Thursday, November 19, 2026

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ | ಬಿ‌.ಎಲ್.ದೇವರಾಜು ಪರ ‘ಕೈ’ ನಾಯಕರ ಒಗ್ಗಟ್ಟಿನ ಮಂತ್ರ

ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ಎಲ್.ದೇವರಾಜು ಆಯ್ಕೆಯಾದ ನಂತರ ಉಳಿದ ಟಿಕೆಟ್ ಆಕಾಂಕ್ಷಿಗಳ್ಯಾರೂ ಬಂಡಾಯದ ಬಾವುಟ ಬೀಸಿಲ್ಲ. ಏಕೆಂದರೆ ಬಿ.ಎಲ್. ದೇವರಾಜು ಒಬ್ಬ ಪ್ರಾಮಾಣಿಕ, ಸರಳ ಸಜ್ಜನಿಕೆಯ ವ್ಯಕ್ತಿ ಎಂಬುದೇ ಏಕೈಕ ಕಾರಣ.

ಕಾಂಗ್ರೆಸ್ ಪಕ್ಷದ ಟಿಕೆಟ್ ಬಯಸಿದ್ದ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್,ಬಿ.ಪ್ರಕಾಶ್, ವಿಜಯ್ ರಾಮೇಗೌಡ, ಎಂ.ಡಿ.ಕೃಷ್ಣಮೂರ್ತಿ, ನಾಗೇಂದ್ರ ಕುಮಾರ್, ಕಿಕ್ಕೇರಿ ಸುರೇಶ್ ಅಕಾಂಕ್ಷಿಗಳಾಗಿದ್ದರು. ಆದರೆ ಕೊನೆಗಳಿಗೆಯಲ್ಲಿ ಜೆಡಿಎಸ್ ಪಕ್ಷದ ಟಿಕೆಟ್ ಸಿಗದ ಕಾರಣ ಕಾಂಗ್ರೆಸ್ ಪಕ್ಷ ಸೇರಿದ್ದರು. ಕಾಂಗ್ರೆಸ್ ವರಿಷ್ಠರು ಕೊನೆ ಕ್ಷಣದಲ್ಲಿ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಒಂದು ಸರ್ವೆ ಮಾಡಿಸಿದ್ದರು. ಅದರಲ್ಲಿ ಬಿ.ಎಲ್.ದೇವರಾಜು ಅವರಿಗೆ ಜೆಡಿಎಸ್ ವರಿಷ್ಠರು ಅನ್ಯಾಯ ಮಾಡಿರುವ ಸಂಗತಿ ಕ್ಷೇತ್ರದ ಜನರ ಮನಸ್ಸಿಲ್ಲಿದೆ ಎಂಬ ಅಂಶ ಪ್ರಧಾನವಾಗಿ ಸರ್ವೆ ವರದಿಯಲ್ಲಿತ್ತು. ಸರಳ,ಸಜ್ಜನ ವ್ಯಕ್ತಿ ಬಿ.ಎಲ್.ದೇವರಾಜು ಅವರಿಗೆ ಟಿಕೆಟ್ ಕೊಟ್ಟರೆ ಕ್ಷೇತ್ರ ಸೇಫ್ ಎಂಬ ಅಂಶ ಕಾಂಗ್ರೆಸ್ ವರಿಷ್ಠರಿಗೆ ಸಿಕ್ಕ ನಂತರವೇ ಅವರು ಬಿ.ಎಲ್.ದೇವರಾಜು ಅವರಿಗೆ ಟಿಕೆಟ್ ಘೋಷಣೆ ಮಾಡಿದರು.

ಇದಾದ ನಂತರ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ವಿಜಯ್ ರಾಮೇಗೌಡರಂತಹ ಘಟಾನುಘಟಿ ನಾಯಕರು ಕೂಡ ಸರಳತೆಯ ಬಿ‌.ಎಲ್.ದೇವರಾಜು ವಿರುದ್ಧ ಹೋಗುವ ಮಾತನಾಡದೆ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.ಬಿಜೆಪಿ ಅಭ್ಯರ್ಥಿ ಸಚಿವ ಕೆ.ಸಿ.ನಾರಾಯಣಗೌಡರನ್ನು ಹಣಿಯಲು ಬಿ.ಎಲ್.ದೇವರಾಜು ಸಮರ್ಥ ಎಂದು ತಿಳಿದು ಅವರ ಪರ ಒಗ್ಗಟ್ಟಾಗಿ ದುಡಿಯಲು ಕಾಂಗ್ರೆಸ್ ಆಕಾಂಕ್ಷಿಗಳೆಲ್ಲರೂ ಒಂದಾಗಿದ್ದಾರೆ.

ಇಂದು ಕೆ.ಆರ್. ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಬಯಲುಸೀಮೆ ಕುಕ್ಕೆ ಸುಬ್ರಹ್ಮಣ್ಯ ಎಂದೇ ಹೆಸರುವಾಸಿಯಾಗಿರುವ ಶ್ರೀ ಕ್ಷೇತ್ರ ಸಾಸಲು ಶಂಭುಲಿಂಗೇಶ್ವರ ಮತ್ತು ಸೋಮೇಶ್ವರ ದೇವಾಲಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್. ದೇವರಾಜು ಜೊತೆಗೂಡಿ ಕಾಂಗ್ರೆಸ್ ನಾಯಕರೆಲ್ಲಾ ಒಂದುಗೂಡಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.ಬಳಿಕ ಕಿಕ್ಕೇರಿ ಪಟ್ಟಣದಲ್ಲಿ ನೂತನ ಕಾಂಗ್ರೆಸ್ ಕಚೇರಿ ಉದ್ಘಾಟಿಸಿದರು.

ಒಗ್ಗಟ್ಟಿನ ಮಂತ್ರ
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಕಾಂಗ್ರೆಸ್ ಪಕ್ಷಕ್ಕೆ ಬಿ.ಎಲ್.ದೇವರಾಜು ಆಶ್ಚರ್ಯಕರವಾದ ಅಭ್ಯರ್ಥ. ಜೆಡಿಎಸ್ ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿದರೂ ಕೂಡ ಇವರನ್ನು ಕಡೆಗಣಿಸಿದರು. ನಮ್ಮ ಪಕ್ಷದಲ್ಲಿ ಸಮರ್ಥ ಅಭ್ಯರ್ಥಿಗಳು ಇದ್ದರೂ ಕೂಡ ಪ್ರಾಮಾಣಿಕರಿಗೆ ಒಂದು ಬಾರಿ ಅವಕಾಶ ನೀಡಲೇಬೇಕೆಂಬ ಉದ್ದೇಶದಿಂದ ಬಿ.ಎಲ್.ದೇವರಾಜು ಅವರನ್ನ ನಮ್ಮ ಪಕ್ಷದ ವರಿಷ್ಠರು ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ. ಅವರ ಗೆಲುವಿಗಾಗಿ ನಾವೆಲ್ಲಾ ಒಟ್ಟುಗೂಡಿ ದುಡಿಯುವುದಾಗಿ ತಿಳಿಸಿದರು.

ಸಚಿವರಾಗಿದ್ದ ಕೆ.ಸಿ.ನಾರಾಯಣಗೌಡ ಕಾಂಗ್ರೆಸ್ ಪಕ್ಷಕ್ಕೆ ನುಗ್ಗಲು ಎಲ್ಲಾ ತಯಾರಿ ನಡೆಸಿದ್ದ. ಆದರೆ ನಮ್ಮೆಲ್ಲರ ವಿರೋಧದಿಂದ ಆತ ಕಾಂಗ್ರೆಸ್ ಪಕ್ಷಕ್ಕೆ ಬರಲು ಸಾಧ್ಯವಾಗಲಿಲ್ಲ. ಮಂತ್ರಿಯಾಗಿದ್ದರೂ
ಸತತ ಹತ್ತು ವರ್ಷಗಳಿಂದ ನಮ್ಮ ತಾಲೂಕಿನಲ್ಲಿ ಜನಪರ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ, ಗ್ರಾಮ ಪಂಚಾಯತಿಯಲ್ಲಿ ಮಾಡಿರುವ ಕಾಮಗಾರಿಗಳ ಪೋಟೋಗಳನ್ನೇ ತನ್ನ ಸಾಧನೆಯ ಪುಸ್ತಕದಲ್ಲಿ ಹಾಕಿಕೊಂಡು ಇದು ನನ್ನ ಅಭಿವೃದ್ಧಿ ಎಂದು ಹೇಳಿಕೊಳ್ಳುತ್ತಿರುವ ರಾಜಕಾರಣಿಯನ್ನ ತಾಲೂಕಿನಿಂದ ಮೊದಲು ಓಡಿಸುವ ಕೆಲಸ ಆಗಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ತಾಲೂಕಿನಲ್ಲಾಗಿರುವ ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಗ್ರಾಮೀಣ ಪ್ರದೇಶದ ಜನರಿಗೆ ಮನವರಿಕೆ ಮಾಡಲು ಬೂತ್ ಮಟ್ಟದ ಕಾರ್ಯಕರ್ತರು ಶ್ರಮಿಸುತ್ತಾ, ಯಾವುದೇ ಗೊಂದಲಕ್ಕೆ ದಾರಿ ಮಾಡಿಕೊಡದೆ ಸರಳತೆಯನ್ನೇ ಮೈಗೂಡಿಸಿಕೊಂಡಿರುವ ನಮ್ಮ ದೇವರಾಜು ಅವರನ್ನು ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಲು ಪ್ರಾಮಾಣಿಕವಾಗಿ ಶ್ರಮಿಸೋಣ ಎಂದು ತಿಳಿಸಿದರು.

ಆಕಾಂಕ್ಷಿಗಳ ಪೈಕಿ ವಿಜಯ್ ರಾಮೇಗೌಡ ಅವರನ್ನು ಬಿಟ್ಟರೆ ಉಳಿದ ಆಕಾಂಕ್ಷಿಗಳೆಲ್ಲ ಇಂದು  ಬಿ.ಎಲ್. ದೇವರಾಜು ಸಮ್ಮುಖದಲ್ಲಿ ಚುನಾವಣಾ ಒಗ್ಗಟ್ಟಿನ ಮಂತ್ರ ಪಠಿಸಿದ್ದು,ಮುಂದಿನ ದಿನಗಳಲ್ಲಿ ಎಲ್ಲರೂ ಒಂದುಗೂಡಿ ಒಗ್ಗಟ್ಟಾಗಿ ಚುನಾವಣಾ ಪ್ರಚಾರಕ್ಕೆ ಧಾವಿಸುವುದಾಗಿ ಹೇಳಿದ್ದಾರೆ.

ಕಡೇ ಚುನಾವಣೆ
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್ ದೇವರಾಜು ಮಾತನಾಡಿ, ನನಗೆ ದ್ವೇಷ ರಾಜಕಾರಣ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ನನ್ನನ್ನು ಗೌರವದಿಂದ ಸ್ವಾಗತಿಸಿದೆ. ನನಗಿದು ಕಡೇ ಚುನಾವಣೆ. ಕ್ಷೇತ್ರದ ಜನತೆ ಅಭಿವೃದ್ಧಿಗಾಗಿ ನನಗೆ ಕಡೆಯ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಗೃಹಜ್ಯೋತಿ ಕಾರ್ಯಕ್ರಮದ ಅಡಿಯಲ್ಲಿ ಪ್ರತೀ ಮನೆಗೆ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ಮನೆಯ ಯಜಮಾನಿ ಮಹಿಳೆಯ ಬ್ಯಾಂಕ್ ಖಾತೆಗೆ ಮಾಸಿಕ 2 ಸಾವಿರ ರೂ, ಬಿಪಿಎಲ್ ಕುಟುಂಬದ ಪ್ರತಿ ವ್ಯಕ್ತಿಗೂ ತಲಾ 10 ಕೆ.ಜಿ. ಉಚಿತ ಅಕ್ಕಿಯನ್ನು ನೀಡಲಿದೆ. ಕಾಂಗ್ರೆಸ್ ಪಕ್ಷ ಕ್ಷೇತ್ರದ ಜನರ ಕಲ್ಯಾಣಕ್ಕಾಗಿ ಶ್ರಮಿಸಲಿದೆ. ದಯಮಾಡಿ ನನ್ನ ಕೈ ಹಿಡಿಯಿರಿ ಎಂದು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್, ಜಿ.ಪಂ ಮಾಜಿ ಸದಸ್ಯ ದೇವರಾಜು, ಕಾಂಗ್ರೆಸ್ ಮುಖಂಡ ಬಸ್ ಕೃಷ್ಣೇಗೌಡ,ಜಿಲ್ಲಾ ಕಾಂಗ್ರೆಸ್ ವಕ್ತಾರ ಮಾದಾಪುರ ರಾಮಕೃಷ್ಣೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಧರ್, ಹಿರಿಯ ಮುಖಂಡರಾದ ರಮೇಶ್, ಎಲ್‌. ಪಿ. ನಂಜಪ್ಪ, ಬೂಕನಕೆರೆ ವೆಂಕಟೇಶ್, ನಿವೃತ್ತ ಪ್ರಾಂಶುಪಾಲ ಜಾಣೇಗೌಡ, ಸಾಸಲು ಈರಪ್ಪ, ಭೋಜೇಗೌಡ, ಪುರಸಭಾ ಸದಸ್ಯ ಡಿ‌ ಪ್ರೇಮ್ ಕುಮಾರ್, ರವೀಂದ್ರ ಬಾಬು, ರಮೇಶ್, ಲಕ್ಷ್ಮಿಪುರ ಗ್ರಾ. ಪಂ ಅಧ್ಯಕ್ಷ ರಾಘು, ಮಾಜಿ ಅಧ್ಯಕ್ಷ ಚಂದ್ರೇಗೌಡ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಕ್ಕಿಹೆಬ್ಬಾಳು ದಿವಾಕರ್, ವಿಠಲಾಪುರ ಸುಬ್ಬೇಗೌಡ, ಶ್ಯಾಮಣ್ಣ, ಅಣ್ಣಸ್ವಾಮಿ, ರಮೇಶ್, ದೇವರಾಜು, ರಾಜಯ್ಯ, ರಾಮಚಂದ್ರು, ನಾಗರಾಜು, ಶ್ರೀನಿವಾಸ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ