ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ 500ಕ್ಕೂ ಹೆಚ್ಚು ಸಿಐಎಸ್’ಎಫ್ ಯೋಧರು ಜಿಲ್ಲೆಗೆ ಆಗಮಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಮಾಹಿತಿ ನೀಡಿದರು.
ಸೋಮವಾರ ಸಂಜೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಐಎಸ್’ಎಫ್ ತುಕಡಿಗಳಿಂದ ಜಿಲ್ಲೆಯ ವಿವಿದೆಡೆ ಪಥ ಸಂಚಲನ ನಡೆಯಲಿದೆ. ಬಳಿಕ ಯೋಧರನ್ನು ಸೂಕ್ತ ಸ್ಥಳಗಳಿಗೆ ನಿಯೋಜಿಸಲಾಗುವುದು ಎಂದರು.
ಚುನಾವಣೆ ದೃಷ್ಟಿಯಿಂದ ಜಿಲ್ಲೆಯಲ್ಲಿ 34 ಚೆಕ್ ಪೋಸ್ಟ್ ತೆರೆಯಲಾಗಿದೆ. ಪ್ರತಿಯೊಂದು ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ದಾಖಲೆ ಇಲ್ಲದ ಹಣ, ವಸ್ತು ಸಾಗಿಸಿದರೆ ವಶಪಡಿಸಿಕೊಂಡು ದೂರು ದಾಖಲಿಸಲಾಗುತ್ತಿದೆ. ಒಟ್ಟಾರೇ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.
ಮಂಡ್ಯದಲ್ಲಿ ಪಥ ಸಂಚಲನ
ಮಂಡ್ಯ ನಗರದ ಹೊಳಲು ಸರ್ಕಲ್ ಬಳಿಯಿಂದ ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ನಿಯೋಜಿಸಿರುವ 96 ಸಿಐಎಸ್’ಎಫ್ ಯೋಧರು ಹಾಗೂ ನಗರದ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿ ಸಿಬ್ಬಂದಿ ವರ್ಗದವರು ಪಥ ಸಂಚಲನ ನಡೆಸಿದರು.
ಪೇಟೆ ಬೀದಿ, ನಂದ ಸರ್ಕಲ್ ಸೇರಿದಂತೆ ವಿವಿದೆಡೆ ಸಂಚಾರಿಸಿ ಸಾರ್ವಜನಿಕರಲ್ಲಿ ಭದ್ರತಾ ಜಾಗೃತಿ ಮೂಡಿಸಿದರು. ಈ ವೇಳೆ ಎಸ್ಪಿ ಯತೀಶ್ ಎನ್, ಎಎಸ್ಪಿ ತಿಮ್ಮಯ್ಯ ಸೇರಿದಂತೆ ಅಧಿಕಾರಿಗಳು ಪಾಲ್ಗೊಂಡಿದ್ದರು.




