Friday, November 20, 2026

ಪ್ರಾಯೋಗಿಕ ಆವೃತ್ತಿ

ಅತಂತ್ರ ನಿವಾಸಿಗಳ ಬದುಕಿಗೆ ಆಸರೆಯಾದ ರವೀಂದ್ರ ಶ್ರೀಕಂಠಯ್ಯ

ಶ್ರೀರಂಗಪಟ್ಟಣ ತಾಲ್ಲೂಕಿನ ಮೊಗರಹಳ್ಳಿ ಕೆಳ ಮಂಟಿಯ ಜನರಲ್ಲಿ ಯುಗಾದಿ ಹಬ್ಬದಂದು ಸಂಭ್ರಮ ಮನೆ ಮಾಡಿತ್ತು. ಕಳೆದ ಐದಾರು ದಶಕಗಳಿಂದ ಅತಂತ್ರರಾಗಿ ವಾಸಿಸುತ್ತಿದ್ದ ಜನರ ಮನಸ್ಸಿನಲ್ಲಿ ನೆಮ್ಮದಿಯ ಹರ್ಷ ಮೂಡಿತ್ತು. ಕತ್ತಲೆಯಲ್ಲಿದ್ದ ಅತಂತ್ರ ನಿವಾಸಿಗಳ ಬದುಕಿಗೆ ‘ಹಕ್ಕುಪತ್ರ’ ಎಂಬ ಸ್ವಾತಂತ್ರ್ಯ ನೀಡಿದ ಶಾಸಕ ರವೀಂದ್ರ ಶ್ರೀಕಂಠಯ್ಯನವರ ಕಾರ್ಯವೈಖರಿಯ ಬಗ್ಗೆ ಅಲ್ಲಿನ ನಿವಾಸಿಗಳ ಕಣ್ಣುಗಳಲ್ಲಿ ಕೃತಜ್ಞತೆಯ ಭಾವವಿತ್ತು.

300 ಕುಟುಂಬಗಳಿಗೆ ಹಕ್ಕುಪತ್ರ
ಮಾ.22 ರಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ತಹಶೀಲ್ದಾರ್ ಡಿ.ಅಶ್ವಿನಿ, ಪಿಡಿಓ ಸೆಂದಿಲ್, ಕಂದಾಯ ನೀರಿಕ್ಷಕ ಉಮೇಶ್ ಅವರ ಜೊತೆಗೂಡಿ ಮೊಗರಹಳ್ಳಿ ಕೆಳಮಂಟಿಯ 300 ಕುಟುಂಬಗಳಿಗೆ ಅವರ ಮನೆ ಬಾಗಿಲಿಗೆ ತೆರಳಿ ಹಕ್ಕುಪತ್ರ ವಿತರಿಸಿದರು.

ಕಳೆದ 50-60 ವರ್ಷಗಳಿಂದ ಯಾವುದೇ ಭದ್ರತೆ ಇಲ್ಲದೆ, ಎತ್ತಂಗಡಿಯ ಭಯದಿಂದಲೇ ಬದುಕು ಸಾಗಿಸುತ್ತಿದ್ದ ಸಾವಿರಾರು ಕುಟುಂಬಗಳ ಸದಸ್ಯರು ಹಕ್ಕುಪತ್ರ ವಿತರಿಸಿದ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಮೇಲೆ ಹೂ ಮಳೆಗೈದು, ಪುಷ್ಪಮಾಲೆ ಹಾಕಿ ಧನ್ಯತೆಯಿಂದ ಕೈ ಮುಗಿದರು.

ಕಳೆದ ಹಲವಾರು ದಶಕಗಳಿಂದ ಹಕ್ಕುಪತ್ರ ನೀಡುವಂತೆ ಹಲವು ಹೋರಾಟಗಳನ್ನು ಮಾಡಿ, ಮನವಿ ಪತ್ರ ಸಲ್ಲಿಸಿದರೂ ಮೊಗರಹಳ್ಳಿ ಮಂಟಿಯ ಜನರ ಸಂಕಷ್ಟಕ್ಕೆ ಹಿಂದಿನ ಯಾವ ಶಾಸಕರೂ ಸ್ಪಂದಿಸಿರಲಿಲ್ಲ. 2018ರ ವಿಧಾನಸಭಾ ಚುನಾವಣೆಯಲ್ಲಿ ಮತಯಾಚನೆಗೆ ಆಗಮಿಸಿದ್ದ ರವೀಂದ್ರ ಶ್ರೀಕಂಠಯ್ಯ ಅವರಲ್ಲಿ ನಿವಾಸಿಗಳು ಮಾಡಿಕೊಂಡ ನಿವೇದನೆಗೆ ಫಲಸಿಕ್ಕಿ ಇಂದು ಶಾಶ್ವತ ಹಕ್ಕುಪತ್ರ ಪಡೆದು ಆನಂದದಿಂದ ಸಂಭ್ರಮಿಸು ಸುಯೋಗ ಸ್ಥಳೀಯ ನಿವಾಸಿಗಳದ್ದಾಯಿತು.

ಯುಗಾದಿ ಹಬ್ಬದ ದಿನ ಶಾಸಕ ರವೀಂದ್ರ ಶ್ರೀಕಂಠಯ್ಯನವರು ನಮ್ಮ ಮನೆ ಬಳಿಯೇ ಬಂದು ಹಕ್ಕುಪತ್ರ ನೀಡಿದ್ದು ನಮಗೆ ಪುನರ್ಜನ್ಮ ಕಲ್ಪಿಸಿದಂತಾಯಿತು. ಕತ್ತಲೆಯಲ್ಲಿದ್ದ ನಮ್ಮ ಬದುಕಿಗೆ ಬೆಳಕು ಬಂದಿತು, ಇನ್ನು ನೆಮ್ಮದಿಯಿಂದ ಜೀವನ ಸಾಗಿಸಬಹುದು, ಇನ್ಮುಂದೆ ನಮ್ಮ ಮಕ್ಕಳು ಅತಂತ್ರರಾಗಬೇಕಿಲ್ಲ, ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿತು, ನಮ್ಮ ಬದುಕಿಗೆ ಅರ್ಥ ಬಂದಿತು ಎಂದೆಲ್ಲ ಇಲ್ಲಿನ ನಿವಾಸಿಗಳು ಶಾಸಕರ ಕಾರ್ಯವನ್ನು ಬಣ್ಣಿಸಿದರು.

ಮೊಗರಹಳ್ಳಿ ಮಂಟಿಯ 300 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವುದು ಸುಲಭದ ಕೆಲಸವಾಗಿರಲಿಲ್ಲ. ಕಳೆದ ಐದಾರು ದಶಕಗಳಿಂದ ನೆನಗುದಿಗೆ ಬಿದ್ದಿದ್ದ ಹಕ್ಕುಪತ್ರ ಮಂಜೂರಾತಿ ಮಾಡಿಸಿ ವಿತರಿಸಲು ರವೀಂದ್ರ ಶ್ರೀಕಂಠಯ್ಯನವರೇ ಶಾಸಕರಾಗಿ ಬರಬೇಕಾಯಿತು ಎಂಬ ಸಂತಸದಲ್ಲಿ ಗ್ರಾಮದ ನೂರಾರು ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿ, ಅವರ ಮೇಲೆ ಪುಷ್ಪವೃಷ್ಠಿಗೈದು ಸಂಭ್ರಮಿಸಿದರು. ಬೆಲ್ಲದ ಆರತಿ ಬೆಳಗಿ, ಮೈಸೂರು ಪೇಟ ತೊಡಿಸಿ, ಹಸಿರು ಶಾಲು ಹಾಕಿ ಗೌರವಿಸಿದರು. ಮೊಗರಹಳ್ಳಿ ಮಂಟಿಯ 300 ಕುಟುಂಬಗಳ ಬಳಿಗೆ ಸ್ವತಃ ತಾವೇ ತೆರಳಿದ ಶಾಸಕರು ಬಿರುಬಿಸಿಲಿನಲ್ಲಿಯೂ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2.30 ಗಂಟೆಯವರೆಗೂ ಹಕ್ಕುಪತ್ರ ವಿತರಿಸುವ ಕಾರ್ಯದಲ್ಲಿ ತಲ್ಲೀನರಾದರು.

ನುಡಿದಂತೆ ನಡೆದರು
ಮೊಗರಹಳ್ಳಿ ಮಂಟಿಯ ಅನಿಲ್ ಕುಮಾರ್ ಮಾತನಾಡಿ, ನನಗೀಗ 42 ವರ್ಷ ವಯಸ್ಸು. ನನ್ನ ಅಜ್ಜ, ಅಜ್ಜಿ, ನಮ್ಮ ತಂದೆ ಇಲ್ಲಿಯೇ ಕಳೆದ 60 ವರ್ಷಗಳಿಂದ ವಾಸವಾಗಿದ್ದರು. ನಮಗೆ ಹಕ್ಕುಪತ್ರ ನೀಡಿ ಎಂದು ಅನೇಕ ಹೋರಾಟಗಳನ್ನು, ಹಲವು ಬಾರಿ ಮನವಿ ಪತ್ರಗಳನ್ನು ಕೊಟ್ಟೆವು. ಆದರೆ ಯಾವ ಪ್ರಯೋಜನವೂ ಆಗಲಿಲ್ಲ. ಶಾಸಕ ರವೀಂದ್ರ ಶ್ರೀಕಂಠಯ್ಯನವರಿಗೆ ಹಕ್ಕುಪತ್ರ ಕೊಡಿಸಿ ಮನವಿ ಮಾಡಿದಾಗ, ಸ್ಪಂದಿಸಿದ್ದ ಅವರು ನನ್ನ ಅಧಿಕಾರದ ಅವಧಿಯಲ್ಲಿ ಹಕ್ಕುಪತ್ರ ನೀಡುತ್ತೇನೆ ಎಂದು ಹೇಳಿದ್ದರು. ಅದರಂತೆ ನುಡಿದಂತೆ ನಡೆದು ಅತಂತ್ರ ನಿವಾಸಿಗಳ ಬದುಕಿಗೆ ಆಸರೆಯಾದ ರವೀಂದ್ರ ಶ್ರೀಕಂಠಯ್ಯ ಜನಾನುರಾಗಿ ಜನನಾಯಕ ಎಂದು ಗುಣಗಾನ ಮಾಡಿದರು. ಇದೇ ರೀತಿ ಕ್ಷೇತ್ರ ವ್ಯಾಪ್ತಿಯ ಕೆಆರ್‌ಎಸ್‌, ಬೆಳಗೊಳ, ಆನಂದೂರು ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಿ, ಹಕ್ಕುಪತ್ರ ನೀಡಿದ್ದಾರೆ. ಅವರಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.

ಈ ಶಾಸಕರೇ ಬರಲಿ
ಹಕ್ಕುಪತ್ರ ಪಡೆದು ಮಾತನಾಡಿದ ಗ್ರಾಮ ಪಂಚಾಯತಿ ಮಾಜಿ ಸದಸ್ಯೆ ಸುಂದರಮ್ಮ, ನಮ್ಮ ಮನೆಯಲ್ಲಿ ಆರು ಮಂದಿ ವಾಸವಿದ್ದೇವೆ. ನನಗೆ 10 ವರ್ಷ ಇದ್ದಾಗ ನಾವು ಇಲ್ಲಿಗೆ ಬಂದೆವು. ಈಗ ನನಗೆ 52 ವರ್ಷ ವಯಸ್ಸು. ಈ ಹಿಂದೆ ಆಡಳಿತ ನಡೆಸಿದ ಹಲವರು ಹಕ್ಕುಪತ್ರದ ಭರವಸೆ ನೀಡಿದ್ದರು. ಆದರೆ ನಮಗೆ ರವೀಂದ್ರರವರು ಹಕ್ಕುಪತ್ರ ನೀಡಿದ್ದಾರೆ, ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ. ಇಂತಹವರೇ ನಮಗೆ ಮತ್ತೆ ಶಾಸಕರಾಗಿ ಆರಿಸಿಬರಬೇಕು ಹರ್ಷ ವ್ಯಕ್ತಪಡಿಸಿದರು.

ಅಭದ್ರತೆ ಇಲ್ಲ
ಹಕ್ಕು ಪತ್ರ ಪಡೆದ ಗೀತಾ ಎಂಬುವರು ಮಾತನಾಡಿ, ನಮಗೆ ಇಲ್ಲಿ ಸದಾ ಅಭದ್ರತೆಯ ಭಾವ ಕಾಡುತ್ತಿತ್ತು. ಮನೆ ನಿವೇಶನಕ್ಕೆ ಸಂಬಂಧಿಸಿದಂತೆ ಯಾವುದೇ ಕಂದಾಯ ದಾಖಲೆಗಳ ಭದ್ರತೆ ಇಲ್ಲದ ಕಾರಣ ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸುವ ಭಯವಿತ್ತು.  ಯುಗಾದಿ ಹಬ್ಬದ ದಿನ ಬೆಲ್ಲದ ಸಿಹಿಯಂತೆ ನಮಗೆ ಹಕ್ಕುಪತ್ರ ನೀಡಿರುವುದು ಬಹಳ ಸಂತೋಷ ತಂದಿದೆ. ಇನ್ನೀಗ ನಮಗೆ ಯಾವುದೇ ಅಭದ್ರತೆಯಿಲ್ಲ ಎಂದು ಹರ್ಷ ವ್ಯಕ್ತಪಡಿಸಿದರು.

ಬಾಳಿನ ಬೆಳಕು
ಅರ್ಪಿತ ಎಂಬವರು ಮಾತನಾಡಿ, ನಾನು ಮದುವೆಯಾಗಿ ಇಲ್ಲಿಗೆ ಬಂದು ಎಂಟು ವರ್ಷವಾಗಿದೆ. ನಮ್ಮ ಅತ್ತೆ 50 ವರ್ಷಗಳಿಂದ ಇಲ್ಲಿ ವಾಸವಿದ್ದಾರೆ. ಹಿಂದೂಗಳ ಪಾಲಿಗೆ ಯುಗಾದಿ ಹಬ್ಬವೇ ಹೊಸ ವರ್ಷ. ಇಂದು ನಮಗೆ ಹಕ್ಕುಪತ್ರ ನೀಡುವ ಮೂಲಕ ರವೀಂದ್ರ ಶ್ರೀಕಂಠಯ್ಯನವರು ನಮ್ಮ ಬಾಳಿಗೆ ಬೆಳಕಾಗಿ ಬಂದಿದ್ದಾರೆ. ಯುಗಾದಿ ಹಬ್ಬವನ್ನು ಈ ಬಾರಿ ಹೆಚ್ಚು ಖುಷಿಯಿಂದ ಆಚರಿಸುತ್ತೇವೆ. ಇನ್ನು ಮುಂದೆ ನೆಮ್ಮದಿಯಿಂದ ನಿದ್ದೆ ಮಾಡುತ್ತೇವೆ ಎಂದು ಸಂಭ್ರಮ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಸಿಕ್ಕಿದೆ
ಮೊಗರಹಳ್ಳಿ ಮಂಟಿಯ ಹೊನ್ನಮ್ಮ ಮಾತನಾಡಿ, ನಾನು 40 ವರ್ಷಗಳ ಹಿಂದೆ ತಮಿಳುನಾಡಿನ ಈರೋಡ್ ನಿಂದ ಕೊಳ್ಳೇಗಾಲಕ್ಕೆ ತೋಟದ ಕೆಲಸಕ್ಕೆ ಬಂದೆ. ನಂತರ ನಾವು ಇಲ್ಲಿಗೆ ಬಂದೆವು. ಅಂದಿನಿಂದ ಇಲ್ಲಿಯವರೆಗೂ ನಮಗೆ ಯಾವುದೇ ಹಕ್ಕುಪತ್ರ ಇರಲಿಲ್ಲ. ಕೂಲಿ ನಾಲಿ, ಗಾರೆ ಕೆಲಸ ಸೇರಿದಂತೆ ಮತ್ತಿತರ ಕೆಲಸ ಮಾಡುವ ಇಲ್ಲಿಯ ಜನರಿಗೆ ಇಂದು ಸ್ವಾತಂತ್ರ್ಯ ಸಿಕ್ಕಿದೆ. ಇನ್ನು ಮುಂದೆ ನಾವು ನೆಮ್ಮದಿಯಿಂದ ನಮ್ಮ ಮಕ್ಕಳಿಗಾಗಿ ಬದುಕು ಸಾಗಿಸಬಹುದು. ಇದಕ್ಕೆ ಕಾರಣರಾದ ರವೀಂದ್ರ ಶ್ರೀಕಂಠಯ್ಯನವರು ನೂರ್ಕಾಲ ಚೆನ್ನಾಗಿರಲಿ ಎಂದು ಶುಭ ಹಾರೈಸಿದರು.

ಒಟ್ಟಾರೆ ಮೊಗರಹಳ್ಳಿ ಕೆಳಮಂಟಿಯಲ್ಲಿ ಕಳೆದ ಐದಾರು ದಶಕಗಳಿಂದ ವಾಸವಿದ್ದ 300 ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಮೂಲಕ ಶಾಸಕ ರವೀಂದ್ರ ಶ್ರೀಕಂಠಯ್ಯ ಆಸರೆಯಾಗಿದ್ದಾರೆ. ಕತ್ತಲಲ್ಲಿದ್ದವರನ್ನು ಬೆಳಕಿಗೆ ಕರೆತಂದಿದ್ದಾರೆ ಎನ್ನಬಹುದು.

ಮೊಗರಹಳ್ಳಿ ಕೆಳಮಂಟಿ ನಿವಾಸಿಗಳ ಪ್ರಕಾರ ಒಂದೇ ಕುಟುಂಬದ ಹಲವು ಶಾಸಕರು ಹತ್ತಾರು ಚುನಾವಣೆಗಳಲ್ಲಿ ಬಂದು ಮತ ಪಡೆದು ಹೋಗಿದ್ದಾರೆ. ಅವರಿಂದ ಸಾಧ್ಯವಾಗದ ಕಾರ್ಯದಲ್ಲಿ ಯಶಸ್ವಿಯಾಗಿರುವ ರವೀಂದ್ರ ಶ್ರೀಕಂಠಯ್ಯನವರಂತಹ ಸಂತತಿ ಹೆಚ್ಚಳವಾಗಲಿ ಎಂಬುದು ಇಲ್ಲಿಯ ನಿವಾಸಿಗಳ ಮನದಾಳದ ಮಾತು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ