ಜೆಡಿಎಸ್ ಪಕ್ಷದ ನಿಷ್ಟವಂತರ್ಯಾರೂ ಪಕ್ಷ ಬಿಡಲ್ಲ. ಪಕ್ಷ ನಿಷ್ಟೆ ಇಲ್ಲದ ಯಾರೋ ಒಂದಿಬ್ಬರು ಹೋದರೆ ಪಕ್ಷಕ್ಕೆ ನಷ್ಟವಿಲ್ಲ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದರು.
ಶ್ರೀರಂಗಪಟ್ಟಣದಲ್ಲಿ ಭಾನುವಾರ ಜೆಡಿಎಸ್ ಪಕ್ಷದ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ಪಕ್ಷದಲ್ಲಿ ಕೆಲವು ಕಳ್ಳೆತ್ತುಗಳಿದ್ದವು. ಅವು ಯಾವಾಗಲೂ ಚುನಾವಣೆ ಬಂದಾಗ ಆಕಡೆ-ಈಕಡೆ ಅಂತ ಹೋಗ್ತವೆ. ಅಂತಹದಕ್ಕೆ ತಲೆಕೆಡಿಸಿಕೊಳ್ಳಬೇಕಿಲ್ಲ. ಪೀಹಳ್ಳಿಯಲ್ಲಿ ಎರಡು ತೆಂಡೆಗಳ ಜನರು ನನ್ನ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಜೆಡಿಎಸ್ ಸೇರಿದ್ದಾರೆ.
ನಮ್ಮ ಪಕ್ಷಕ್ಕೂ ವಿವಿಧ ಪಕ್ಷಗಳಿಂದ ಸೇರುವವರ ದೊಡ್ಡ ಪಟ್ಟಿ ಇದೆ. ಅದನ್ನು ನಾನು ಈಗ ಬಹಿರಂಗ ಮಾಡಲ್ಲ, ಶೀಘ್ರ ಎಷ್ಟು ಮಂದಿ ಸೇರ್ತಾರೆ ಎಂಬುದನ್ನು ಕಾದು ನೋಡಿ ಎಂದರು.
ಈ ರಾಜ್ಯದ ರೈತರ ಬದುಕು ಹಸನಾಗಿಸಲು ನೀರಾವರಿ ಕ್ಷೇತ್ರ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳ ಇತ್ಯರ್ಥಕ್ಕೆ ಶ್ರಮಿಸಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಗ್ರಾಮ ವಾಸ್ತವ್ಯದ ಹರಿಕಾರ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ನನ್ನನ್ನು ಚುನಾಯಿಸಿದ ಮತದಾರರು ತಲೆತಗ್ಗಿಸುವ ಕಾರ್ಯವನ್ನು ಈ ನಿಮ್ಮ ರವೀಂದ್ರ ಶ್ರೀಕಂಠಯ್ಯ ಎಂದೂ ಮಾಡಿಲ್ಲ, ಮಾಡುವುದೂ ಇಲ್ಲ. ಎದೆಗಾರಿಕೆಯಿಂದ ನಮ್ಮ ಕೆಲಸಗಳನ್ನು ಮುಂದಿಟ್ಟು ನಮ್ಮ ನಾಯಕತ್ವವನ್ನು ಬಿಂಬಿಸುವಂತಹ ಕೆಲಸಗಳು ನನ್ನಿಂದ ಮತ್ತು ನಮ್ಮ ನಾಯಕರಿಂದ ಆಗಿವೆ. ಇದು ನಮ್ಮ ವಿರೋಧಿಗಳಿಗೆ ನಡುಕ ಹುಟ್ಟಿಸಿದೆ ಎಂದರು.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಬಹಳಷ್ಟು ವರ್ಷಗಳ ಕಾಲ ಅಧಿಕಾರ ನಡೆಸಿದ ಒಂದೇ ಕುಟುಂಬದ ಮೂವರು ರಸ್ತೆಯಲ್ಲಿ ಕಾಲು ಹಿಡಿದುಕೊಂಡು ಮತ ನೀಡಿ ಎಂದು ಬೇಡುತ್ತಿದ್ದಾರೆ.ಈ ನಾಟಕಗಳ ಅವಶ್ಯಕತೆಯಿಲ್ಲ. ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಕಾಲಹರಣ ಮಾಡಿದರು. ಕೋವಿಡ್ ಸಂದರ್ಭದಲ್ಲಿ ಜನರಿಂದ ದೂರವಾಗಿದ್ದರು. ಆದರೆ ನಾನು ಮೂರು ಬಾರಿ ಕೋವಿಡ್ ಬಂದರೂ ಜನರ ಮಧ್ಯೆ ಇದ್ದು, ಜನರ ಸಂಕಷ್ಟಕ್ಕೆ ದನಿಯಾಗಿದ್ದೇನೆ. ಈ ಹಿಂದೆ ಅಧಿಕಾರ ಹಿಡಿದವರ ಕಾರ್ಯಗಳನ್ನು ಮತ್ತು ನನ್ನ ಅಭಿವೃದ್ಧಿ ಕಾರ್ಯಗಳನ್ನು ಹೋಲಿಕೆ ಮಾಡಿ ಜನರೇ ತೀರ್ಮಾನ ಮಾಡುತ್ತಾರೆ ಎಂದರು.

ನಾನು ಅನಿರೀಕ್ಷಿತವಾಗಿ ರಾಜಕಾರಣಕ್ಕೆ ಬಂದವನಲ್ಲ. ಚುಂಚೇಗೌಡರ ಕುಟುಂಬ 1952 ರಿಂದ ರಾಜಕೀಯದಲ್ಲಿದೆ. ನಾನು ಕಣ್ಣು ಬಿಟ್ಟ ದಿನದಿಂದಲೇ ರಾಜಕಾರಣ ನೋಡಿಕೊಂಡು ಬೆಳೆದಿದ್ದೇನೆ. ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ಮೇಲೆ ಜನರ ವಿಶ್ವಾಸ ಇದ್ದು, ಜನರು ನನಗೆ ಆಶೀರ್ವಾದ ಮಾಡಲಿದ್ದಾರೆ ಎಂದರು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಪೈಲ್ವಾನ್ ಮುಕುಂದ, ಮುಖಂಡರಾದ ಸಂತೋಷ್ ಮತ್ತಿತರರಿದ್ದರು.




