✍️ ಡಾ.ಬಸವರಾಜ್ ಬಿ.ಸಿ.
ಶ್ರೀರಂಗಪಟ್ಟಣದ ಟಿಪ್ಪು ಸುಲ್ತಾನ್ ಅವರನ್ನು ಕೊಂದವರು ಉರಿಗೌಡ-ನಂಜೇಗೌಡ ಎಂಬ ಒಕ್ಕಲಿಗ ಸಮುದಾಯಕ್ಕೆ ಸೇರಿದವರು ಎಂದು ಇತ್ತೀಚಿಗೆ ಕೆಲವು ತಿಂಗಳುಗಳಿಂದ ಪದೇ ಪದೇ ಕೇಳಿಬರುತ್ತಿದೆ. ಉನ್ನತ ಶಿಕ್ಷಣ ಸಚಿವರಾದ ಅಶ್ವತ್ಥ ನಾರಾಯಣ ಅವರು ಕೂಡ ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕೂಡ ಉರಿಗೌಡ-ನಂಜೇಗೌಡ ಟಿಪ್ಪು ಸುಲ್ತಾನ್ ಅವರನ್ನು ಕೊಂದರು ಎಂದು ಹೇಳಿದ್ದರು. ಇದನ್ನು ಕೇಳಿದಾಗ ಸ್ವತಃ ನನಗೆ ಹಾಗೂ ನನ್ನಂಥ ಅನೇಕರಿಗೆ ಆಶ್ಚರ್ಯವಾಯಿತು. ಉರಿಗೌಡ-ನಂಜೇಗೌಡ ಹೆಸರನ್ನು ಎಲ್ಲಿ ಕೇಳಿದ್ವಿ? ಎಂದು ನೆನಪಿಸಿಕೊಳ್ಳುತ್ತಾ ಹೋದರೆ ನಾವು ಶಾಲೆಯಲ್ಲಿ ಓದುವಾಗವಾಗಲೀ, ಚರಿತ್ರೆಯ ಪುಸ್ತಕಗಳಲ್ಲಿಯಾಗಲೀ ಎಲ್ಲೂ ಕೂಡ ಉರಿಗೌಡ-ನಂಜೇಗೌಡ ಹೆಸರನ್ನು ಕೇಳಿಲ್ಲ.
ಟಿಪ್ಪು ಸುಲ್ತಾನ್‌ನನ್ನು 4ನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬ್ರಿಟಿಷರು ಕೊಂದರು ಮತ್ತು ಆ ಯುದ್ಧ ನಡೆಯುವಾಗ ಟಿಪ್ಪುವಿನ ಜೊತೆಯಲ್ಲೇ ಇದ್ದ ಮೀರ್ ಸಾದಿಕ್, ಟಿಪ್ಪು ಸುಲ್ತಾನನಿಗೆ ವಂಚನೆ ಮಾಡಿ ಫಿರಂಗಿಗಳು ಕೆಲಸ ಮಾಡದಂತೆ ಮಾಡಿದ್ದ. 1799 ಮೇ 4ರಂದು ಟಿಪ್ಪು ಹತನಾದ ದಿನ ಕೋಟೆಯಲ್ಲಿ, ಬಿರುಕು ಬಿಟ್ಟಿತ್ತು. ಕೋಟೆಯಲ್ಲಿ ಕಾವಲು ನಿಂತಿದ್ದ ಸೈನಿಕರನ್ನು ಬೇರೆ ನೆಪ ಹೇಳಿ, ಮೀರ್ ಸಾದಿಕ್ ಬೇರೆ ಕಡೆಗೆ ಕಳುಹಿಸಿ, ಬ್ರಿಟಿಷರು ಕೋಟೆಯೊಳಗೆ ನುಗ್ಗುವಂತೆ ಮಾಡಿ ವಂಚಿಸಿದ್ದು ಟಿಪ್ಪುವಿನ ಸೋಲಿಗೆ ಕಾರಣವಾಯಿತು ಎಂಬುದು ಟಿಪ್ಪುಸುಲ್ತಾನನ ಇತಿಹಾಸ ಓದಿದಾಗ ನಾವು ತಿಳಿದುಕೊಂಡಿರುವುದು.
ಇನ್ನೂ ಮುಂದುವರೆದು ಕಥೆಯಾಗಿ ಏನು ಕೇಳಿದ್ದೀವಿ ಅಂತ ನೋಡಿದರೆ, ಟಿಪ್ಪು ಸುಲ್ತಾನರಂತೆಯೇ 12ಜನ ಇದ್ರಂತೆ. ಮೀರ್ ಸಾದಿಕ್‌ಗೆ ಮಾತ್ರ ನಿಜವಾದ ಟಿಪ್ಪು ಸುಲ್ತಾನ್ ಯಾರು ಅಂತ ಗೊತ್ತಿತ್ತಂತೆ, ಅದರಿಂದಾಗೇ ಇವನು ನಿಜವಾದ ಟಿಪ್ಪು ಯಾರು ಅಂತ ಬ್ರಿಟಿಷರಿಗೆ ಗುರುತಿಸಿ ತೋರಿಸಿಕೊಟ್ಟಿದ್ದನಂತೆ. ಆದರೆ ಇಷ್ಟು ಹಲವಾರು ಪುಸ್ತಕಗಳನ್ನು ಓದಿರೋದ್ರಲ್ಲಿ ಎಲ್ಲೂ ಕೂಡ ಟಿಪ್ಪು ಸುಲ್ತಾನ್‌ನನ್ನು ಉರಿಗೌಡ-ನಂಜೇಗೌಡ ಎಂಬವರು ಕೊಂದರು ಎಂಬ ವಿಷಯ ಕೇಳಲೇ ಇಲ್ಲ.
ಹಾಗಾದ್ರೆ ಇದ್ದಕ್ಕಿದ್ದಂತೆ ಕೆಲವು ವರ್ಷಗಳಿಂದೀಚೆಗೆ ಉರಿಗೌಡ-ನಂಜೇಗೌಡ ಹೆಸರುಗಳು ಕೇಳಿಬರುತ್ತಿದೆಯಲ್ಲ, ಅದರಲ್ಲೂ ಬಿಜೆಪಿ ಮತ್ತು ಆರ್‍ಎಸ್‌ಎಸ್ ಮತ್ತು ಅದರಲ್ಲಿ ಗುರುತಿಸಿಕೊಂಡವರ ಬಾಯಲ್ಲಿ ಮಾತ್ರ ಕೇಳ್ತಾ ಇದೆಯಲ್ಲಾ…ಇವರು ನಿಜವಾಗಿ ಎಲ್ಲಿ ಹುಟ್ಟಿಕೊಂಡರು?
ನಿಜವಾಗ್ಲೂ ಇದ್ರಾ? ಹುಡುಕ್ತಾ ಹೋದ್ರೆ ಟಿಪ್ಪು ಸುಲ್ತಾನ್‌ನ ಬಗ್ಗೆ ಕನಿಷ್ಠ 30ರಿಂದ 40 ಪುಸ್ತಕಗಳು ಬಂದಿದೆ. ಟಿಪ್ಪುಸುಲ್ತಾನ್ ತೀರಿ ಹೋದ ಒಂದು ವರ್ಷದೊಳಗೆ ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿದ ಬುಕಾನನ್‌ನಿಂದ ಹಿಡಿದು ಇಡಬ್ಲ್ಯೂ ಥಾಮ್ಸನ್ ಆಗಿರಬಹುದು, ಹಯವದನ, ರೈಸ್ ಆಗಿರಬಹುದು ಈ ರೀತಿ ಹಲವಾರು ಮಂದಿ ಬರೆದಿರುವ ಪುಸ್ತಕಗಳಲ್ಲಿ ಎಲ್ಲೂ ಕೂಡ ಉರಿಗೌಡ-ನಂಜೇಗೌಡ ಪಾತ್ರ ಉಲ್ಲೇಖವಿಲ್ಲ.
ನಾವು ಹುಡುಕ್ತಾ ಹೋದಾಗ ನಮಗೆ ಸಿಕ್ಕಿದ ಸುದ್ದಿಯ ಮೂಲ ಸಿಕ್ಕಿದ್ದು 2017ನೇ ಇಸವಿ ಅಕ್ಟೋಬರ್ 25ರಂದು ಇಂಡಿಯನ್ ಪೀಪಲ್ಸ್ ಕಾಂಗ್ರೆಸ್ ಎಂಬ ಒಂದು ಬ್ಲಾಗ್ ಪೇಜಿನಲ್ಲಿ. ಡಾ. ಸಾಯಿ ಎನ್ನುವ ಹೆಸರಿನಲ್ಲಿ ಬರೆಯಲಾಗಿರುವ ಲೇಖನದಲ್ಲಿ ಉರಿಗೌಡ – ನಂಜೇಗೌಡ ಹುಟ್ಟಿಕೊಂಡಿದ್ದಾರೆ. ಈ ಬ್ಲಾಗಿನಲ್ಲಿ ಬರೆದಂಥವರು QUORA ದಂತಹ ವೆಬ್‌ಸೈಟ್‌ನಲ್ಲಿ ಕೂಡ ಪ್ರಕಟಿಸಿದ್ದಾರೆ. ಇದಕ್ಕೆ ಕೆಲವರು ಕಮೆಂಟ್ ಮಾಡಿ, ಇದಕ್ಕೆ ನಿಮ್ಮಲ್ಲಿರುವ ಆಧಾರ ಏನು ಅಂತ ಕೇಳಿದ್ರೆ, “ನೀವು ಲೇಖನವನ್ನು ಸರಿಯಾಗಿ ಗಮನಿಸಿ ಓದಿ, ಮೈಸೂರು ಗೆಜೆಟಿಯರ್ ಅನ್ನು ಗಮನಿಸಿ, ಅಲ್ಲಿ ಮೆನನ್ ಅನ್ನುವವರ ಪುಸ್ತಕ ನೋಡಿ” ಎಂದು ಉತ್ತರಿಸಿದ್ದಾರೆ. ಹೀಗಾಗಿ ನಾವು ಕೆಲವು ಗೆಳೆಯರೆಲ್ಲರೂ ಸೇರಿ ಮೈಸೂರು ಗೆಜೆಟಿಯರ್, ಶ್ರೀಧರ್ ಮೆನನ್ ಅವರ ಪುಸ್ತಕಗಳ ಪುಟಗಳನ್ನು ತಿರುವಿದೆವು. ಆದರೆ ಉರಿಗೌಡ-ನಂಜೇಗೌಡ ಹೆಸರು ಎಲ್ಲೂ ಉಲ್ಲೇಖವೇ ಇಲ್ಲ. ಇದರಿಂದಾಗಿ ಇದು ಸಂಪೂರ್ಣವಾಗಿ ಸೃಷ್ಟಿಸಿರುವಂತಹ ಪಾತ್ರಗಳು ಎಂಬುದು ಸಾಬೀತಾಯಿತು. ಇನ್ನೂ ಮುಂದುವರಿದು ವಾಟ್ಸಪ್ ಮತ್ತು ಫೇಸ್‌ಬುಕ್ ನಂತಹ ಸೋಶಿಯಲ್ ಮೀಡಿಯಾಗಳಲ್ಲಿ ಅದನ್ನೇ ಮತ್ತೆ ಮತ್ತೆ ಹೇಳುವ ಮೂಲಕ ಸೃಷ್ಟಿಸಿದ್ದಾರೆ. ಇದಕ್ಕೆ ಪುರಾವೆಯಾಗಿ ಕತ್ತಿ ಹಿಡಿದಿರುವ ಇಬ್ಬರು ಯೋಧರ ಫೋಟೋಗಳನ್ನು ತೇಲಿಬಿಟ್ಟರು.

ಈ ಫೋಟೋಗಳ ಹಿನ್ನೆಲೆಯನ್ನು ಹುಡುಕಿದಾಗ ನಮಗೆ ಸಿಕ್ಕಿದ ಮಾಹಿತಿ ಏನೆಂದರೆ, 18ನೇ ಶತಮಾನದಲ್ಲಿ ತಮಿಳುನಾಡಿನ ಮರುಡು ಸಹೋದರರ ಫೋಟೋ ಎಂಬುದು ನಮಗೆ ತಿಳಿದು ಬಂತು. ತಮಿಳುನಾಡಿನ ಶಿವಗಂಧ ರಾಜ್ಯದಲ್ಲಿದ್ದ ಮರಡು ಯೋಧರಿವರು. ಪೆರಿಯಾ ಮರಡು ಹಾಗೂ ಚಿನ್ನ ಮರಡು. ಇವರಿಬ್ಬರೂ ಆಗಿನ ಕಾಲಕ್ಕೆ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿ, ಸೆರೆ ಸಿಕ್ಕು ಸಾರ್ವಜನಿಕವಾಗಿ ಗಲ್ಲಿಗೇರಿಸಲ್ಪಟ್ಟ ಯೋಧರು. ಇವರ ಬಗ್ಗೆ ತಮಿಳುನಾಡಿನಲ್ಲಿ ಪ್ರತಿಮೆಗಳ ಸಹಿತ ದಾಖಲೆಗಳಿವೆ. ಆ ವೀರ ಯೋಧರ ಫೋಟೋಗಳನ್ನೇ ಬಳಸಿ ಯಾರಿಗೂ ತಿಳಿಯುವುದಿಲ್ಲವೆಂದು ಭಾವಿಸಿ ಬಿಜೆಪಿ ಮತ್ತು ಸಂಘಪರಿವಾರದವರು ಉರಿಗೌಡ- ನಂಜೇಗೌಡ ಎಂದು ಹರಿಯಬಿಟ್ಟಿದ್ದಾರೆ.
ಈ ಬೆಳವಣಿಗೆಗಳನ್ನು ಕಾಣುವಾಗ ಉರಿಗೌಡ ಮತ್ತು ನಂಜೇಗೌಡ ಎಂಬ ಪಾತ್ರಗಳು ಕೇವಲ ಕಾಲ್ಪನಿಕ ಪಾತ್ರಗಳು, ಸುಳ್ಳು ಎಂಬುದು ಇದರಿಂದ ಸಾಬೀತಾಗಿದೆ. ತೀರಾ ಇತ್ತೀಚೆಗಿನ ಬೆಳವಣಿಗೆ ಎಂಬಂತೆ ರಾಜ್ಯದ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಉರಿಗೌಡ -ನಂಜೇಗೌಡ ಟಿಪ್ಪುವನ್ನು ಕೊಂದರು ಎಂದು ಹೇಳುವ ಮಟ್ಟಕ್ಕೆ ಇಳಿದರು. ಹಾಗಿದ್ದರೆ ಚರಿತ್ರೆ ಹೇಳುವುದೇ ಬೇರೆ, ಇವರು ಹೇಳುತ್ತಿರುವುದೇ ಬೇರೆ.
ಬ್ರಾಹ್ಮಣ್ಯದ ಬಲೆಗೆ ಬೀಳದ ಒಕ್ಕಲಿಗರು
ಒಕ್ಕಲಿಗ ಸಮುದಾಯಕ್ಕೆ ಸೇರಿದ ಉರಿಗೌಡ- ನಂಜೇಗೌಡ ಟಿಪ್ಪುವನ್ನು ಕೊಂದರು ಎಂದು ಮತ್ತೆ ಮತ್ತೆ ಹೇಳುತ್ತಲೇ ಇದ್ದಾರೆ. ಯಾವ ಕಾರಣಕ್ಕೆ ಎಂದು ಆಲೋಚನೆ ನಡೆಸಿದಾಗ, ಕಾರಣ ತುಂಬ ಸರಳ. ಒಕ್ಕಲಿಗ ಸಮುದಾಯವು ಇಡೀ ದೇಶಕ್ಕೆ ಅನ್ನ ನೀಡುವ ಬಹಳ ಸ್ವಾಭಿಮಾನಿ ಸಮುದಾಯ. ಈ ಒಕ್ಕಲಿಗ ಸಮುದಾಯದ ಹಿಂದೆ ಒಂದು ವಿವೇಕವಿದ್ದು, ಇದು ಈಗಲೂ ಬ್ರಾಹ್ಮಣ್ಯದ ಬಲೆಗೆ ಇನ್ನು ಬಿದ್ದಿಲ್ಲ. ಯಾಕೆ ಬಿದ್ದಿಲ್ಲ ಎಂದು ಯೋಚಿಸಿದಾಗ ಈ ಸಮುದಾಯದ ಹಿಂದೆ ಕುವೆಂಪು, ಗೋಪಾಲ ಗೌಡ, ಹೆಚ್ ಕೆ ವೀರಣ್ಣಗೌಡ, ಕೆಂಪೇಗೌಡರ ಇತಿಹಾಸ ಪರಂಪರೆ ಇದೆ. ಈ ಕಾರಣಕ್ಕಾಗಿಯೇ ಇತ್ತೀಚೆಗೆ ಕುವೆಂಪುರವರನ್ನು ಅವಮಾನಿಸುವ ಪ್ರಕ್ರಿಯೆ ಕೂಡ ನಡೆಯಿತು. ಈ ಪರಂಪರೆಯನ್ನು ಹೊಂದಿರುವ ಒಕ್ಕಲಿಗ ಸಮುದಾಯ ಯಾವತ್ತೂ ಕೋಮುವಾದಿಗಳಾಗಲು ಅಥವಾ ಬ್ರಾಹ್ಮಣ್ಯದ ಬಲೆಗೆ ಬೀಳಲು ಸಾಧ್ಯವಿಲ್ಲ. ಹಾಗಾಗಿಯೇ ಬಿಜೆಪಿಗೆ ಒಕ್ಕಲಿಗ ಸಮುದಾಯವನ್ನು ತಮ್ಮ ಓಟ್ ಬ್ಯಾಂಕ್ ಆಗಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ.
ಈ ಅಂಶಗಳನ್ನು ಪರಿಗಣಿಸುವಾಗ ಒಕ್ಕಲಿಗ ಸಮುದಾಯವನ್ನು ಓಟ್ ಬ್ಯಾಂಕ್ ಪರಿವರ್ತಿಸುವ ಹುನ್ನಾರ ಇದರ ಹಿಂದೆ ಅಡಗಿದೆ ಎಂಬುದು ಎಲ್ಲರಿಗೂ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇನ್ನೊಂದೆಡೆ ಒಕ್ಕಲಿಗ ಸಮುದಾಯದ ಸ್ವಾಭಿಮಾನಕ್ಕೆ ಪೆಟ್ಟು ಕೊಡುವ ಕೆಟ್ಟ ಪ್ರಯತ್ನ ಇದರ ಹಿಂದೆ ಅಡಗಿದೆ ಎಂಬುದು ಸ್ಪಷ್ಟ. ಯಾಕೆಂದರೆ, ಟಿಪ್ಪುವನ್ನು ವಂಚಿಸಿದ ಮೀರ್ ಸಾದಿಕ್ ಹಾಗೂ ಕಿತ್ತೂರು ರಾಣಿ ಚೆನ್ನಮ್ಮಳಿಗೆ ಮೋಸ ಮಾಡಿದ ಮಲ್ಲಪ್ಪ ಶೆಟ್ಟಿಯವರ ಸಾಲಿಗೆ ಒಕ್ಕಲಿಗರಾದ ಉರಿಗೌಡ ಮತ್ತು ನಂಜೇಗೌಡ ಎಂಬ ಕಲ್ಪಿತ ಪಾತ್ರಗಳನ್ನು ದೂಡುವ ಹುನ್ನಾರ. ಒಂದು ವೇಳೆ ಈ ಕಲ್ಪಿತ ಪಾತ್ರಗಳು ಟಿಪ್ಪುವನ್ನು ಕೊಂದರು ಎಂದಾದರೆ ಅದು ಒಕ್ಕಲಿಗ ಸಮುದಾಯಕ್ಕೆ ಮಾಡುವ ದೊಡ್ಡ ಅವಮಾನ.
1792ನೇ ಇಸವಿಯಲ್ಲಿ ಟಿಪ್ಪು ಮೂರನೇ ಆಂಗ್ಲೋ- ಮೈಸೂರು ಯುದ್ಧದಲ್ಲಿ ಸೋತ ನಂತರ ತನ್ನ ಮಕ್ಕಳನ್ನು ಬ್ರಿಟಿಷರ ಬಳಿ ಒತ್ತೆ ಇಟ್ಟ ಕಷ್ಟದ ಸಂದರ್ಭದಲ್ಲೂ ಕೂಡ ಇಡೀ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ “ಉಳುವವನೇ ಹೊಲದೊಡೆಯ“ ಎಂಬ ಕಾನೂನನ್ನು ಟಿಪ್ಪು ಜಾರಿಗೆ ತರುತ್ತಾನೆ. ಈ ಕಾನೂನಿನ ಪರಿಣಾಮವಾಗಿ ರಾಜ್ಯದಲ್ಲಿ ದೇಸಾಯಿಗಳ ಹಿಡಿತದಲ್ಲಿದ್ದ ಸಾವಿರಾರು ಎಕರೆ ಕೃಷಿ ಭೂಮಿಯನ್ನು ರೈತಾಪಿ ಹಾಗೂ ಸಾಮಾನ್ಯ ಜನರಿಗೆ, ಕೆಳಜಾತಿಯವರಿಗೆ ಕೊಡಿಸುವ ಮೂಲಕ ತನ್ನ ಕರ್ತವ್ಯ ಮೆರೆದಿದ್ದನು.

ಮುಖ್ಯವಾಗಿ ಒಕ್ಕಲಿಗ ಸಮುದಾಯವು ಈ ಕಾನೂನಿನಿಂದ ಹೆಚ್ಚು ಪ್ರಯೋಜನ ಪಡೆದಿದ್ದರು ಎಂಬುದು ಅಷ್ಟೇ ಸತ್ಯ. ಹಾಗಾಗಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಉರಿಗೌಡ ನಂಜೇಗೌಡ ಟಿಪ್ಪುವನ್ನು ಕೊಂದರು ಎಂಬುದು ಒಕ್ಕಲಿಗ ಸಮುದಾಯಕ್ಕೆ ಮಾಡುವ ದೊಡ್ಡ ಅವಮಾನ.
ಆದರೆ ವಾಸ್ತವವಾಗಿ ಬಿಜೆಪಿ ಮತ್ತು ಸಂಘಪರಿವಾರ ಊಹಿಸಿದಷ್ಟು ಒಕ್ಕಲಿಗರು ದಡ್ಡರಲ್ಲ ಎಂಬುದು ಎಲ್ಲರಿಗೂ ಗೊತ್ತು. ಈ ಸಮುದಾಯ ಬುದ್ದಿವಂತರು ಮತ್ತು ವಿವೇಕ ಇರುವವರು. ಅದರಲ್ಲೂ ಮಂಡ್ಯ ಜಿಲ್ಲೆಯ ಒಕ್ಕಲಿಗರಿಗೆ ಒಂದು ಗುಲಗಂಜಿಯಷ್ಟು ಹೆಚ್ಚಿನ ಸ್ವಾಭಿಮಾನವಿದೆ.
ಬಿಜೆಪಿ ಕಡೆಯಿಂದ ಈ ಮಾತುಗಳನ್ನು ಹೇಳುತ್ತಿರುವವರು ಯಾರೆಂದರೆ ಅದೇ ಒಕ್ಕಲಿಗ ಸಮುದಾಯಕ್ಕೆ ಸೇರಿದ ಅಶ್ವತ್ಥ್ ನಾರಾಯಣ ಮತ್ತು ಸಿಟಿ ರವಿ. ಇತಿಹಾಸ ಎಂಬುದು ವೈಜ್ಞಾನಿಕವಾದ ಅಧ್ಯಯನದಿಂದ ಕಂಡು ಹಿಡಿಯಲ್ಪಟ್ಟ ಸಾಮಾನ್ಯ ಜ್ಞಾನ ಎಂಬುದು ಉನ್ನತ ಶಿಕ್ಷಣ ಸಚಿವರಿಗೆ ಗೊತ್ತಿರಬೇಕಿತ್ತು. ಹಾಗಿರುವಾಗ ಯಾವುದೇ ಆಧಾರವಿಲ್ಲದೇ ಉರಿಗೌಡ- ನಂಜೇಗೌಡ ಎಂಬ ಕಲ್ಪಿತ ಪಾತ್ರಗಳು ಟಿಪ್ಪುವನ್ನು ಕೊಂದರು ಎಂದು ಹೇಳಿದರೆ ಜನರು ನಗದೇ ಇರುತ್ತಾರಾ? ಒಂದೇ ಕಲ್ಲಿಗೆ ಎರಡು ಹಕ್ಕಿಯನ್ನು ಉದುರಿಸುವಂತಹ ಸಂಘಪರಿವಾರದ ತಂತ್ರವಿದು ಎಂಬುದು ಸ್ಪಷ್ಟ. ಹೇಗೆಂದರೆ ಅದೇ ಸಮುದಾಯಕ್ಕೆ ಸೇರಿದ ನಾಯಕರಿಂದಲೇ ಇಂತಹ ಹೇಳಿಕೆಯನ್ನು ಹೇಳಿಸುವ ಮೂಲಕ ಸಮುದಾಯದ ಜನರನ್ನು ನಂಬಿಸುವುದರೊಂದಿಗೆ ಅವಮಾನಕ್ಕೊಳಪಡಿಸುವ ಹುನ್ನಾರವಿದು.
ಈ ಹುನ್ನಾರವನ್ನು ಅರ್ಥ ಮಾಡಿಕೊಳ್ಳುವಂತಹ ವಿವೇಕ ಮತ್ತು ಸ್ವಾಭಿಮಾನ ಒಕ್ಕಲಿಗ ಸಮುದಾಯಕ್ಕಿದೆ. ಒಂದು ವೇಳೆ ಈ ಪಾತ್ರಗಳು ಟಿಪ್ಪುವಿನ ಕಾಲದಲ್ಲಿ ಇದ್ದವು ಎಂದಾಗಿದ್ದರೇ, ಚರಿತ್ರೆಯ ಯಾವುದಾದರೂ ಪುಸ್ತಕದ ಮೂಲೆಯಲ್ಲಿಯಾದರೂ ಗೋಚರಿಸುತ್ತಿದ್ದವು. ಈ ಕಪೋಲ ಕಲ್ಪಿತ ಪಾತ್ರಗಳನ್ನು ಸೃಷ್ಟಿ ಮಾಡಿ ಒಕ್ಕಲಿಗ ಸಮುದಾಯವನ್ನು ಓಟ್ ಬ್ಯಾಂಕ್ ಆಗಿ ಪರಿವರ್ತಿಸುವ ಬ್ರಾಹ್ಮಣ್ಯದ ಬಲೆಗೆ ಬೀಳಿಸುವ ಹುನ್ನಾರವಿದೆ. ಇದನ್ನು ಅರ್ಥೈಸಿಕೊಳ್ಳುವಂತಹ ಎಚ್ಚರ, ವಿವೇಕ, ಸ್ವಾಭಿಮಾನ ಎಲ್ಲವೂ ಒಕ್ಕಲಿಗ ಸಮುದಾಯಕ್ಕಿದೆ ಎಂದು ನಾವು ಅವರಿಗೆ ಅರ್ಥ ಮಾಡಿಸಬೇಕಿದೆ.




