ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಇಂದಿನಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಿಜೆಪಿ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಘೋಷಿಸಿದರು.
ಮಂಡ್ಯದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಜಿಲ್ಲೆ ಇದುವರೆಗೂ ಅಭಿವೃದ್ಧಿ ಕಾಣಲಿಲ್ಲ. ಈ ಹಿನ್ನೆಲೆಯಲ್ಲಿ ನಾನು ಜೆಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಸಾಕಷ್ಟು ಚಿಂತನೆ ನಡೆಸಿ ನರೇಂದ್ರ ಮೋದಿಯವರ ನಾಯಕತ್ವ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕೊಂಡಿದ್ದೇನೆ. ಭಾರತವನ್ನು ದೇಶ-ವಿದೇಶಗಳಲ್ಲಿ ತಲೆ ಎತ್ತಿ ನಿಲ್ಲುವಂತೆ ಮಾಡಿದ ನರೇಂದ್ರ ಮೋದಿಯವರಿಗೆ ನನ್ನ ಬೆಂಬಲ ನೀಡುತ್ತೇನೆ ಎಂದು ಸ್ಪಷ್ಟ ಪಡಿಸಿದರು.
ಬದಲಾವಣೆ ಅಗತ್ಯ
ಮಂಡ್ಯ ರಾಜಕಾರಣ ಕಲುಷಿತವಾಗಿದೆ.ಅದನ್ನು ಸ್ವಚ್ಛ ಗೊಳಿಸುವ ಸಮಯ ಬಂದಿದೆ. ನಾನು ಸುಗಮವಾದ ಹಾದಿ ಹುಡುಕಿಕೊಂಡು ನನ್ನ ಭವಿಷ್ಯ ರೂಪಿಸಿಕೊಳ್ಳಬಹುದಿತ್ತು.ಆದರೆ ನನಗೆ ನನ್ನ ಭವಿಷ್ಯಕ್ಕಿಂತ ಅಭಿಮಾನಿಗಳು, ಕಾರ್ಯಕರ್ತರ ಭವಿಷ್ಯಕ್ಕಾಗಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದೇನೆ.
ಸವಾಲಿನ ಹಾದಿಯಲ್ಲಿ ಸಾಗಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಇದರಲ್ಲಿ ನನ್ನ ಭವಿಷ್ಯ ಮುಖ್ಯವಲ್ಲ. ಜನ ಮತ್ತು ಜಿಲ್ಲೆಯ ಅಭಿವೃದ್ಧಿ ಮುಖ್ಯ. ಅದಕ್ಕಾಗಿ ಹಲವಾರು ಬೇಡಿಕೆಗಳನ್ನು ಇಟ್ಟಿದ್ದೇನೆ, ಹಿಂದೆಲ್ಲ ನರೇಂದ್ರ ಮೋದಿ ಮತ್ತು ರಾಜ್ಯದ ಬಿಜೆಪಿ ಸರ್ಕಾರದಿಂದ ಯಾವ ರೀತಿ ಸ್ಪಂದನೆ ಸಿಕ್ಕಿದೆ ಎಂಬುದನ್ನು ಈಗಾಗಲೇ ನೋಡಿ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದರು.
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಲು ಬಂದಿದ್ದಾಗ ಮೈಶುಗರ್ ಆರಂಭಿಸುವಂತೆ ಒತ್ತಾಯ ಮಾಡಿದ್ದೆ. ಅಂದೇ ಅವರು ಅಧಿಕಾರಿಗಳ ಸಭೆ ಕರೆದು ಸೂಕ್ತ ಕ್ರಮಕ್ಕೆ ಆದೇಶ ನೀಡಿದ್ದರು. ಪರ-ವಿರೋಧದ ಗೊಂದಲ ನಿರ್ಮಾಣವಾದಾಗ ಸ್ಥಗಿತಗೊಂಡಿತ್ತು. ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈಷುಗರ್ ಅನ್ನು ಹಠಕ್ಕೆ ಬಿದ್ದು ಪ್ರಾರಂಭಿಸಿದರು. ಇದರ ಹಿಂದೆ ನನ್ನ ಪರಿಶ್ರಮವಿದೆ ಎಂದು ತಿಳಿಸಿದರು.
ಸಂಸದೆಯಾಗಿ ಆಯ್ಕೆಯಾದ 9 ತಿಂಗಳ ನಂತರ ಕೋವಿಡ್‌ನ ತೀವ್ರತೆ ಹೆಚ್ಚಾಗಿತ್ತು. ಎರಡು ವರ್ಷ ಸಂಸದರ ಅನುದಾನವನ್ನು ತಡೆ ಹಿಡಿದಿದ್ದರು.ಇದರಿಂದಾಗಿ ಅಭಿವೃದ್ಧಿಗೆ ಕುಂಠಿತವಾಗಿತ್ತು. ಇಂತಹ ಸಂದರ್ಭದಲ್ಲಿ ಅಕ್ರಮ ಗಣಿಗಾರಿಕೆಯಿಂದಾಗಿ ಕೋಟ್ಯಂತರ ರೂ.ಗಳ ರಾಜಧನ ಸ್ಥಗಿತಗೊಂಡಿತ್ತು. ದಿಶಾ ಸಭೆಗಳನ್ನು ನಡೆಸಿ ಅಧಿಕಾರಿಗಳಿಗೆ ತಾಕೀತು ಮಾಡಿ ರಾಜಧನವನ್ನು ಪಡೆದು ಜಿಲ್ಲೆಯ ಅಭಿವೃದ್ಧಿಗೆ ವಿನಿಯೋಗಿಸಿದ್ದನ್ನು ದಾಖಲೆಗಳಿಂದ ಪರಿಶೀಲಿಸಬಹುದು ಎಂದುರಾಜ್ಯ ವಿರೋಧಿಗಳಿಗೆ ತಿರುಗೇಟು ಕೊಟ್ಟರು.
ಮಂಡ್ಯ ಬಿಡಲ್ಲ
ನನ್ನ ರಾಜಕೀಯ ಜೇವನದಲ್ಲಿ ಎಂದಿಗೂ ಅಂಬರೀಶ್ ಅವರ ಹೆಸರಿಗೆ ಕಳಂಕ ತರುವ ಕೆಲಸ ಎಂದಿಗೂ ಮಾಡುವುದಿಲ್ಲ.ರಾಜಕಾರಣ ಬಿಡ್ತೀನಿ,ಸ್ವಾಭಿಮಾನ ಬಿಡಲ್ಲ,ಪ್ರಾಣ ಬಿಡ್ತೀನಿ ಮಂಡ್ಯ ಬಿಡಲ್ಲ.ರಾಜಕಾರಣ ಮಾಡೋದಾದ್ರೆ ಮಂಡ್ಯದಲ್ಲಿ ಮಾತ್ರ ಎಂದರು.
ಅಂಬರೀಶ್ ಅವರು ವಸತಿ ಸಚಿವರಾಗಿದ್ದ ವೇಳೆ ಮಂಡ್ಯದ ಹಾಲಹಳ್ಳಿ ಸ್ಲಂನಲ್ಲಿ ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದರು. ಅವರ ಕಾಲಾನಂತರ ಯೋಜನೆ ಸ್ಥಗಿತಗೊಂಡಿತ್ತು. ನಾನು ನಿರಂತರ ಸಂಬಂಧಿಸಿದ ಸಚಿವರೊಟ್ಟಿಗೆ ಸಂಪರ್ಕ ಸಾಧಿಸಿ ಫಲಾನುಭವಿಗಳಿಗೆ ವಿತರಿಸುವಲ್ಲಿ ಹೋರಾಟ ನಡೆಸಿದ್ದೇನೆ. ಆಗ ನಾನಿರಲಿಲ್ಲ.ಇದ್ದವರು ಏನು ಮಾಡುತ್ತಿದ್ದರು. ಗುಡಿಸಲುಗಳಲ್ಲಿ ಬಡಜನರು ವಾಸಿಸುತ್ತಿದ್ದದ್ದು ಅವರಿಗೆ ಕಾಣಲಿಲ್ವಾ ಎಂದು ಕಿಡಿಕಾರಿದರು.
ನರೇಗಾ ಯೋಜನೆಯಲ್ಲಿ ಜಿಲ್ಲೆಯ ಸಾಧನೆ ತೀರಾ ಕಡಿಮೆ ಇತ್ತು. ಅಧಿಕಾರಿಗ ಳೊಟ್ಟಿಗೆ ನಿರಂತರ ಸಭೆ ನಡೆಸಿ ಇದೀಗ 2ನೇ ಸ್ಥಾನಕ್ಕೆ ಬಂದಿದ್ದೇವೆ. ಈಗೆಲ್ಲ ಏನು ನಡೆಯುತ್ತಿದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ರಾಜಕಾರಣದಲ್ಲಿ ರಾಜಕಾರಣಕ್ಕಾಗಿ ದುಡ್ಡು ಹಂಚುವುದು, ಬಾಡೂಟ ನಡೆಸುವುದು ಮಾಮೂಲಿಯಾಗಿದೆ. ನಾನು ಅಭಿವೃದ್ಧಿಯ ಪರವಾಗಿದ್ದೇನೆ ಎಂದು ಹೇಳಿದರು.
ಮೈಸೂರು ಅರಸರು ಕೃಷ್ಣರಾಜ ಸಾಗರ ನಿರ್ಮಿಸಿದರು. ಆದರೆ, ಅದರ ಅವನತಿಗೆ ಇಂದು ನಮ್ಮ ನಾಯಕರು ನಿಂತಿದ್ದಾರೆ. ಇದನ್ನು ಪ್ರಶ್ನಿಸುವುದು ತಪ್ಪೇ ಎಂದ ಅವರು, ಜಿಲ್ಲೆಯ ಅಭಿವೃದ್ಧಿಯನ್ನು ನಾಶ ಮಾಡಲು ಹೊರಟಿದ್ದನ್ನು ಪ್ರಶ್ನೆ ಮಾಡಿದ ನನಗೆ ಎಂತೆಂಹ ಅಪಮಾನ ಮಾಡಿದ್ದಾರೆ. ಟೀಕೆ-ಟಿಪ್ಪಣಿಗಳನ್ನು ಎಸೆದಿದ್ದಾರೆ, ಕೀಳು ಮಟ್ಟಕ್ಕೂ ಇಳಿದು ಮಾತನಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹಲ್ಲೆ ಯತ್ನ
ನನಗೆ ಕೆ.ಆರ್.ನಗರದಲ್ಲಿ ಒಂದು ಬಾರಿ ಹಲ್ಲೆಗೆ ವಿರೋಧಿಗಳು ಮುಂದಾದಾಗ ಅಲ್ಲಿದ್ದ ಮಹಿಳೆಯರೇ ನನ್ನ ರಕ್ಷಣೆ ಮಾಡಿದರು.ಈ ಬಗ್ಗೆ ದೂರು ಕೂಡಾ ದಾಖಲಾಗಿದೆ.ನಾನು ಲೋಕಸಭಾ ಚುನಾವಣೆಯಲ್ಲಿ 2.50 ಲಕ್ಷಕ್ಕೂ ಹೆಚ್ಚು ಅಂತರದಿಂದ ಸೋಲುತ್ತೇನೆ ಎಂದು ಹೇಳಿದರು.ಹಾಗಂದವರೇ 1.25 ಲಕ್ಷ ಮತಗಳ ಅಂತರದಲ್ಲಿ ಸೋತಹೋದರು ಎಂದರು.




