Thursday, November 19, 2026

ಪ್ರಾಯೋಗಿಕ ಆವೃತ್ತಿ

ಸ್ವಯಂ ನಿವೃತ್ತಿಗೊಳಪಡಿಸಿದ ಮೈಷುಗರ್ ಕಾರ್ಮಿಕರನ್ನು ಸೇವೆಗೆ ತೆಗೆದುಕೊಳ್ಳಲು ಆಗ್ರಹ


  • ನೌಕರರನ್ನು ಪುನಃ ಸೇವೆಗೆ ತೆಗೆದುಕೊಳ್ಳಲು ಆಗ್ರಹಿಸಿ ನಾಳೆ ಹೋರಾಟ

  • ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಶಾಂತಿಯುತ ಪ್ರತಿಭಟನೆ

ಮೈಸೂರು ಸಕ್ಕರೆ ಕಂಪನಿಯು ಕರ್ನಾಟಕ ಸರ್ಕಾರದ ಸ್ವಾಮ್ಯದಲ್ಲಿಯೇ ಪ್ರಾರಂಭವಾಗಿ ಮತ್ತು ಉತ್ಪಾದನೆ ಕಾರ್ಯವನ್ನು ಕೈಗೊಂಡಿರುವುದರಿಂದ ಕಾನೂನಬಾಹಿರವಾಗಿ ಮೈಷುಗರ್ ಆಡಳಿತ ಮಂಡಳಿಯು ಬಲವಂತದ ಸ್ವಯಂ ನಿವೃತ್ತಿಗೆ ಒಳಪಡಿಸಿ ನಿವೃತ್ತಿಗೊಳಿಸಿರುವ ಕಾರ್ಮಿಕರನ್ನು ಪುನಃ ಕಂಪನಿಯ ಸೇವೆಗೆ ತೆಗೆದುಕೊಳ್ಳುವಂತೆ ಮೈಸೂರು ಷುಗರ್ ಕಂಪನಿ ಎಂಪ್ಲಾಯೀಸ್ ಅಸೋಸಿಯೇಷನ್ ಆಗ್ರಹಿಸಿದೆ.

ಈ ಕುರಿತು ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ನ ಮುಖಂಡ ವೆಂಕಟೇಶ್ ಮಾತನಾಡಿ, ಬಲವಂತವಾಗಿ ವಿ.ಆರ್.ಎಸ್.ಗೆ ಒಳಪಡಿಸಿದ ನೌಕರರನ್ನು ಪುನಃ ಸೇವೆಗೆ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಮಾ.15ರಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಶಾಂತಿಯುತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಸ್ವಯಂ ನಿವೃತ್ತಿ ಬರೆದುಕೊಡುವಂತೆ ಒತ್ತಡ

ಮೈಸೂರು ಸಕ್ಕರೆ ಕಂಪನಿಯ ಆಡಳಿತ ವರ್ಗದವರಿಂದ ನಡೆದಿರುವ ದುರಾಡಳಿತದಿಂದ ಅಮಾಯಕ ಖಾಯಂ ನೌಕರರಿಗೆ ಅನ್ಯಾಯವಾಗಿದೆ. ಅಮಾಯಕ ಸ್ಥಳೀಯ ಕನ್ನಡಿಗ ನೌಕರರ ಮೇಲೆ ಒತ್ತಡ ತಂದು ಕಾರ್ಮಿಕ ಕಾಯಿದೆಗಳನ್ನು ಉಲ್ಲಂಘನೆ ಮಾಡಿ ಪ್ರತಿಯೊಬ್ಬರೂ ಸ್ವಯಂ ನಿವೃತ್ತಿ ಬರೆದುಕೊಡುವಂತೆ ಹೆದರಿಕೆ ಹುಟ್ಟಿಸಿ, ಕಾರ್ಮಿಕ-ಕಾರ್ಮಿಕರಲ್ಲಿ ಒಡಕು ಉಂಟು ಮಾಡಿ, ಒತ್ತಡ ತಂತ್ರಗಳನ್ನು ಉಪಯೋಗಿಸಿ, ವಾಮಮಾರ್ಗದಿಂದ ಕಂಪನಿಯ ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ದೂರಿದರು.

ಹಿಂದಿನ ಮೈಷುಗರ್ ಅಧ್ಯಕ್ಷ ಜೆ. ಶಿವಲಿಂಗೇಗೌಡ ಅಧಿಕಾರ ವಹಿಸಿಕೊಂಡ ದಿನದಂದು ಕಂಪನಿಯ ಅಧ್ಯಕ್ಷರ ಕಚೇರಿಯಲ್ಲಿ ಮಾಧ್ಯಮ ಮತ್ತು ಕಾರ್ಮಿಕರ ಸಮ್ಮುಖದಲ್ಲಿ ಈ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿ ನಡೆಸಲು ಸಾಧ್ಯವಿಲ್ಲವೆಂದು ಹೇಳಿ ಕಾರ್ಮಿಕರಿಗೆ ಸುಳ್ಳು ಮಾಹಿತಿ ನೀಡಿ ಅನ್ಯಾಯ ಮಾಡಲಾಗಿದೆ. ಸ್ವಯಂ ನಿವೃತ್ತಿ ಬೇಡವೆಂದರೂ ಸಹ ಬಲವಂತವಾಗಿ ಕಂಪನಿಯ ಸೇವೆಯಿಂದ ಅಮಾಯಕ ನುರಿತ ಕಾರ್ಮಿಕರನ್ನು ಕಂಪನಿಯ ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಕಂಪನಿಯ ಕೆಲವು ಕಾರ್ಮಿಕರನ್ನು ಬೆಂಗಳೂರು ಕೇಂದ್ರ ಕಚೇರಿಗೆ ಬಲವಂತವಾಗಿ ವರ್ಗಾವಣೆ ಮಾಡಿ ಅವರಿಗೆ ನಿಗದಿತ ಸಮಯಕ್ಕೆ ವೇತನವನ್ನು ನೀಡದೇ, ಸಾರಿಗೆ ಭತ್ಯೆಯನ್ನು ನೀಡದೇ ಮಾನಸಿಕವಾಗಿ ಹಿಂಸೆ ನೀಡಿ ಸ್ವಯಂ ನಿವೃತ್ತಿ ಅರ್ಜಿಯನ್ನು ಪಡೆದಿದ್ದಾರೆಂದು ದೂರಿದರು.

ಕಂಪನಿಗೆ ಸುಮಾರು ₹ 20 ಕೋಟಿಗಳಷ್ಟು ನಷ್ಟ

ಕೆಲವು ನೌಕರರಿಗೆ ಸ್ವಯಂ ನಿವೃತ್ತಿ ನೀಡಿ, ನಂತರದಲ್ಲಿ ಪುನಃ ಹೊರ ಗುತ್ತಿಗೆ ಮೂಲಕ ತಮಗೆ ಬೇಕಾದ ಕಾರ್ಮಿಕರನ್ನು ಪುನಃ ಅದೇ ವಿಭಾಗಗಳಿಗೆ ಕಳೆದ 3-4 ವರ್ಷಗಳಿಂದಲೂ ಮುಂದುವರಿಸಲಾಗುತ್ತಿದೆ. 2022-23ನೇ ಸಾಲಿನಲ್ಲಿ ಮೈಷುಗರ್ ಕಂಪನಿಯು ಸ್ಥಳೀಯ ನುರಿತ ಕೆಲಸಗಾರರನ್ನು ನೇಮಿಸಿಕೊಳ್ಳದೇ, ಹೊರ ರಾಜ್ಯದ ಕನ್ನಡೇತರ ಕಾರ್ಮಿಕರನ್ನು ಬಲವಂತವಾಗಿ ಕರೆತಂದು, ಮೈಷುಗರ್ ಕಂಪನಿಯ 90 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅನುಭವವಿಲ್ಲದ ಕಾರ್ಮಿಕರಿಂದ ಒಂದು ಲಕ್ಷ ಟನ್ ಕಬ್ಬನ್ನು ನುರಿಸಿ ಕೇವಲ 3-4% ರಿಕವರಿ ಸಕ್ಕರೆಯನ್ನು ತೆಗೆದು, ಕಂಪನಿಗೆ ಸುಮಾರು ₹ 20 ಕೋಟಿಗಳಷ್ಟು ನಷ್ಟವುಂಟು ಮಾಡಲಾಗಿದೆ ಎಂದು ದೂರಿದರು.

ಗೋಷ್ಠಿಯಲ್ಲಿ ನೌಕರರಾದ ಬಸವರಾಜು, ಬೋರೇಗೌಡ, ಮಧು, ವೀರೇಗೌಡ ಮತ್ತಿತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ