ವರದಿ : ಪ್ರಭು ವಿ.ಎಸ್.
ರಾಜ್ಯ ಹಾಗೂ ಜಿಲ್ಲಾ ನಾಯಕರು ಮದ್ದೂರು ಕ್ಷೇತ್ರದ ಟಿಕೆಟ್ ತಮಗೆ ನೀಡುವುದಾಗಿ ಸಂಪೂರ್ಣವಾಗಿ ಭರವಸೆ ನೀಡಿದ್ದು ಇದರ ಆಧಾರದ ಮೇಲೆ ಹೈಕಮಾಂಡ್ ತಮ್ಮ ಹೆಸರನ್ನು ಘೋಷಣೆ ಮಾಡುವ ವಿಶ್ವಾಸವಿದೆ ಎಂದು ಸಂಭ್ಯಾವ್ಯ ಕಾಂಗ್ರೆಸ್ ಅಭ್ಯರ್ಥಿ ಎಸ್.ಗುರುಚರಣ್ ತಿಳಿಸಿದರು.
ಮದ್ದೂರು ಪಟ್ಟಣದ ಶಿವಪುರದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ವೇಳೆ ಮಾತನಾಡಿದ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಜಿಲ್ಲಾ ನಾಯಕ ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ರವರು ಪೂರ್ಣ ಭರವಸೆ ನೀಡಿದ್ದು ತಾವೇ ಮದ್ದೂರು ಕ್ಷೇತ್ರದ ಅಭ್ಯರ್ಥಿಯಾಗುವುದು ಶತಸಿದ್ಧವೆಂದರು.

ಸಿದ್ಧರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಮದ್ದೂರಿಗೆ ಆಗಮಿಸಿದ ವೇಳೆ ಎರಡು ಭಾರಿ ತಮ್ಮನ್ನೇ ಪಕ್ಷದ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು ತಮಗೆ ನಂಬಿಕೆ, ವಿಶ್ವಾಸ, ಗೌರವವಿದ್ದು ಖಂಡಿತವಾಗಿಯೂ ತಮಗೆ ಟಿಕೆಟ್ ನೀಡಲಿದ್ದು ಕಾರ್ಯಕರ್ತರು ತಮ್ಮ ಗೆಲುವಿಗೆ ಶಕ್ತಿ ಮೀರಿ ಶ್ರಮಿಸಲಿದ್ದಾರೆಂದರು.
ತಮ್ಮ ತಾತ ಎಸ್.ಸಿ. ಮಲ್ಲಯ್ಯ, ದೊಡ್ಡಪ್ಪ ಎಸ್.ಎಂ. ಕೃಷ್ಣ, ತಂದೆ ಎಸ್.ಎಂ. ಶಂಕರ್ ಅವರು ರಾಜಕೀಯ ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡಿದ್ದು ಅವರ ಹಾದಿಯಲ್ಲೇ ರಾಜಕೀಯ ಜೀವನದಲ್ಲಿದ್ದು ನೊಂದ ಎಲ್ಲಾ ವರ್ಗದ ಜನರಿಗೂ ತಮ್ಮ ಕೈಲಾದ ಸಹಾಯ ಕೈಗೊಂಡಿದ್ದು ಕಾರ್ಯಕರ್ತರು ಯಾವುದೇ ಗೊಂದಲ ಮತ್ತು ಧೃತಿಗೆಡದೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕೆಂದು ಮನವಿ ಮಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂಪೂರ್ಣ ಭರವಸೆ ನೀಡಿದ್ದು ಪ್ರತಿ ಗ್ರಾಮಗಳಿಗೂ ತೆರಳಿ ಪ್ರಚಾರ ಕಾರ್ಯ ಕೈಗೊಳ್ಳುವಂತೆ ಸೂಚನೆ ನೀಡುವ ಜತೆಗೆ ಕ್ಷೇತ್ರದಲ್ಲಿ ಪಕ್ಷವು ಬಲಿಷ್ಟವಾಗಿದ್ದು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಧು.ಜಿ.ಮಾದೇಗೌಡ ಹಾಗೂ ದಿನೇಶ್ಗೂಳೀಗೌಡ ಅವರು ಗೆಲುವು ಸಾಧಿಸಿರುವುದರಿಂದ ತಾಲೂಕಿನಾದ್ಯಂತ ಪಕ್ಷಕ್ಕೆ ಪೂರಕವಾದ ವಾತಾವರಣ ನಿರ್ಮಾಣಗೊಂಡಿರುವುದಾಗಿ ಹೇಳಿದರು.
ಕಳೆದ 18 ವರ್ಷಗಳಿಂದಲೂ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿಲ್ಲದೆ ಕಾರ್ಯಕರ್ತರು ಹಾಗೂ ಮುಖಂಡರು ಮನನೊಂದಿದ್ದು ಪ್ರತಿಫಲ ಸಿಗುವ ವಿಶ್ವಾಸ ತಮಗಿದ್ದು ಮುಂದಿನ ದಿನಗಳಲ್ಲಿ ಪಕ್ಷದ ಹೈಕಮಾಂಡ್ ತಮ್ಮ ಹೆಸರನ್ನು ಘೋಷಣೆ ಮಾಡುವ ಜತೆಗೆ ನಿಮ್ಮಗಳ ಸೇವೆ ಮಾಡಲು ಅವಕಾಶ ಕಲ್ಪಿಸುತ್ತದೆಂದರು.
ಪುರಸಭೆ ಸದಸ್ಯೆ ಪ್ರಿಯಾಂಕ ಅಪ್ಪುಗೌಡ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದಲೂ ಕ್ಷೇತ್ರದಾದ್ಯಂತ ಪ್ರವಾಸ ಕೈಗೊಂಡು ಪಕ್ಷ ಸಂಘಟನೆ ಜತೆಗೆ ಸ್ಥಳೀಯ ಸಂಸ್ಥೆ ಚುನಾವನೆಯಲ್ಲೂ ಸಕ್ರಿಯವಾಗಿ ತೊಡಗಿಕೊಂಡಿರುವ ಎಸ್.ಗುರುಚರಣ್ ಅವರಿಗೆ ಪಕ್ಷದಿಂದ ಟಿಕೆಟ್ ನೀಡುವಂತೆ ಒತ್ತಾಯಿಸಿದರು.
ಕೆಲ ನಾಯಕರೇ ಗೊಂದಲ ಸೃಷ್ಠಿ ಮಾಡುತ್ತಿರುವುದರಿಂದ ಕಾರ್ಯಕರ್ತರು ಇತರೆ ಪಕ್ಷಗಳತ್ತ ಮುಖ ಮಾಡುತ್ತಿದ್ದು ಕ್ಷೇತ್ರಕ್ಕೆ ನಾಯಕರೇ ಆಗಮಿಸಿ ಕಾರ್ಯಕರ್ತರಲ್ಲಿ ಉಂಟಾಗಿರುವ ಗೊಂದಲವನ್ನು ಸರಿಪಡಿಸಿ ಕೂಡಲೆ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡುವಂತೆ ಮನವಿ ಮಾಡಿದರು.
ಜಿಲ್ಲೆಯಲ್ಲಿ ಈಗಾಗಲೇ 6 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ್ದು ಮದ್ದೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಗೊಂದಲ ಸೃಷ್ಠಿಯಾಗಿದ್ದು ಈಗಾಗಲೇ ಟಿಕೆಟ್ ಗೊಂದಲ ಬಗೆಹರಿಯದ ಹಿನ್ನೆಲೆಯಲ್ಲಿ ಬೆಂಬಲಿಗರ ಸಭೆ ಕರೆದು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆಂದರು.
ಕಾಂಗ್ರೆಸ್ ಪಕ್ಷದ ಎರಡನೇ ಪಟ್ಟಿಯಲ್ಲೂ ಮದ್ದೂರು ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಣೆ ಮಾಡದ ಹೈಕಮಾಂಡ್ ವಿಳಂಬ ನೀತಿಯಿಂದಾಗಿ ಗೊಂದಲದಲ್ಲಿರುವ ಆಕಾಂಕ್ಷಿ ಅಭ್ಯರ್ಥಿಗಳು ಟಿಕೆಟ್ಗಾಗಿ ಭಾರಿ ಪೈಪೋಟಿ ಮತ್ತು ಒತ್ತಡ ತಂತ್ರವನ್ನು ಅನುಸರಿಸುತ್ತಿದ್ದಾರೆ.
ಕೆಪಿಸಿಸಿ ಸದಸ್ಯ ಕದಲೂರು ರಾಮಕೃಷ್ಣ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಆರ್. ಮೋಹನ್ಕುಮಾರ್, ಜಿ.ಪಂ. ಮಾಜಿ ಸದಸ್ಯ ರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಸಂದರ್ಶ, ಎಸ್ಸಿ,ಎಸ್ಟಿ ವಿಭಾಗದ ಎಚ್. ಹೊಂಬಾಳಯ್ಯ, ಕಬ್ಬಾಳಯ್ಯ, ಇಮ್ತಿಯಾಜುಲ್ಲಾಖಾನ್ ಸಭೆ ವೇಳೆ ಮಾತನಾಡಿದರು.
ಮದ್ದೂರು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ನಾಗೇಗೌಡ, ಭಾರತಿನಗರ ಅಧ್ಯಕ್ಷ ಶಿವಲಿಂಗಯ್ಯ, ಚಂದೂಪುರ ಪಾಪಣ್ಣ, ಮುಖಂಡರಾದ ರಾಮಕೃಷ್ಣ, ಮಮತ, ಕಬ್ಬಾಳಯ್ಯ, ಕೆ.ಆರ್.ಮಹೇಶ್, ಪುಟ್ಟಸ್ವಾಮಿ, ಅಜ್ಜಹಳ್ಳಿ ರಾಮಕೃಷ್ಣ, ಮನ್ಸೂರ್ಖಾನ್, ಶಂಕರಲಿಂಗೇಗೌಡ, ಕಿರಣ್ ಇತರರಿದ್ದರು.




