ಕೆ.ಆರ್.ಪೇಟೆ ತಾಲೂಕಿನ ಮತ್ತಿಘಟ್ಟ ಗ್ರಾಮದಲ್ಲಿ ಕಿಡಿಗೇಡಿಗಳು ಕಬ್ಬಿನ ಬೆಳೆಗೆ ಬೆಂಕಿಹಚ್ಚಿ ವಿಕೃತಿ ಮೆರೆದ
ಹಿನ್ನೆಲೆಯಲ್ಲಿ ಎರಡೂವರೆ ಎಕರೆ ಭೂಮಿಯಲ್ಲಿ ಬೆಳೆದಿದ್ದ ಕಬ್ಬು ಹಾಗೂ ನೂರಾರು ತೆಂಗಿನ ಸಸಿಗಳು ಸುಟ್ಟು ಕರಕಲಾಗಿದ್ದು ಲಕ್ಷಾಂತರ ರೂಪಾಯಿ ನಷ್ಠ ಸಂಭವಿಸಿದೆ.
ಕೆ.ಆರ್.ಪೇಟೆ ತಾಲೂಕಿನ ಕಸಬಾ ಹೋಬಳಿ ಮತ್ತಿಘಟ್ಟ ಗ್ರಾಮದ ದಿವಂಗತ ನಾರಾಯಣ ಅವರ ಪತ್ನಿ ನಂದಿನಿ ಅವರು ಮತ್ತಿಘಟ್ಟ ಸರ್ವೇ ನಂಬರ್ 7ರ ಎರಡೂವರೆ ಎಕರೆ ಕೃಷಿಭೂಮಿಯಲ್ಲಿ ಬೆಳೆದಿದ್ದ ಕಬ್ಬಿನ ಬೆಳೆಗೆ ಕಿಡಿಗೇಡಿಗಳು ನಿನ್ನೆ ಸಂಜೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದು ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ
ಬೆಂಕಿಯನ್ನು ನಂದಿಸುವ ವೇಳೆಗೆ ಕಾಳ್ಗಿಚ್ಚಿನಂತೆ ಹಬ್ಬಿದ ಬೆಂಕಿಯ ಕೆನ್ನಾಲಿಗೆಗೆ ಕಬ್ಬು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಕಬ್ಬಿನ ಬೆಳೆಯ ಮಧ್ಯದಲ್ಲಿ ಅಲ್ಲಲ್ಲಿ ಬೆಳೆದಿದ್ದ ನೂರಾರು ತೆಂಗಿನ ಸಸಿಗಳು ಕೂಡಾ ಸುಟ್ಟು ಭಸ್ಮವಾಗಿವೆ. ಜೀವನಾಧಾರವಾದ ತೆಂಗಿನ ಸಸಿಗಳು ಹಾಗೂ ಕಬ್ಬಿನ ಬೆಳೆಯನ್ನು ಕಳೆದುಕೊಂಡಿರುವ ಪ್ರಗತಿಪರ ರೈತ ಮಹಿಳೆಯಾಗಿರುವ ಸಾಮಾಜಿಕ ಕಾರ್ಯಕರ್ತೆ ನಂದಿನಿ ಕಂಗಾಲಾಗಿದ್ದಾರೆ. ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ನನ್ನ ಕಬ್ಬಿನ ತೋಟಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.
ಈ ಬಗ್ಗೆ ಕೆ.ಆರ್.ಪೇಟೆ ಗ್ರಾಮಾಂತರ ಪೋಲಿಸರು ನಿಷ್ಪಕ್ಷಪಾತ ತನಿಖೆ ನಡೆಸಿ, ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.




