Friday, November 20, 2026

ಪ್ರಾಯೋಗಿಕ ಆವೃತ್ತಿ

ಮೇಲುಕೋಟೆ | ಸಾವಿರಾರು ಭಕ್ತರ ಹರ್ಷೋದ್ಗಾರದೊಂದಿಗೆ ವಿಜೃಂಭಣೆಯ ಮಹಾರಥೋತ್ಸವ

ವಿಶ್ವವಿಖ್ಯಾತ ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವ ಅಂಗವಾಗಿ ಮಂಗಳವಾರ ವೈಭವೋಪೇತವಾಗಿ ಶ್ರೀ ಚೆಲುವನಾರಾಯಣ ಸ್ವಾಮಿಯ ಮಹಾರಥೋತ್ಸವ ಸಾವಿರಾರು ಭಕ್ತರ ಹರ್ಷೋದ್ಗಾರದೊಂದಿಗೆ ವಿಜೃಂಭಣೆಯಿಂದ ನೆರವೇರಿತು.

ದೇಶದ ನಾನಾ ಮೂಲೆಗಳಿಂದ ಸಾಗರೋಪಾದಿಯಲ್ಲಿ ಆಗಮಿಸಿದ್ದ ಭಕ್ತರು ರಥೋತ್ಸವವನ್ನು ಕಣ್ತುಂಬಿಕೊಂಡರು, ಇಂದು ಸರ್ಕಾರಿ ರಜೆಯ ದಿನವಾಗಿದ್ದರಿಂದ ಸಹಜವಾಗಿಯೇ ಭಕ್ತರ ಸಂಖ್ಯೆಯಲ್ಲಿ ಕಳೆದ ಭಾರಿಗಿಂತ ಗಣನೀಯ ಏರಿಕೆಯಾಗಿತ್ತು. ಪೂರ್ವ, ಫಲ್ಗುಣಿ ನಕ್ಷತ್ರದಲ್ಲಿ ರಥೋತ್ಸವಕ್ಕೆ ಜಿಲ್ಲಾಧಿಕಾರಿ ಡಾ ಎಚ್. ಎನ್ ಗೋಪಾಲಕೃಷ್ಣ ರಥಗಳಿಗೆ ಪೂಜೆ ಸಲ್ಲಿಸಿ ಚಕ್ರಗಳಿಗೆ ಈಡುಗಾಯಿ ಒಡೆದು ರಥೋತ್ಸವಕ್ಕೆ ಚಾಲನೆ ನೀಡಿದರು.

ಬಹಳ ಕಾತರದಿಂದ ಕಾದಿದ್ದ ಭಕ್ತರು ಉತ್ಸವಕ್ಕೆ ಚಾಲನೆ ದೊರೆಯುತ್ತಿದ್ದಂತೆ ಜಯಘೋಷಗಳೊಂದಿಗೆ ರಥವನ್ನು ಎಳೆದು ಭಕ್ತಿಭಾವ ಮೆರೆದರು.

ವಿವಿಧ ಬಗೆಯ ಹೂಗಳಿಂದ ಸಿಂಗಾರಗೊಂಡಿದ್ದ ಚೆಲುವ ರಾಯಸ್ವಾಮಿ ರಥ ಪ್ರಮುಖ ಆಕರ್ಷಣೆಯಾಗಿತ್ತು. ರಥ ಬೀದಿಯಲ್ಲಿ ಸಾಗುವ ವೇಳೆಯಲ್ಲಿ ನಿರೀಕ್ಷೆಗೂ ಮೀರಿದ ಭಕ್ತರು ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾಗಿತ್ತು. ಭಕ್ತರು ಭಕ್ತಿಗೀತೆಗಳನ್ನು ಪಠಿಸುತ್ತ ಹೆಜ್ಜೆ ಹಾಕಿದರು. ಮೇಲುಕೋಟೆಯ ದೇವಾಲಯದ ರಾಜಬೀದಿಯಲ್ಲಿ ಶ್ರೀ ಚೆಲುವ ನಾರಾಯಣ ಸ್ವಾಮಿಯ ಉತ್ಸವಮೂರ್ತಿ ಹಾಗೂ ಶ್ರೀ ದೇವಿ ಭೂದೇವಿ ಅಮ್ಮನವರು ಮತ್ತು ರಾಮಾನುಜ ಆಚಾರ್ಯರನ್ನು ಕಣ್ತುಂಬಿಕೊಳ್ಳಲು ರಥಬೀದಿಯಲ್ಲಿ ಇಕ್ಕೆಲಗಳಲ್ಲಿ ಹಾಗೂ ಬಹುಮಹಡಿ ಕಟ್ಟಡಗಳನ್ನು ಏರಿ ಜನರು ಕಾದು ನಿಂತಿದ್ದರು.

ವಿವಿಧ ಪೂಜಾ ಕೈಂಕರ್ಯ.
ರಥೋತ್ಸವಕ್ಕೆ ಮುನ್ನ ಅಮ್ಮನವರ ಸನ್ನಿದಿಯ ಬಳಿ ಯಾತ್ರಾದಾನ ಕಾರ್ಯಕ್ರಮ ನಡೆದ ನಂತರ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಉತ್ಸವ ಮೂರ್ತಿ ಚೆಲುವನಾರಾಯಣ ಸ್ವಾಮಿ ರಾಜಮುಡಿ ಧಾರಣೆಯೊಂದಿಗೆ ಹಾಗೂ ಶ್ರೀದೇವಿ, ಭೂದೇವಿ ಅಮ್ಮನವರಿಗೆ ಮತ್ತು ರಾಮಾನುಜಾಚಾರ್ಯರಿಗೆ ವಿಶೇಷ ಹೂಗಳಿಂದ ಅಲಂಕಾರ ಮಾಡಿದ್ದರು.

ದೇವಾಲಯ ಒಳಪ್ರಕಾರ ಹಾಗೂ ಹೊರಪ್ರಕಾರದಲ್ಲಿ ವಿಶೇಷ ಪೂಜಾ ಕೈಂಕರ್ಯದೊಂದಿಗೆ ಉತ್ಸವದಲ್ಲಿ ದೇವಾಲಯದ ಪ್ರಮುಖ ಬೀದಿಯಲ್ಲಿ ಮಂಗಳವಾದ್ಯದೊಂದಿಗೆ ಮೆರವಣಿಗೆ ಮಾಡಿ, ನಂತರ ರಥದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆಯೊಡನೆ ಬೆಳಗ್ಗೆ 10 ಗಂಟೆಯಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸಾವಿರಾರೂ ಭಕ್ತರ ಸಮೂಹದೊಂದಿಗೆ ರಥೋತ್ಸವ ಮಧ್ಯಾಹ್ನ 12:45  ಲ್ಲಿ ಮುಕ್ತಾಯಗೊಂಡು ಉತ್ಸವ ಮೂರ್ತಿ ದೇವಾಲಯ ಪ್ರವೇಶಿಸಿತು.

ಪಾರ್ಕಿಂಗ್ ಸಮಸ್ಯೆ: ರಥೋತ್ಸವದ ದಿನದಂದು ಅಗತ್ಯ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ನೇಮಿಸದ ಕಾರಣ ಮೇಲುಕೋಟೆ ಕಲ್ಯಾಣಿಯವರೆಗೂ ಕಾರು ಬೈಕು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಹಿನ್ನಲೆ ಕೊಂಚ ಭಕ್ತರಿಗೆ ಕಿರಿಕಿರಿ ಉಂಟಾಯಿತು. ಸಿಬ್ಬಂದಿ ಕೊರತೆಯಿಂದ ಭಕ್ತರನ್ನು ನಿಯಂತ್ರಿಸಲು ಕೊಂಚ‌ ಪೊಲೀಸರು ಹರಸಾಹಸ ಪಡುವಂತಾಯಿತು.

 

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ