ಈ ರಾಜಕಾರಣವೇ ಹೀಗೆ. ನಾನೇ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಆತ್ಮವಿಶ್ವಾಸದಿಂದ ಪ್ರಚಾರ ಮಾಡುತ್ತಿದ್ದರನ್ನು ಬದಿಗೆ ಸೇರಿಸಿ ಮತ್ತೊಬ್ಬರು ಅಭ್ಯರ್ಥಿಯಾಗುವ ಸಾಕಷ್ಟು ನಿದರ್ಶನಗಳು ರಾಜ್ಯದ ರಾಜಕೀಯ ಇತಿಹಾಸವನ್ನು ನೋಡಿದಾಗ ಗೊತ್ತಾಗುತ್ತದೆ.
ಇದುವರೆಗೂ ನಾಗಮಂಗಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾನೇ ಎಂದುಕೊಂಡು ಪ್ರಚಾರ ನಡೆಸುತ್ತಿದ್ದ ಮಲ್ಲಿಕಾರ್ಜುನ್ ಅಲಿಯಾಸ್ ಫೈಟರ್ ರವಿ ಬಿಜೆಪಿ ಪಕ್ಷದ ನಾಯಕನಾಗಿ ಗುರುತಿಸಿಕೊಂಡು ಕ್ಷೇತ್ರದಲಿ ಪ್ರಚಾರ ನಡೆಸುತ್ತಿದ್ದರು. ನನಗಲ್ಲದೆ ಇನ್ಯಾರಿಗೆ ಬಿಜೆಪಿ ಟಿಕೆಟ್ ಎಂದುಕೊಂಡಿದ್ದ ಫೈಟರ್ ರವಿ ಈಗ ಎಲ್.ಆರ್.ಶಿವರಾಮೇಗೌಡರಿಗಾಗಿ ಜಾಗ ತೆರವುಗೊಳಿಸಬೇಕಾದ ವಾತಾವರಣ ಸೃಷ್ಟಿಯಾಗಿದೆ.

ಬೆಂಗಳೂರಿನಲ್ಲಿಂದು ಬಿಜೆಪಿ ಕಚೇರಿಯಲ್ಲಿ ಮಾಜಿ ಸಂಸದ, ಜೆಡಿಎಸ್ ನಿಂದ ಉಚ್ಛಾಟನೆಯಾಗಿದ್ದ ಹಿರಿಯ ಮುಖಂಡ ಎಲ್.ಆರ್ ಶಿವರಾಮೇಗೌಡ ಬಿಜೆಪಿ ಪಕ್ಷ ಸೇರಿದ್ದಾರೆ. ತಮ್ಮ ಪುತ್ರ ಚೇತನ್ ಮತ್ತು ಅಭಿಮಾನಿಗಳೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವರಾದ ಡಾ.ಸುಧಾಕರ್, ಗೋಪಾಲಯ್ಯ ಮತ್ತು ಸಿ.ಟಿ ರವಿಯವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದು, ಅವರಿಗೆ ನಾಗಮಂಗಲ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆಯಿದೆ.
ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕ ಸುರೇಶ್ ಗೌಡರನ್ನು ಸೋಲಿಸಿಯೇ ಸಿದ್ಧ ಎಂದು ಶಪಥ ಮಾಡಿಕೊಂಡೇ ನಾಗಮಂಗಲಕ್ಕೆ ಬಂದ ಫೈಟರ್ ರವಿ ಒಂದು ವರ್ಷಗಳ ಹಿಂದೆಯೇ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ,ದೇವಸ್ಥಾನಗಳಿಗೆ ಧನಸಹಾಯ, ಆರೋಗ್ಯ ಶಿಬಿರ ಮೊದಲಾದ ಸಮಾರಂಭಗಳನ್ನು ಮಾಡುತ್ತಾ ಸಾಕಷ್ಟು ಸದ್ದು ಮಾಡಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದ ಫೈಟರ್ ರವಿ ಈಗ್ಗೆ ಆರು ತಿಂಗಳ ಹಿಂದಷ್ಟೇ ಬಿಜೆಪಿ ಸೇರಿದ್ದರು.ಬಿಜೆಪಿ ಪಕ್ಷದ ಅಭ್ಯರ್ಥಿ ಎಂದು ಬಿಂಬಿತವಾದ ನಂತರ ಫೈಟರ್ ರವಿ ಬಿಜೆಪಿ ಮಹಿಳಾ ಸಮಾವೇಶ ಸೇರಿದಂತೆ ಪಕ್ಷದ ಹಲವು ಕಾರ್ಯಕ್ರಮಗಳನ್ನು ಮಾಡಿ ಸೈ ಎನಿಸಿಕೊಂಡಿದ್ದರು.
ಕಳೆದ ಮಾರ್ಚ್ 11 ರಂದು ಮಂಡ್ಯಕ್ಕೆ ಬಂದಿದ್ದ ಪ್ರಧಾನವಾದ ಮಂತ್ರಿ ನರೇಂದ್ರ ಮೋದಿಯವರು ಪಿಇಎಸ್ ಕಾಲೇಜಿನ ಹೆಲಿಪ್ಯಾಡ್ ನಲ್ಲಿ ಫೈಟರ್ ರವಿಗೆ ಕೈ ಮುಗಿಯುತ್ತಿದ್ದ ಪೋಟೋ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿ, ರೌಡಿ ಶೀಟರ್ ಒಬ್ಬನಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕೈ ಮುಗಿದಿದ್ದಾರೆಂದು ವಿರೋಧ ಪಕ್ಷಗಳು ಟೀಕಿಸಿದ್ದವು.ಇದರಿಂದ ಬಿಜೆಪಿ ಪಕ್ಷಕ್ಕೆ ಸಾಕಷ್ಟು ಮುಜುಗರವಾಗಿತ್ತು.
ನಾನು ಬೆಂಗಳೂರಿನ ವೈಯಾಲಿಕಾವಲ್ ಪೋಲಿಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದೇನೆಂಬುದು ಸರಿಯಲ್ಲ.ಅದೊಂದು ಸುಳ್ಳು ಪ್ರಕರಣವಾಗಿದ್ದು,ಹೈಕೋರ್ಟಿನಲ್ಲಿ ಕ್ವಾಷ್ ಆಗಿದೆ ಎಂದಿದ್ದರು.ಆದರೂ ಮಾಧ್ಯಮಗಳು ಇದನ್ನೇ ದೊಡ್ಡದಾಗಿ ಬಿಂಬಿಸಿದ್ದವು.
ಇದೆಲ್ಲ ಕಾರಣದಿಂದ ಮುಜುಗರಕ್ಕೆ ಒಳಗಾಗಿದ್ದ ಬಿಜೆಪಿ ಫೈಟರ್ ರವಿಯವರನ್ನು ಬದಿಗೆ ಸರಿಸಿ ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌರಿಗೆ ಮಣೆ ಹಾಕಿ ಬಿಜೆಪಿ ಸೇರಿಸಿಕೊಂಡಿದೆ.ಅವರೇ ನಾಗಮಂಗಲದಿಂದ ಬಿಜೆಪಿ ಅಭ್ಯರ್ಥಿ ಎಂಬ ಖಚಿತ ಮಾಹಿತಿ ಕೂಡ ಇದೆ.
ಹಾಗಾದರೆ ಇದುವರೆಗೂ ನಾಗಮಂಗಲದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಲು ಸಿದ್ಧತೆ ನಡೆಸಿದ್ದ ಫೈಟರ್ ರವಿ ಕತೆಯೇನು?
ಶಾಸಕ ಸುರೇಶ್ ಗೌಡರನ್ನು ಸೋಲಿಸಲು ರಾಜಕಾರಣ ಪ್ರವೇಶಿಸಿದೆ ಎನ್ನುವ ಫೈಟರ್ ರವಿ ಶಿವರಾಮೇಗೌಡರಿಗೆ ಸಾಥ್ ನೀಡಿ ಅವರ ಪರ ಪ್ರಚಾರ ಮಾಡ್ತಾರಾ, ಇಲ್ಲಾ ಪಕ್ಷೇತರನಾಗಿಯೇ ನಿಂತು ಸ್ಪರ್ಧೆ ಮಾಡ್ತಾರ ಎಂಬುದು ಯಕ್ಷ ಪ್ರಶ್ನೆಯಾಗಿದ್ದು,ಕುತೂಹಲ ಮೂಡಿಸಿದೆ.




