ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಇರುವ ಮೂವರು ಪ್ರಮುಖ ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಅತ್ಯಂತ ಪ್ರಾಮಾಣಿಕ ಸರಳ ಸಜ್ಜನ, ಪರಿಶುದ್ದ ವ್ಯಕ್ತಿಯಾಗಿದ್ದಾರೆ. ಹಾಗಾಗಿ ಕ್ಷೇತ್ರದ ಮತದಾರರು ಬಿ.ಎಲ್.ದೇವರಾಜು ಅವರನ್ನು ಗೆಲ್ಲಿಸುವ ಮೂಲಕ ತಮ್ಮ ಪ್ರಬುದ್ದತೆಯನ್ನು ಮೆರೆಯಬೇಕು ಎಂದು ಕೆ.ಬಿ.ಚಂದ್ರಶೇಖರ್ ಮನವಿ ಮಾಡಿದರು.
ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ ಬಡಾವಣೆಯಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ದೇವರಾಜು ನಿವಾಸದ ಆವರಣದಲ್ಲಿ ನಡೆದ ಕಸಬಾ ಹೋಬಳಿ ಮಟ್ಟದ ಕಾಂಗ್ರೆಸ್ ಪಕ್ಷದ ಮುಖಂಡರ
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೆಡಿಎಸ್ ಅಭ್ಯರ್ಥಿ ಹೆಚ್.ಟಿ.ಮಂಜು ತಾಲ್ಲೂಕಿನ ಪರಿಸರದ ಒಡಲನ್ನು ಬಗೆದು ಕಲ್ಲು ಗಣಿಗಾರಿಕೆ ಮಾಡಿ ಸರ್ಕಾರಕ್ಕೆ ತೆರಿಗೆಯನ್ನು ವಂಚಿಸಿ ಆ ಹಣದಿಂದ ಚುನಾವಣೆ ಮಾಡುತ್ತಿದ್ದಾರೆ. ಅದೇ ರೀತಿ ಬಿಜೆಪಿ ಅಭ್ಯರ್ಥಿ ತಮ್ಮ ಸಚಿವ ಸ್ಥಾನದಲ್ಲಿ ಬಂದ ಅನುದಾನದಿಂದ ಲೂಟಿ ಮಾಡಿದ ಕಮೀಷನ್ ಹಣದಿಂದ ಚುನಾವಣೆಯನ್ನು ಎದುರಿಸುವ ತವಕದಲ್ಲಿದ್ದಾರೆ. ಜೆಡಿಎಸ್ ಅಭ್ಯರ್ಥಿ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ಹೋಲಿಕೆ ಮಾಡಿದರೆ ಕಾಂಗ್ರೆಸ್ ಅತ್ಯಂತ ಸೂಕ್ತ ಹಾಗೂ ಸಮರ್ಥ ಅಭ್ಯರ್ಥಿ ಎಂಬುದು ಈಗಾಗಲೇ ತಾಲ್ಲೂಕಿನ ಜನರಲ್ಲಿ ಮನೆ ಮನೆಯ ಮಾತಾಗುತ್ತಿರುವುದು ಕಂಡು ಬರುತ್ತಿದೆ ಎಂದರು.
ದೇವರಾಜು ಅವರನ್ನು ಸುಮಾರು 43ವರ್ಷಗಳ ಕಾಲ ದುಡಿಸಿಕೊಂಡು ಪಕ್ಷದ ಟಿಕೆಟ್ ನೀಡದೆ ವಂಚಿಸಿರುವ ಹಿನ್ನೆಲೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷವು ಅವರ ಸರಳ, ಸಜ್ಜನಿಕೆ ಹಾಗೂ ಪ್ರಾಮಾಣಿಕ ನಿಷ್ಠೆಯನ್ನು ಗುರುತಿಸಿ
ನೀಡಿದೆ. ನಮ್ಮ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ ಹಾಗಾಗಿ ಅತ್ಯುತ್ತಮ ಅಭ್ಯರ್ಥಿ ಬಿ.ಎಲ್.ದೇವರಾಜು ಅವರನ್ನು ಗೆಲ್ಲಿಸುವ ಮೂಲಕ ತಾಲ್ಲೂಕಿನ ಅಭಿವೃದ್ದಿಗೆ ಶ್ರಮಿಸಲು
ಅವಕಾಶ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್, ಬಿ.ನಾಗೇಂದ್ರಕುಮಾರ್, ಕೆಯುಐಟಿಎಫ್ಸಿ ನಿಗಮದ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ಕಾಂಗ್ರೆಸ್ ಮುಖಂಡರಾದ ಬಸ್ತಿ ರಂಗಪ್ಪ, ಬಸ್ ಕೃಷ್ಣೇಗೌಡ,
ಚಟ್ಟಂಗೆರೆ ನಾಗೇಶ್, ಡಾ.ರಾಮಕೃಷ್ಣೇಗೌಡ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಿ.ಕೆ.ರುಕ್ಮಾಂಗದ, ಕಾಂಗ್ರೆಸ್ ಉಸ್ತುವಾರಿ ಸಿ.ಎನ್.ರಮೇಶ್, ಕಾಂಗ್ರೆಸ್ ಎಸ್.ಸಿ. ಘಟಕದ ರಾಜಯ್ಯ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಎನ್.ದಿವಾಕರ್, ಎಂ.ಜೆ.ಶಶಿಧರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೆ.ಬಿ.ಪ್ರತಿಮಾ ಮತ್ತಿತರರು ಉಪಸ್ಥಿತರಿದ್ದರು.




