-
ಮಿಮ್ಸ್ ಹೊರಗುತ್ತಿಗೆ ಭದ್ರತಾ ಸೇವೆ ಟೆಂಡರ್ ಪಡೆದಿದ್ದ ಕೆಎಸ್ ಎಫ್ -9 ಏಜೆನ್ಸಿ
- ಚೆಸ್ಕಾಂ ನೀಡಿದ್ದ ಪ್ರಮಾಣಪತ್ರವನ್ನು ಪ್ರಶ್ನಿಸಿದ್ದ ಕರುನಾಡ ಸೇವಕರು ಸಂಘಟನೆ
ನಕಲಿ ದಾಖಲೆಗಳನ್ನು ಬಳಸಿ ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ ಹೊರಗುತ್ತಿಗೆ ಭದ್ರತಾ ಸೇವೆ ಟೆಂಡರ್ ಪಡೆದಿದ್ದ ಕೆಎಸ್ ಎಫ್ -9 ಏಜೆನ್ಸಿಗೆ ನೀಡಿದ್ದ ಸೇವಾ ಪ್ರಮಾಣಪತ್ರವನ್ನು ಐದು ಜಿಲ್ಲೆಗಳ ವ್ಯಾಪ್ತಿಯ ಮೈಸೂರಿನ ಚೆಸ್ಕಾಂ ಕಾರ್ಪೋರೆಟ್ ಕಚೇರಿ ಹಿಂಪಡೆದಿದೆ.
ಕಳೆದ ಡಿಸೆಂಬರ್ ನಲ್ಲಿ ಮಂಡ್ಯ ಮಿಮ್ಸ್ ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಭದ್ರತಾ ಸೇವೆ ಒದಗಿಸಲು ಇದೇ ಕೆಎಸ್ ಎಫ್ -9 ಏಜೆನ್ಸಿ ಟೆಂಡರ್ ಸಲ್ಲಿಸಿತ್ತು. ಈ ಸಂದರ್ಭದಲ್ಲಿ ಸರ್ಕಾರಿ ಸ್ವಾಮ್ಯದ ಕಿಯಾನಿಕ್ಸ್ ಸಂಸ್ಥೆಯ ಮೂಲಕ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿಗೆ ಎರಡು ವರ್ಷಗಳ ಹೊರಗುತ್ತಿಗೆ ಸೇವೆ ನೀಡಿರುವ ಸೇವಾ ಪ್ರಮಾಣಪತ್ರವನ್ನು ಸಲ್ಲಿಸಿತ್ತು. ನಂತರದಲ್ಲಿ ಇದೇ ಏಜೆನ್ಸಿಯೂ ನಿಯಮಬಾಹಿರವಾಗಿ ಮಿಮ್ಸ್ ಹೊರಗುತ್ತಿಗೆ ಭದ್ರತಾ ಸಿಬ್ಬಂದಿಯನ್ನು ಕೆಲಸದಿಂದ ಕೈಬಿಟ್ಟು ಸಮವಸ್ತ್ರ ಇತ್ಯಾದಿ ಹೆಸರಿನಲ್ಲಿ ನೌಕರರಿಂದ ಸುಲಿಗೆ ನಡೆಸಿ ಪ್ರತಿಭಟನೆಯನ್ನು ಸಹ ಎದುರಿಸಿತ್ತು. ನಂತರದಲ್ಲಿ ಚೆಸ್ಕಾಂ ನೀಡಿದ್ದ ಪ್ರಮಾಣಪತ್ರವನ್ನು ಪ್ರಶ್ನಿಸಿದ್ದ ಕರುನಾಡ ಸೇವಕರು ಸಂಘಟನೆಯ ಜಿಲ್ಲಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ಚೆಸ್ಕಾಂ ನೀಡಿದ್ದ ಪ್ರಮಾಣಪತ್ರವನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದರು.

ಕೆಎಸ್ ಎಫ್ -9 ಏಜೆನ್ಸಿಯೂ ಕಿಯಾನಿಕ್ಸ್ ಗೆ ಮಾನವ ಸಂಪನ್ಮೂಲವನ್ನು ಒದಗಿಸಿದೆಯೇ ಹೊರತು ನೇರವಾಗಿ ಚೆಸ್ಕಾಂಗೆ ಯಾವುದೇ ಸೇವೆಯನ್ನು ಒದಗಿಸಿಲ್ಲ ಹಾಗೂ ಚೆಸ್ಕಾಂ ನಡುವೆ ಯಾವುದೇ ಒಪ್ಪಂದವೂ ಏರ್ಪಟ್ಟಿಲ್ಲ. ಈಗಿರುವಾಗ ಚೆಸ್ಕಾಂ ವತಿಯಿಂದ ಏಜೆನ್ಸಿಗೆ ಸೇವಾ ಪ್ರಮಾಣಪತ್ರ ನೀಡಿರುವುದು ನಿಯಮಬಾಹಿರವೆಂದು ಆಗ್ರಹಿಸಿದ್ದರು. ಈ ಹಿನ್ನಲೆಯಲ್ಲಿ ನಾಗಣ್ಣಗೌಡರ ಆಗ್ರಹಕ್ಕೆ ಮಣಿದಿರುವ ಚೆಸ್ಕಾಂ ಪ್ರಧಾನ ವ್ಯವಸ್ಥಾಪಕರು ಸೇವಾ ಪ್ರಮಾಣ ಪತ್ರವನ್ನು ಹಿಂಪಡೆದಿದ್ದು, ಮಿಮ್ಸ್ ಆಡಳಿತ ಮಂಡಳಿ ಅಗತ್ಯ ಕ್ರಮ ಜರುಗಿಸಿ ಏಜೆನ್ಸಿಯ ಭದ್ರತಾ ಠೇವಣಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಹಾಗೂ ಅಕ್ರಮಕ್ಕೆ ಕಾರಣವಾಗಿದ್ದ ಮಿಮ್ಸ್ ನಿರ್ದೇಶಕ ಡಾ.ಬಿ.ಜೆ.ಮಹೇಂದ್ರ ವಿರುದ್ದ ಸರ್ಕಾರ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಈ ಏಜೆನ್ಸಿಯೂ ಮಂಡ್ಯ ವಿಧಾನಸಭಾ ಕ್ಷೇತ್ರದ ಜಾ.ದಳ ಟಿಕೆಟ್ ಅಕಾಂಕ್ಷಿಯಾಗಿದ್ದ ಮಹಾಲಿಂಗೇಗೌಡ ಮುದ್ದನಘಟ್ಟ ಅವರಿಗೆ ಸೇರಿದ್ದು ಎನ್ನಲಾಗಿದೆ.




