Thursday, November 19, 2026

ಪ್ರಾಯೋಗಿಕ ಆವೃತ್ತಿ

ಅಭ್ಯರ್ಥಿ ಬದಲಾಯಿಸಲು ವರಿಷ್ಠರಿಗೆ ಮನವಿ – ಆತ್ಮಾನಂದ

ಮಂಡ್ಯ ಜಿಲ್ಲಾ ಕೇಂದ್ರವಾಗಿರುವ ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಘೋಷಣೆಯನ್ನು ಬದಲಾಯಿಸುವಂತೆ ಕೆಪಿಸಿಸಿ ಅಧ್ಯಕ್ಷರಲ್ಲಿ ಮನವಿ ಮಾಡಲಾಗಿದ್ದು, ಈ ಬಗ್ಗೆ ಪರಿಶೀಲನೆಯ ಭರವಸೆ ವ್ಯಕ್ತವಾಗಿದೆ ಎಂದು ಮಾಜಿ ಸಚಿವ ಎಂ.ಎಸ್.ಆತ್ಮಾನಂದ ತಿಳಿಸಿದರು.

ಮಂಡ್ಯ ನಗರದ ಹೊರವಲಯದಲ್ಲಿರುವ ಅಮರಾವತಿ ಹೋಟೇಲ್ ನಲ್ಲಿ ಬಿ.ಫಾರಂ ಆಕಾಂಕ್ಷಿತರೊಟ್ಟಿಗೆ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಕ್ಷೇತ್ರದ ಆಕಾಂಕ್ಷಿತರಾಗಿ ಅರ್ಜಿ ಸಲ್ಲಿಸಿದ್ದ 16 ಮಂದಿ ಪೈಕಿ, 10 ಮಂದಿಯ ನಿಯೋಗ ಪಕ್ಷ ಸೇವೆ ಹಾಗೂ ಹಿರಿತನವನ್ನು ಗಮನಿಸಿ ನಮ್ಮಲ್ಲಿ ಯಾರಿಗಾದರೂ ಅವಕಾಶ ಕಲ್ಪಿಸಬೇಕೆಂದು ಮತ್ತೊಮ್ಮೆ ಮನವಿ ಮಾಡಿದ್ದೇವೆ, ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಾದು ನೋಡುವ ತಂತ್ರಗಾರಿಕೆಗೆ ಮುಂದಾಗುತ್ತೇವೆಂದರು.

ಮೈಷುಗರ್ ಮಾಜಿ ಅಧ್ಯಕ್ಷ ಹಾಲಹಳ್ಳಿ ರಾಮಲಿಂಗಯ್ಯ ಮಾತನಾಡಿ, 10 ಮಂದಿ ಪೈಕಿ ಅವಕಾಶ ಕಲ್ಪಿಸುವಂತೆ ಕೆಪಿಸಿಸಿ ಹಾಗೂ ಎಐಸಿಸಿ ಮುಖಂಡರನ್ನು ಭೇಟಿ ಮಾಡಲಾಗಿತ್ತು. ನಮ್ಮ ಮನವಿಗೆ ಮಾನ್ಯತೆ ನೀಡದೇ ಪರ್ಯಾಯ ಅಭ್ಯರ್ಥಿ ಘೋಷಣೆಯಾಗಿದೆ, ಅಂತಿಮವಾಗಿ ಮತ್ತೊಮ್ಮೆ ಅಭ್ಯರ್ಥಿ ಬದಲಾವಣೆಗೆ ನಮ್ಮ ಒತ್ತಾಯವಿದ್ದು, ಘೋಷಿತ ಅಭ್ಯರ್ಥಿಯ ನ್ಯೂನ್ಯತೆಗಳನ್ನು ವರಿಷ್ಠರ ಗಮನಕ್ಕೆ ತರಲಾಗಿದೆ ಎಂದರು.

ಅಮರಾವತಿ ಚಂದ್ರಶೇಖರ್ ಮಾತನಾಡಿ, ಏ.13 ಅಥವಾ 14ರಂದು ನಗರದ ಕಾಳಿಕಾಂಭ ದೇವಾಲಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರ ಸಭೆ ಕರೆಯಲಾಗಿದೆ. ಮುಂಬರುವ ತಾ.ಪಂ., ಜಿ.ಪಂ. ಚುನಾವಣೆ ವಿಚಾರ ಹಾಗೂ ಅಭ್ಯರ್ಥಿ ಬದಲಾವಣೆಯ ವಸ್ತುಸ್ಥಿತಿಯನ್ನು ಮನವರಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಮಾಜಿ ಶಾಸಕ ಹೆಚ್.ಬಿ.ರಾಮು ಮಾತನಾಡಿ, ಪಕ್ಷದಲ್ಲಿ ಒಡಕು ಮೂಡಿಸುವ ಪ್ರಯತ್ನ ನಮ್ಮಿಂದಾಗುವುದಿಲ್ಲ, ಪಕ್ಷ ನಿಷ್ಠೆ ಹಾಗೂ ಸೇವಾ ಹಿರಿತನವನ್ನು ಗಮನಿಸಿ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡುವಂತೆ ವರಿಷ್ಠರಲ್ಲಿ ಮನವಿ ಮಾಡಲಾಗಿದೆ. ನಮ್ಮ ಬೇಡಿಕೆಗೆ ಸ್ಪಂದನೆ ಸಿಗುವ ವಿಶ್ವಾಸವಿದೆ ಎಂದರು.

ಕಾಂಗ್ರೆಸ್ ಗೆ ಜಿಲ್ಲಾ ನಾಯಕರಿಲ್ಲ

ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಪಕ್ಷಕ್ಕೆ ಚಲುವರಾಯಸ್ವಾಮಿ ಸೇರಿದಂತೆ ಯಾವುದೇ ಜಿಲ್ಲಾ ನಾಯಕರು ನಮಗಿಲ್ಲ ಎಂದು ಹಾಲಹಳ್ಳಿ ರಾಮಲಿಂಗಯ್ಯ ತಿಳಿಸಿದರು. ಇದಕ್ಕೆ ದನಿಗೂಡಿಸಿದ ಎಂ.ಡಿ.ಜಯರಾಂ ಹಾಗೂ ಎಂ.ಎಸ್.ಸತ್ಯಾನಂದ ಅವರು, ಚಲುವರಾಯಸ್ವಾಮಿ ನಾಯಕತ್ವವನ್ನು ನಾವ್ಯಾರು ಒಪ್ಪಿಲ್ಲ ಎಂದು ರಾಮಲಿಂಗಯ್ಯ ಅವರ ಮಾತಿಗೆ ದನಿಗೂಡಿಸಿದರು.

ಸಭೆಯಲ್ಲಿ ಬಿ.ಪಾರಂ ಆಕಾಂಕ್ಷಿತ ಹೆಚ್.ಸಿ.ಶಿವಲಿಂಗೇಗೌಡ, ಮುಖಂಡರಾದ ಸಿದ್ದರಾಮೇಗೌಡ, ಜಬೀವುಲ್ಲಾ, ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ