ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಚಿಂತನೆಗಳನ್ನು ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ತನಗೆ, ಇನ್ನಷ್ಟು ಶಕ್ತಿ ತುಂಬಲು ಬಿಎಸ್ಪಿ ಕಾರ್ಯಕರ್ತರು ಬೆಂಬಲವಾಗಿ ನಿಂತು ‘ಕೈ’ಜೋಡಿಸಬೇಕೆಂದು ಮಳವಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ.ನರೇಂದ್ರಸ್ವಾಮಿ ಮನವಿ ಮಾಡಿದರು.
ಮಳವಳ್ಳಿ ಪಟ್ಟಣದ ಸಿದ್ದಾರ್ಥನಗರ ಬಡಾವಣೆಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಬಿಎಸ್ಪಿ ಕಾರ್ಯಕರ್ತರು ವಕೀಲ ಜಗದೀಶ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಮಾತನಾಡಿದ ಅವರು, ಬಿಎಸ್ಪಿ ಕಾರ್ಯಕರ್ತರು ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಮಾಯವತಿ ಅವರ ಹೆಸರಿನಲ್ಲಿ ಮತವನ್ನ ಬೇರ್ಪಡಿಸುವುದರಿಂದ ಕಾರ್ಯಕರ್ತರ ಚಿಂತನೆ ಮತ್ತು ಬದ್ದತೆಗೆ ಹಿನ್ನಡೆ ಉಂಟಾಗುವಂತಾಗುತ್ತಿದ್ದು, ಬಿಎಸ್ಪಿ ಕಾರ್ಯಕರ್ತರಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ, ನನ್ನೊಂದಿಗೆ ಕೈಜೋಡಿಸಿ ಇಚ್ಚೆ ಇದ್ದರೇ ಪಕ್ಷಕ್ಕೆ ಸೇರಿ, ಇಲ್ಲವೇ ನರೇಂದ್ರಸ್ವಾಮಿಯವರ ಬದ್ದತೆಯನ್ನು ಅರಿತು ಸಹಾಯ ಮಾಡಿ ಎಂದು ಕೋರಿದರು.
ತಾನು ಕಾಂಗ್ರೆಸ್ ಪಕ್ಷದವನೇ ಆದರೂ ಕೂಡ ಅಂಬೇಡ್ಕರ್ ಅವರ ವಿಚಾರ ಬಂದಾಗ ಪಕ್ಷವನ್ನು ಮೀರಿ ಬೆಂಬಲವಾಗಿ ನಿಲ್ಲುತ್ತೇನೆ. ಮೀಸಲು ಕ್ಷೇತ್ರದಲ್ಲಿರುವ ತಾವು ಅಂಬೇಡ್ಕರ್ ಆಶಯಗಳನ್ನು ಈಡೇರಿಸಲು ಇಚ್ಚಾಶಕ್ತಿ ಮತ್ತು ಬದ್ದತೆ ಇರುವುದರಿಂದಲೇ ಬಿಎಸ್ಪಿ ಕಾರ್ಯಕರ್ತರಲ್ಲಿ ಮನವಿ ಮಾಡಿ ಬೆಂಬಲ ಕೋರುತ್ತಿದ್ದೇನೆಂದು ಹೇಳಿದರು.
‘ನಮ್ಮ ಅಲೋಚನೆಗಳು ಒಂದಾಗಬೇಕೆ ಹೊರತು, ವಿಭಾಗವಾಗಬಾರದು, ಫಲ ಸಿಗಬೇಕೆಂದರೇ ನಾವು ಒಗ್ಗಟ್ಟಾಗಿ ಶ್ರಮಿಸಬೇಕಿದೆ, ನನ್ನ ಗೆಲುವಿಗಾಗಿ ಮಾತನಾಡುತ್ತಿಲ್ಲ, ಸಂವಿಧಾನ ಉಳಿಸುವ ಅನಿವಾರ್ಯ ಪರಿಸ್ಥಿತಿ ದೇಶದಲ್ಲಿದೆ. ನಮ್ಮ ವಿಭಿನ್ನ ಚಿಂತನೆಗಳಿಂದ ನಮ್ಮೊಳಗೆ ಹೊಡೆದಾಡಿ, ನಮ್ಮನ್ನೇ ಕೊನೆದಾಗಿ ಧಮನ ಮಾಡುವುದಕ್ಕೆ ಅವಕಾಶ ಮಾಡಿಕೊಡದೇ, ಎಲ್ಲರೂ ಒಗ್ಗಟ್ಟಾಗಿ ಸಂವಿಧಾನ ಉಳಿಸಬೇಕಾಗಿರುವುದರಿಂದ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬೆಂಬಲ ನೀಡಬೇಕೆಂದು ಕೋರಿದರು.
ಮಳವಳ್ಳಿ ತಾಲ್ಲೂಕು ಅಭಿವೃದ್ದಿ ಮತ್ತು ನಾಯಕತ್ವಕ್ಕೆ ಮುನ್ನುಡಿ ಬರೆಯುವ ಚುನಾವಣೆ ಇದಾಗಿರಲಿ, ಮತದಾರರ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳದೇ ಪ್ರತಿಯೊಂದು ಮತಕ್ಕೂ ಗೌರವ ಮತ್ತು ಬೆಲೆ ಸಿಗುವಂತೆ ಹಾಗೂ ಮಳವಳ್ಳಿ ಜನತೆ ಎದ್ದು ನಿಂತು ಗೌರವದಿಂದ ಮಾತನಾಡುವ ವ್ಯವಸ್ಥೆಯನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ನನ್ನನ್ನು ನಂಬಿ ಕೈ ಹಿಡಿದು ಬೆಂಬಲಿಸಿ ಎಂದರು.
ವಿವಿಧ ಗ್ರಾಮದ ಬಿಎಸ್ಪಿ ಕಾರ್ಯಕರ್ತರಾದ ಕಲ್ಕುಣಿ ಯಜಮಾನ್ ಮಾದು, ಗ್ರಾ.ಪಂ ಮಾಜಿ ಸದಸ್ಯ ರಂಗಸ್ವಾಮಿ, ಕೆಂಪಣ್ಣ, ಕಂದೇಗಾಲದ ಶಾಂತರಾಜು. ಶಂಕರ್, ಸುನೀಲ್, ಬ್ಲಫ್ ದೀಪು, ಜಾನ್ಸನ್, ಸಿದ್ದಾರ್ಥನಗರದ ದೀಪು, ಅಶೋಕ್ ಶಿವಶಂಕರ್, ರಾಚಪ್ಪ, ಗಗನ್, ರಘು ಸೇರಿದಂತೆ 50 ಕ್ಕೂ ಹೆಚ್ಚು ಮಂದಿ ವಕೀಲ ಜಗದೀಶ್ ಅವರ ಸಹಕಾರದೊಂದಿಗೆ ಪಿ.ಎಂ ನರೇಂದ್ರಸ್ವಾಮಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡರು.
ಇದೇ ಸಂದರ್ಭದಲ್ಲಿ ಎಸ್ಸಿ ಎಸ್ಟಿ ವಿಭಾಗದ ಅಧ್ಯಕ್ಷ ಸುರೇಶ್ ಕಂಠಿ, ಪುರಸಭೆ ಸದಸ್ಯ ಎಂಆರ್ ರಾಜಶೇಖರ್, ಮುಖಂಡರಾದ ದ್ಯಾವಪ್ಪ, ಜಯರಾಮು, ಸಿ,ಮಾಧು, ವಕೀಲ ಜಗದೀಶ್, ಮುತ್ತುರಾಜು, ಚಿಕ್ಕಸ್ವಾಮಿ, ಸಾಗ್ಯಕೆಂಪಣ್ಣ, ನಾಗಮಹದೇವು ಪೂರಿಗಾಲಿ ಜಯರಾಜು ಸೇರಿದಂತೆ ಇತರರು ಇದ್ದರು.




