Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ವಿಧಾನಸಭಾ ಕ್ಷೇತ್ರ : ಕಗ್ಗಂಟಾದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ

ಮಂಡ್ಯ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿ ವಾರ ಕಳೆದರೂ, ಜಿಲ್ಲಾ ಕೇಂದ್ರವಾದ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದ್ದು, ಅಭ್ಯರ್ಥಿಯಾಗಲು ಪ್ರಯತ್ನ ಮಾಡುತ್ತಿರುವ ಐದಾರು ಮಂದಿ ಮನದಲ್ಲಿ ತಳಮಳ ಮೂಡಿಸಿದೆ.

ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾದರೂ ಕೂಡ ಮಂಡ್ಯ ಕ್ಷೇತ್ರದ ಅಭ್ಯರ್ಥಿ  ಘೋಷಣೆ ಯಾಗಿರುವುದು ಆಕಾಂಕ್ಷಿಗಳಲ್ಲಿ ತಳಮಳ ಸೃಷ್ಟಿ ಮಾಡಿದೆ. ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ 16 ಮಂದಿ ಆಕಾಂಕ್ಷಿತರು ಅರ್ಜಿ ಹಾಕಿದ್ದರೂ, ಅದರಲ್ಲಿ ಪ್ರಮುಖವಾಗಿ ಐದಾರು ಮಂದಿ ಗಂಭೀರವಾಗಿ ಟಿಕೆಟ್ ಪಡೆಯಲು ಪ್ರಯತ್ನ ನಡೆಸಿದ್ದಾರೆ.

ಟಿಕೆಟ್ ಶತಾಯಗತಾಯ ಯತ್ನ

ಮಾಜಿ ಸಚಿವ ಎಂ.ಎಸ್. ಆತ್ಮಾನಂದ, ಅಮರಾವತಿ ಚಂದ್ರಶೇಖರ್, ಮನ್ ಮಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಕುಮಾರ್, ಗಣಿಗ ರವಿಕುಮಾರ್, ಸಿದ್ಧಾರೂಢ ಸತೀಶ್ ಗೌಡ, ಡಾ. ಕೃಷ್ಣ ಹಾಗೂ ಕೀಲಾರ ರಾಧಾಕೃಷ್ಣ ಹೆಸರುಗಳು ಪ್ರಬಲವಾಗಿ ಕೇಳಿ ಬರುತ್ತಿದೆ. ಮಂಡ್ಯ ಕಾಂಗ್ರೆಸ್ ಟಿಕೆಟ್ ಶತಾಯಗತಾಯ ಪಡೆಯಲೇಬೇಕೆಂದು ಗಣಿಗ ರವಿಕುಮಾರ್, ಡಾ. ಕೃಷ್ಣ, ಕೀಲಾರ ರಾಧಾಕೃಷ್ಣ, ಉಮ್ಮಡಹಳ್ಳಿ ಶಿವಕುಮಾರ್ ಪ್ರಯತ್ನಿಸುತ್ತಿದ್ದಾರೆ‌.

ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಹಿರಿತನ ಮತ್ತು ಪಕ್ಷನಿಷ್ಠೆ ಗುರುತಿಸಿ ಒಬ್ಬರನ್ನು ಆಯ್ಕೆ ಮಾಡಬೇಕೆಂದು ಮಾಜಿ ಸಚಿವ ಎಂ.ಎಸ್‌. ಆತ್ಮಾನಂದ, ಅಮರಾವತಿ ಚಂದ್ರಶೇಖರ್, ಸಿದ್ದಾರೂಢ ಸತೀಶ್ ಗೌಡ ನೇತೃತ್ವದಲ್ಲಿ ಹಲವು ಆಕಾಂಕ್ಷಿಗಳು ಹಾಗೂ ಮುಖಂಡರು ನಿನ್ನೆ ಸಂಜೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ‌. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಪಕ್ಷನಿಷ್ಠೆ ಪರಿಗಣಿಸಿ

ಈ ಹಿಂದೆಯೂ ಇದೇ ಗುಂಪು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ಪರಿಚಯ ಭೇಟಿ ಮಾಡಿ ಸೇವಾ ಹಿರಿತನ, ಪಕ್ಷನಿಷ್ಠೆ ಪರಿಗಣಿಸುವಂತೆ ಮನವಿ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಸೇರಿರುವ ಡಾ. ಕೃಷ್ಣ ಮತ್ತು ಕೀಲಾರ ರಾಧಾಕೃಷ್ಣ ಅವರಿಗೆ ಟಿಕೆಟ್ ನೀಡಬಾರದೆಂದು ಪರೋಕ್ಷವಾಗಿ ಕಾಂಗ್ರೆಸ್ ವರಿಷ್ಠರಿಗೆ ಸ್ಪಷ್ಟವಾಗಿ ಹೇಳಿ ಬಂದಿದ್ದಾರೆ‌.

ಮಂಡ್ಯ ಕ್ಷೇತ್ರದ ಕೈ ಟಿಕೆಟ್ ಪಡೆಯಲು ಗಣಿಗ ರವಿಕುಮಾರ್, ಡಾ.ಕೃಷ್ಣ, ಕೀಲಾರ ರಾಧಾಕೃಷ್ಣ ಪ್ರತ್ಯೇಕವಾಗಿ ಕಾಂಗ್ರೆಸ್ ವರಿಷ್ಠರ ಬೆನ್ನು ಹತ್ತಿದ್ದಾರೆ‌. ಹೇಗಾದರೂ ಸರಿ, ಎಷ್ಟಾದರೂ ಸರಿ, ಟಿಕೆಟ್ ಪಡೆದೇ ಪಡೆಯುತ್ತೇನೆ ಎಂದು ಮೂರ್ನಾಲ್ಕು ಆಕಾಂಕ್ಷಿಗಳು ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ. ದಿನನಿತ್ಯ ಬೆಂಗಳೂರಿಗೆ ಎಡತಾಕಿ ವರಿಷ್ಠರ ದುಂಬಾಲು ಬಿದ್ದು, ಟಿಕೆಟ್ ಪಡೆಯಲು ಹರಸಾಹಸ ಮಾಡುತ್ತಿದ್ದಾರೆ ಎಂಬ ಸುದ್ದಿಯನ್ನು ಆಯಾ ಆಕಾಂಕ್ಷಿಗಳ ಬೆಂಬಲಿಗರೇ ಹೇಳಿಕೊಂಡು ತಿರುಗುತ್ತಿದ್ದಾರೆ.

ಹಿರಿತನ ಗೌರವಿಸಿ

ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಮಾಡಿರುವ ಸೇವೆ ಹಾಗೂ ಹಿರಿತನ ಗೌರವಿಸಿ ನಮ್ಮಲ್ಲೇ ಒಬ್ಬರಿಗೆ ಟಿಕೆಟ್ ಕೊಡಿ ಎಂದು ಹತ್ತಾರು ಆಕಾಂಕ್ಷಿಗಳಿರುವ ಒಂದು ಗುಂಪು ವರಿಷ್ಟರಿಗೆ ಆಗ್ರಹ ಮಾಡಿದೆ. ಈಗಷ್ಟೇ ಪಕ್ಷಕ್ಕೆ ಬಂದಿರುವವರು ಒಂದಷ್ಟು ವರ್ಷ ಪಕ್ಷ ಸೇವೆ ಮಾಡಲಿ ಎಂದೂ ತಿಳಿಸಿದೆ‌. ಮಂಡ್ಯ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಅವಕಾಶವಿದ್ದು, ಎಲ್ಲಾ ರೀತಿಯ ಸಂಪನ್ಮೂಲಗಳನ್ನು ಕ್ರೂಢೀಕರಿಸಿಕೊಂಡಿರುವ ವ್ಯಕ್ತಿಗೆ ಟಿಕೆಟ್ ನೀಡಬೇಕೆಂದು ಮತ್ತೊಂದು ಬಣ ವರಿಷ್ಟರ ದುಂಬಾಲು ಬಿದ್ದಿದೆ.

ಕಳೆದ ಬಾರಿ ಚುನಾವಣೆಯಲ್ಲಿ ಸೋತಿರುವ ನನ್ನ ಬಗ್ಗೆ ಜನರಲ್ಲಿ ಅನುಕಂಪ ಮೂಡಿದೆ. ನಾನು ಕೂಡ ಪಕ್ಷದ ನಾಯಕರು ಹೇಳಿದಂತೆ ಎಲ್ಲಾ ರೀತಿಯ ಸಂಪನ್ಮೂಲ ಕ್ರೂಢೀಕರಿಸಿಕೊಂಡಿದ್ದೇನೆ, ನನಗೆ ಟಿಕೆಟ್ ಕೊಡಿ ಎಂದು ಗಣಿಗ ರವಿಕುಮಾರ್ ಕೂಡ ಕೈ ವರಿಷ್ಟರ ಮೇಲೆ ಒತ್ತಡ ಹಾಕಿದ್ದಾರೆ. ಒಟ್ಟಾರೆ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದ್ದು ಯಾರಿಗೆ ಕಾಂಗ್ರೆಸ್ ಟಿಕೆಟ್ ಒಲಿಯುವುದೋ ಎಂಬುದು ಯಕ್ಷ ಪ್ರಶ್ನೆಯಾಗಿ ಕುತೂಹಲ ಮೂಡಿಸಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ