ಪತ್ರಕರ್ತರು ಸದಾ ಸಮಾಜಮುಖಿ ಕೆಲಸಗಳನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿದ್ದು, ನಾವೆಲ್ಲರೂ ಒಂದುಗೂಡಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡೋಣ ಎಂದು ಶಾಸಕ ಸಿ.ಎಸ್. ಪುಟ್ಟರಾಜು ತಿಳಿಸಿದರು.
ಮಂಡ್ಯ ನಗರದ ಕರ್ನಾಟಕ ಸಂಘದ ಆವರಣದಲ್ಲಿ ಪ್ರಜಾ ವಾರ್ತೆ ಪತ್ರಿಕೆಯ ಪ್ರಬುದ್ಧ ಪ್ರಜಾ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತರು ನಮ್ಮಂತಹ ರಾಜಕಾರಣಿಗಳ ಜವಾಬ್ದಾರಿಯನ್ನು ಸದಾ ನೆನಪಿಸುತ್ತಿರಬೇಕು. ಅಭಿವೃದ್ಧಿ ವಿಚಾರದಲ್ಲಿ ನಮ್ಮ ಕರ್ತವ್ಯವನ್ನು ಸದಾ ಜ್ಞಾಪಿಸಬೇಕು, ನಾವೇನಾದರೂ ಎಡವಿದರೆ ನಮ್ಮನ್ನು ಎಚ್ಚರಿಸಿ ತಿದ್ದುವ ಕೆಲಸ ಮಾಡಬೇಕು ಎಂದರು.
ನಾವು ಯಾವುದೇ ಪಕ್ಷದ ರಾಜಕಾರಣಿಗಳಾಗಿದ್ದರೂ ಜಿಲ್ಲೆಯ ಅಭಿವೃದ್ಧಿ ವಿಚಾರ ಬಂದಾಗ ರಾಜಕಾರಣ ಮಾಡುವುದನ್ನು ಬಿಟ್ಟು ಎಲ್ಲರೂ ಕೈಜೋಡಿಸಿ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಿದೆ. ಪತ್ರಿಕಾ ರಂಗ ನಮ್ಮನ್ನು ಸದಾ ಎಚ್ಚರಿಸುವ ಕೆಲಸ ಮಾಡಬೇಕಿದೆ ಎಂದರು.
ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್ ಪ್ರಬುದ್ಧ ಪ್ರಜಾ ವಿಶೇಷ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಪತ್ರಿಕೆಗಳ ಪಾತ್ರ ಅಪಾರವಾಗಿದೆ. ಪತ್ರಕರ್ತರ ಕೆಲಸ ತಂತಿಯ ಮೇಲಿನ ನಡಿಗೆಯಂತಾಗಿದೆ. ಸಮಾಜದ ನಡುವೆ ನಿಂತು ಮಾಹಿತಿ ನೀಡುವ ಕೆಲಸ ಮಾಡುತ್ತಿರುವ ಪತ್ರಕರ್ತರ ಕೆಲಸ ಶ್ಲಾಘನೀಯ. ಪ್ರಜಾವಾರ್ತೆಯ ನವೀನ್ ಕುಮಾರ್ ಅವರು ಪತ್ರಿಕಾರಂಗದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಕೋರಿದರು.
ಸಿದ್ದಾರೂಢ ಸತೀಶ್ ಗೌಡ ಮಾತನಾಡಿ, ಸಮಾಜದ ಅಂಕು ಡೊಂಕುಗಳನ್ನು ತಿದ್ದುತ್ತ,ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಪತ್ರಕರ್ತರ ಕೆಲಸ ಬಹಳ ಕಷ್ಟಕರ. ನಮ್ಮ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಒಂದುಗೂಡಿ ಕೆಲಸ ಮಾಡೋಣ, ಚುನಾವಣೆ ಬಂದಾಗ ಚುನಾವಣೆ ಮಾಡೋಣ ಎಂದರು.

ಕಾಂಗ್ರೆಸ್ ನಾಯಕ ಡಾ. ಕೃಷ್ಣ ಮಾತನಾಡಿ ಪ್ರಸ್ತುತ ಸಂದರ್ಭದಲ್ಲಿ ದಿನ ಪತ್ರಿಕೆ ನಡೆಸುವುದು ಕಷ್ಟಕರವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ದಿನಕ್ಕೊಂದು ಪತ್ರಿಕೆ ಬರುತ್ತಿರುವ ಸಂದರ್ಭದಲ್ಲಿ ಜನರನ್ನು ತಿದ್ದಿ ಬುದ್ಧಿ ಹೇಳುವ ಕೆಲಸ ಮಾಡುತ್ತಿರುವ ಪ್ರಾಮಾಣಿಕ ಪತ್ರಕರ್ತರ ಸಂಖ್ಯೆ ಹೆಚ್ಚಾಗಬೇಕಿದೆ ಎಂದರು.
ಮತ್ತೀಕೆರೆ ಜಯರಾಮ್ ಮಾತನಾಡಿ, ಇಂದು ಸಮಾಜ ಸೇವೆ ಹೆಸರಿನಲ್ಲಿ ಹಲವರು ರಾಜಕಾರಣಕ್ಕೆ ಬಂದು ಟೆಂಟ್ ಹಾಕಿದ್ದಾರೆ. ಅದೇ ರೀತಿ ಚುನಾವಣೆ ಸಂದರ್ಭದಲ್ಲಿ ಕೆಲವು ಟ್ಯಾಬ್ಲಾಯ್ಡ್ ಗಳು ಹುಟ್ಟಿಕೊಂಡಿದೆ.ಇವೆಲ್ಲ ತಾತ್ಕಾಲಿಕ ಅಷ್ಟೇ.ಚುನಾವಣೆ ನಂತರ ಅಷ್ಟೇ ವೇಗವಾಗಿ ನಶಿಸುತ್ತವೆ ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ.ಮಂಜುನಾಥ್, ಕೆ.ಎನ್.ರವಿ, ಉದ್ಯಮಿ ಹಾಳೇಗೌಡ, ಕೆ.ಎನ್.ನವೀನ್ ಕುಮಾರ್, ನಂಜುಂಡಸ್ವಾಮಿ ಮತ್ತಿತರರಿದ್ದರು. ಎಂ.ಯು.ಶ್ವೇತಾ ನಿರೂಪಣೆ ಮಾಡಿದರು.




