ರೈತರ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ, ಈ ಹಿಂದೆ ಹೇಗಿತ್ತೋ ಅದೇ ಸಮಸ್ಯೆಗಳು ಹಾಗೆಯೇ ಉಳಿದಿವೆ. ರೈತರ ಚಳವಳಿಗಳು ಬಹುದೊಡ್ಡ ಮಟ್ಟದಲ್ಲಿ ನಡೆಯಬೇಕಿದೆ,ಸರ್ಕಾರವನ್ನು ಸದಾ ಎಚ್ಚೆತ್ತುಕೊಳ್ಳುವಂತೆ ಮಾಡಬೇಕಿದೆ. ಕೃಷಿ ವಾಣಿಜ್ಯ ಒಪ್ಪಂದ ಆದ ಮೇಲೆ ರೈತರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಸಾಮೂಹಿಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್ ಕಳವಳ ವ್ಯಕ್ತಪಡಿಸಿದರು.
ಮಂಡ್ಯ ನಗರದ ಗಾಂಧಿ ಭವನದಲ್ಲಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ವಿಚಾರ ವೇದಿಕೆ ವತಿಯಿಂದ ಮಂಡ್ಯ ರೈತರ ಸ್ವಾಭಿಮಾನಿ ದಿನದ ಅಂಗವಾಗಿ ಆಯೋಜಿಸಿದ್ದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 18ನೇ ಸಂಸ್ಮರಣೆ ಮತ್ತು ಕೆ.ಎಸ್.ಪುಟ್ಟಣ್ಣಯ್ಯ ಅವರ 5ನೇ ಸಂಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಡಿಕೆ, ಕೊಬ್ಬರಿ ಸೇರಿದಂತೆ ಇತರೆ ಬೆಳೆಗಳಿಗೆ ಬೆಂಬಲ ಬೆಲೆ ಸಿಗದೇ ರೈತರು ಪರಿತಪಿಸುವಂತಾಗಿದೆ. ಇದಕ್ಕೆಲ್ಲ ಕೃಷಿ ವಾಣಿಜ್ಯ ಒಪ್ಪಂದವೇ ಕಾರಣವಾಗಿದೆ. ರೈತರ ಎಲ್ಲ ಬೆಳೆಗಳು ಪಾತಾಳಕ್ಕೆ ಕುಸಿದಿದೆ. ತೊಗರಿ, ಭತ್ತ, ಬೇಳೆ, ಗೋಧಿ, ಕಬ್ಬಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ, ಪರಕೀಯ ಆಡಳಿತದಲ್ಲಿ ಇದ್ದೇವೆನೋ ಎಂಬಂತೆ ಸರ್ಕಾರಗಳು ರೈತರನ್ನು ನಿರ್ಲಕ್ಷಿಸುತ್ತಿರುವುದು ಆತಂಕಕ್ಕೆ ಹೀಡು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಕೀಲ ಬೂದನೂರು ಬೊಮ್ಮಯ್ಯ ಮಾತನಾಡಿ, ಹಣಕ್ಕೋಸ್ಕರ ರೈತರು ಫಲವತ್ತಾದ ಭೂಮಿಯನ್ನೇ ಮಾರಾಟ ಮಾಡುವುದು ಬೇಡ, ಕೃಷಿ ಕ್ಷೇತ್ರದಲ್ಲಿ ಹೊಸತನದೊಂದಿಗೆ ಆಯ್ಕೆ ಮಾಡಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ರೈತರ ಬಗ್ಗೆ ಜನಪ್ರತಿನಿಧಿಗಳು ಕಾಳಜಿ ತೋರಿಸುತ್ತಿಲ್ಲ, ಮಂಡ್ಯ ಜಿಲ್ಲೆ ಅಭಿವೃದ್ಧಿಯು ಕುಂಠಿತವಾಗಿದೆ. ರೈತರ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಆತಂಕ ಪಟ್ಟರು.
ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಎಂ.ಎಸ್.ಆತ್ಮಾನಂದ, ಬೂದುನೂರು ಬೊಮ್ಮಯ್ಯ, ಶಂಭೂನಹಳ್ಳಿ ಸುರೇಶ್, ಬೋರಾಪುರ ಶಂಕರೇಗೌಡ, ಕೀಲಾರ ಸೋಮಶೇಖರ್ ಸೇರಿದಂತೆ ಇತರರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ರೈತರು, ಹೋರಾಟಗಾರರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಘಟಕ ಅಧ್ಯಕ್ಷ ಕೆ.ಟಿ.ಗಂಗಾಧರ್, ರೈತ ಮುಖಂಡರಾದ ಸುನೀತಾ ಪುಟ್ಟಣ್ಣಯ್ಯ, ಎಂ.ಎಸ್.ಆತ್ಮಾನಂದ, ಜಿ.ಬಿ.ಶಿವಕುಮಾರ್, ಬೆಳ್ಳೂರು ಶಿವರಾಂ, ಪಿ.ಕೆ.ನಾಗಣ್ಣ ಪಣಕನಹಳ್ಳಿ, ಹಸಿರು ಸೇನೆ ಶಿವರಾಮು ಸೇರಿದಂತೆ ರೈತ ಮುಖಂಡರು ಭಾಗವಹಿಸಿದ್ದರು.




