Saturday, November 21, 2026

ಪ್ರಾಯೋಗಿಕ ಆವೃತ್ತಿ

ಡಿಸಿಸಿ ಬ್ಯಾಂಕ್ ನೀಡುವ ಸಾಲ ಸೌಲಭ್ಯ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಿ: ಪಿ‌.ಎಂ.ನರೇಂದ್ರಸ್ವಾಮಿ

ಗ್ರಾಮೀಣ ಜನರಿಗೆ ಸಾಲ ಕೊಟ್ಟು ಕಿತ್ತು ತಿನ್ನುತ್ತಿರುವ ಮೈಕ್ರೋ ಫೈನಾನ್ಸ್ ಹಾವಳಿ ತಪ್ಪಿಸಲು ಡಿಸಿಸಿ ಬ್ಯಾಂಕ್ ವತಿಯಿಂದ ಪ್ರಾಥಮಿಕ ಸಹಕಾರ ಸಂಘದ ಮೂಲಕ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ವಿತರಣೆ ಮಾಡಲಾಗುತ್ತಿದ್ದು,ಇದರ ಸದುಪಯೋಗ ಪಡೆದು ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕೆಂದು ಕೆಪಿಸಿಸಿ ಉಪಾಧ್ಯಕ್ಷ,ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಮಳವಳ್ಳಿ ತಾಲ್ಲೂಕಿನ ಬೆಂಡರವಾಡಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲದ ಚೆಕ್ ವಿತರಿಸಿ ಮಾತನಾಡಿದ ಅವರು,ಖಾಸಗಿ ಸಾಲಗಳಿಂದ ಹಳ್ಳಿಗರ ಬದುಕು
ದುಸ್ತರವಾಗಿದೆ. ಒಂದು ಸಾಲವನ್ನು ತೀರಿಸಲು ಮತ್ತೊಬ್ಬರಿಂದ ಸಾಲ ಪಡೆದು ಕಟ್ಟುವುದರ ಮೂಲಕ ಪಡೆದ ಸಾಲದಷ್ಟೆ ಬಡ್ಡಿಯನ್ನು ಕಟ್ಟಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದರ ಬದಲು ಸಮಸ್ಯೆಯನ್ನು ಮುಂದೂಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಖಾಸಗಿ ಸಾಲಗಳನ್ನು ಪಡೆದು ಶೋಷಣೆಗೊಳಗಾಗುವುದನ್ನು ತಪ್ಪಿಸಿ, ಬದುಕು ಕಟ್ಟಿಕೊಳ್ಳಲು ಸಹಕಾರ ಸಂಘದಿಂದ ನೀಡುವ ಸಾಲವನ್ನು ಸದ್ಬಳಕೆ ಮಾಡಿಕೊಂಡು ಹೆಚ್ಚು ಆದಾಯ ಬರುವಂತ ವೃತ್ತಿಯನ್ನು ರೂಢಿಸಿಕೊಂಡು ಅರ್ಥಿಕತೆಯಲ್ಲಿ ಸದೃಢರಾಗಬೇಕೆಂದು ಸಲಹೆ ನೀಡಿದರು.

ಸ್ತ್ರೀ ಶಕ್ತಿ ಸಂಘಗಳು ಆರಂಭಿಸುವ ಉತ್ಪಾದನಾ ಕ್ಷೇತ್ರಕ್ಕೆ ಅತಿ ಕಡಿಮೆ ಬಡ್ಡಿಯಲ್ಲಿ ಡಿಸಿಸಿ ಬ್ಯಾಂಕ್ ಹಾಗೂ ನಬಾರ್ಡ್ ನಿಂದ ಸಾಲ ಸೌಲಭ್ಯ ನೀಡುವುದರ ಜೊತೆಗೆ ಮಹಿಳೆಯರಿಗೆ ಉಚಿತವಾಗಿ ತಮಗೆ ಅನುಕೂಲವಾಗುವ ಉತ್ಪನ್ನಗಳ ತಯಾರಿಕೆಗೆ ಬೇಕಾಗುವ ತರಬೇತಿಯನ್ನು ನೀಡಲಾಗುವುದು ಎಂದರು.

ಕುಟುಂಬದ ಜವಾಬ್ದಾರಿಯನ್ನು ಹೊತ್ತಿರುವ ಮಹಿಳೆಯರಿಗೆ ಇತ್ತೀಚಿಗೆ ಸಾಲದ ಹೊರೆಯೂ ಹೆಚ್ಚಾಗಿ ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ಪುರುಷರು ಅಥವಾ ಮಹಿಳೆಯರು ಸಂಘಗಳನ್ನು ಸ್ಥಾಪಿಸಿಕೊಂಡರೇ ಸಹಕಾರ ಸಂಘದಿಂದ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷದವರೆಗೆ ಸಾಲ
ನೀಡಲಾಗುತ್ತದೆ‌. ಹೆಚ್ಚುವರಿಯಾಗಿ ಸಾಲ ಬೇಕಾದರೆ ಕಡಿಮೆ ಬಡ್ಡಿಯಲ್ಲಿ ಸಾಲ ನೀಡಲಾಗುವುದು. ಹಪ್ಪಳ,ಸಂಡಿಗೆ ಮೇಣದಬತ್ತಿ, ಉಪ್ಪಿನಕಾಯಿ ಸೇರಿದಂತೆ ಇತರೆ ಉಪ ಉತ್ಪನ್ನ ತಯಾರಿಕಾ ಘಟಕ ಸ್ಥಾಪನೆ ಜೊತೆಗೆ ನಾಡ ಹಸುಗಳನ್ನು ಸಾಕುವುದರಿಂದ ಹೆಚ್ಚು
ಲಾಭವನ್ನು ಪಡೆಯಬಹುದಾಗಿದೆ ಎಂದು ಹೇಳಿದರು.

ಬೆಂಡರವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 6 ಸಂಘಗಳಿಗೆ ಸಾಲ ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಜಿ.ಪಂ‌ ಮಾಜಿ ಸದಸ್ಯೆ ಸುಜಾತ ಕೆ‌.ಎಂ‌.ಪುಟ್ಟು, ಮುಖಂಡರಾದ ಮಹದೇವ, ದೇವರಾಜು, ಸಿದ್ದಪ್ಪ, ಮಹದೇವಗೌಡ ಸೇರಿದಂತೆ ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ