ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯವು ವಿಶ್ವದಲ್ಲಿಯೇ ಯಾವುದೂ ಇಲ್ಲವಾದ್ದರಿಂದ ಗ್ರಾಮೀಣ ಜನರು
ವಯಕ್ತಿಕ ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಒತ್ತು ನೀಡಿ ಕುಡಿಯಲು ಶುದ್ಧವಾದ ನೀರನ್ನು ಬಳಸಿ, ಪೌಷ್ಠಿಕಾಂಶಗಳಿಂದ ಕೂಡಿರುವ ಆಹಾರವನ್ನು ಸೇವಿಸಿ ನೂರ್ಕಾಲ ಆರೋಗ್ಯವಂತರಾಗಿ ನೆಮ್ಮದಿಯ ಜೀವನ ನಡೆಸಬೇಕು ಎಂದು ರಾಜ್ಯದ ಯುವಜನ ಸಬಲೀಕರಣ ಕ್ರೀಡೆ ಹಾಗೂ ರೇಷ್ಮೆ ಸಚಿವರಾದ ಡಾ.ನಾರಾಯಣಗೌಡ
ಕರೆ ನೀಡಿದರು.
ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಪಂಚಾಯಿತಿ,
ತಾಲೂಕು ಆಡಳಿತ, ಆದಿಚುಂಚನಗಿರಿ ಸಂಶೋಧನಾ ಕೇಂದ್ರ ಮತ್ತು ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಬೃಹತ್ ರಕ್ತದಾನ ಶಿಬಿರವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಕೋವಿಡ್ ಮಹಾಮಾರಿಯ ರುದ್ರನರ್ತನಕ್ಕೆ ಇಡೀ ವಿಶ್ವವೇ ಇಂದು ನಲುಗಿದೆ. ತಂದೆತಾಯಿಗಳು ಹಾಗೂ ಬಂಧುಗಳನ್ನು ಕಳೆದುಕೊಂಡು ಸಾವಿರಾರು ಜನರು ಅನಾಥರಾಗಿದ್ದಾರೆ. ಪರಿಸರ ನಾಶದಿಂದಾಗಿ ವಿಶ್ವವೇ ಇಂದು ಸಂಕಷ್ಠಕ್ಕೆ ಸಿಲುಕಿದೆ. ಉಸಿರಾಟಕ್ಕೆ ಪ್ರಾಣವಾಯುವಾದ ಆಮ್ಲಜನಕವು ಸಿಗದೇ ನೂರಾರು ಜನರು ಪ್ರಾಣ
ಕಳೆದುಕೊಂಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಪರಿಸರದ ಮಹತ್ವ ಹಾಗೂ ಪ್ರಾಣವಾಯುವಿನ ಬೆಲೆಯ ಬಗ್ಗೆ ನಮಗೆ ಮನವರಿಕೆಯಾಗಿದೆ ಎಂದರು.
ಸಂತೇಬಾಚಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್
ನಿಸರ್ಗಪ್ರಿಯ, ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಸತೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಂ, ಎಪಿಎಂಸಿ ಕಾರ್ಯದರ್ಶಿ ಸತೀಶ್, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್,
ಭೋಜರಾಜು, ಸಿಡಿಪಿಓ ಅರುಣಕುಮಾರ್ ಮತ್ತಿತರರು ಭಾಗವಹಿಸಿದ್ದರು.




