆ.20ರಂದು ಹೆದ್ಧಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಹನಗೆರೆ ಗ್ರಾಮದಿಂದ 600 ಮೀಟರ್ ದೂರದಲ್ಲಿ ಕೆಳಸೇತುವೆ ನಿರ್ಮಾಣ ಮಾಡಿರುವುದರಿಂದ ಸುತ್ತಮುತ್ತಲ 30 ಗ್ರಾಮಗಳ ಜನರು ಸುತ್ತಿ ಬಳಸಿ ಓಡಾಡುವಂತಾಗಿದೆ. ಈ ಹಿಂದೆ ಕೆಳಸೇತುವೆ ಮಾಡಿಸುವಂತೆ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಅವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.
ಗೌಡಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದೇಗೌಡ ಮಾತನಾಡಿ, ಕೆಳಸೇತುವೆಯನ್ನು ದೂರದಲ್ಲಿ ನಿರ್ಮಾಣ ಮಾಡಿರುವುದರಿಂದ ಜನಸಾಮಾನ್ಯರು ಶಾಲೆ-ಕಾಲೇಜುಗಳು, ಅಸ್ಪತ್ರೆ, ಡೈರಿ, ಪಶುಚಿಕಿತ್ಸಾಲಯಗಳಿಗೆ ಹೋಗಬೇಕಾದರೆ ಸುತ್ತು ಬಳಸಿ ಹೋಗುವಂತಾಗಿದೆ. ಇದರಿಂದಾಗಿ ಸ್ಥಳೀಯರಿಗೆ ತೀವ್ರವಾದ ತೊಂದರೆಯಾಗಿದೆ. ಅಲ್ಲದೆ ಈ ಹೆದ್ದಾರಿ ನಿರ್ಮಾಣದ ನಂತರ ಈ ಭಾಗದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಛಾಗಿವೆ. ಆದ್ದರಿಂದ ಜನರಿಗೆ ಅನುಕೂಲವಾಗುವಂತೆ ಗ್ರಾಮಗಳ ಬಳಿಯಲ್ಲೆ ಕೆಳಸೇತುವೆಗಳನ್ನು ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದರು.
ಫೆ.20ರಂದು ಹೆದ್ದಾರಿ ಬಂದ್
ಕೆಳಸೇತುವೆಗಳ ನಿರ್ಮಾಣಕ್ಕೆ ಆಗ್ರಹಿಸಿ ಫೆ.20ರಂದು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು, ಈ ಹೋರಾಟದಲ್ಲಿ ಬಿ.ಗೌಡಗೆರೆ, ಕನ್ನಲಿ ಹಾಗೂ ಹನಕೆರೆ ಗ್ರಾಮ ಪಂಚಾಯಿತಿಯ ಎಲ್ಲಾ ಗ್ರಾಮಸ್ಥರು ಜಾನುವಾರುಗಳು ಹಾಗೂ ಎತ್ತಿನಗಾಡಿಯ ಸಮೇತ ಬಂದು ಪ್ರತಿಭಟನೆ ನಡೆಸಲಿದ್ದಾರೆಂದು ಎಂದು ಹೇಳಿದರು.
ಗೋಷ್ಠಿಯಲ್ಲಿ ಮುಖಂಡರಾದ ಮಹೇಶ್, ಸತೀಶ್, ನಾಗರಾಜು, ಜಯರಾಂ ಮತ್ತಿತರರು ಉಪಸ್ಥಿತರಿದ್ದರು.




