Friday, November 20, 2026

ಪ್ರಾಯೋಗಿಕ ಆವೃತ್ತಿ

ಪಾಂಡವಪುರ | ದೇಶದ ಭದ್ರತೆಗೆ ಯುವಕರು ಸೈನಿಕರಾಗಿರಿ : ಯೋಧ ಅಲ್ವಿನ್ ಡಿಸೋಜ

ಭಾರತೀಯ ಸೇನೆಯಲ್ಲಿ ಯೋಧರಾಗಿ ಸೇವೆ ಸಲ್ಲಿಸಿ, ತಾತ್ಕಾಲಿಕವಾಗಿ ತವರಿಗೆ ಆಗಮಿಸಿದ ತಾಲೂಕಿನ ವಿಶ್ವೇಶ್ವರನಗರ ಬಡಾವಣೆಯ  ಎನ್.ಡಿ. ಅಲ್ವಿನ್ ಡಿಸೋಜಾ ಹಾಗೂ ಕ್ಯಾತನಹಳ್ಳಿ ಗ್ರಾಮದ ಕೆ.ಎಸ್.ಪ್ರಸಾದ್ ಅವರಿಗೆ ತಾಲೂಕಿನ ರೈಲ್ವೆನಿಲ್ದಾಣದ ವೃತ್ತದಲ್ಲಿ ಕಡತನಾಳು, ಕ್ಯಾತನಹಳ್ಳಿ ಗ್ರಾಮಸ್ಥರು ಹಾಗೂ ಕೆನ್ನಾಳು ಕಬಡ್ಡಿ ಬಾಯ್ಸ್ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಿ, ಅಭಿನಂದಿಸಿ, ಪ್ರೋತ್ಸಾಹಿಸಿದರು.

ಎನ್.ಡಿ ಅಲ್ವಿನ್ ಡಿಸೋಜ ಅವರು, ಕಳೆದ 19 ವರ್ಷದಿಂದ ಭೂಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಮಹಾರಾಷ್ಟ್ರ, ಜಮ್ಮು – ಕಾಶ್ಮೀರ, ಅರುಣಾಚಲ, ಪಂಜಾಬ್, ಸಿಕ್ಕಿಂ ಸೇರಿದಂತೆ ಇತರೆ ಗಡಿ ಪ್ರದೇಶದಲ್ಲಿ ಭದ್ರತೆಗಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಕೆಲ ತಿಂಗಳು ಅವಧಿ ತನಕ ಸೇವೆ ಮುಂದುವರೆಸಲಿದ್ದಾರೆ.

ಕೆ.ಎಸ್.ಪ್ರಸಾದ್ ಅವರು, ಭಾರತೀಯ ಸೇನೆ ಗಡಿ ಭದ್ರತಾ ಪಡೆಯಲ್ಲಿ ಸೈನಿಕರಾಗಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಈ ಅವಧಿಯಲ್ಲಿ 5 ವರ್ಷಗಳ ಕಾಲ ಬ್ಲಾಕ್ ಕ್ಯಾಟ್ ಕಮಾಂಡೋ ತರಬೇತಿ ಪಡೆದುಕೊಂಡು, ಭಾರತ ದೇಶದ ವಿವಿಧ ಗಣ್ಯರ ಭದ್ರತಾ ಪಡೆಯಲ್ಲಿ ನೇಮಕಗೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತವಾಗಿ ಮೇಘಾಲಯ ರಾಜ್ಯದ ಗಡಿ ಪ್ರದೇಶದಲ್ಲಿ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಿದ್ದಾರೆ.

ತವರಿನ ಸನ್ಮಾನ ಸ್ವೀಕರಿಸಿ ಮಾತನಾಡಿದ ಯೋಧ ಅಲ್ವಿನ್ ಡಿಸೋಜ ಅವರು, ಗಡಿ ಪ್ರದೇಶದಲ್ಲಿ ಭದ್ರತೆ ಸೇವೆ ಸಲ್ಲಿಸುತ್ತಿದ್ದಾಗ ನಾನು ಎರಡು ಬಾರಿ ಅಪಾಯದಿಂದ ಪಾರಾಗಿದ್ದೇನೆ. ನನ್ನ ಯೋಧ ಹುದ್ದೆಯಲ್ಲಿ ಜಮ್ಮು ಕಾಶ್ಮೀರ ಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದು ಬಹಳ ವಿಶೇಷವಾಗಿತ್ತು. ಪ್ರಸ್ತುತ ಸಂದರ್ಭದಲ್ಲಿ ಭಾರತ ದೇಶದ ಯುವಕರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರ್ಪಡೆಗೊಳ್ಳಬೇಕು ಎಂದರು.

ಯೋಧ ಕೆ.ಎಸ್.ಪ್ರಸಾದ್ ಮಾತನಾಡಿ, ಗ್ರಾಮೀಣ ಕ್ರೀಡೆಯಲ್ಲಿ ಹೆಚ್ಚು ಪಾಲ್ಗೊಳ್ಳಬೇಕಿದೆ. ಪೌಷ್ಟಿಕಾಂಶ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಸಾವಯವ ಆಹಾರ ಪದ್ದತಿ ಬಳಸಿದರೆ ದೈಹಿಕವಾಗಿ ಸದೃಢರಾಗಬಹುದು. ನಾನು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ನನಗೆ ಬಹಳ ಖುಷಿ ತಂದುಕೊಟ್ಟಿದೆ ಎಂದು ತಿಳಿಸಿದರು.

ಅಭಿನಂದನಾ ಸಮಾರಂಭದಲ್ಲಿ ಗ್ರಾಮಸ್ಥರಾದ ಹೇಮಂತ್ ಕುಮಾರ್, ಸುನಿಲ್ ಕುಮಾರ್, ರಂಗನಾಥ್, ಅಭಿನವ್, ಮಧು, ಗಂಗಾಧರ, ಕಡತನಾಳು ನಿರಂಜನ್ ಸೇರಿದಂತೆ ಕಡತನಾಳು ಮತ್ತು ಕ್ಯಾತನಹಳ್ಳಿ ಗ್ರಾಮಸ್ಥರು ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ