ಮಂಡ್ಯ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಗಣಿಗ ರವಿಕುಮಾರ್ ಅವರ ಕೈ ಬಲಪಡಿಸಲು ಒಗ್ಗೂಡಿ ಬೆಂಬಲ ನೀಡುವುದಾಗಿ ಪರಿಶಿಷ್ಟ ಜಾತಿ ವಿಭಾಗದ ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎಸ್.ಡಿ.ಸುರೇಶ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಬಿ. ರವಿಕುಮಾರ್ (ಗಣಿಗ) ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಘೋಷಣೆ ಮಾಡಿರುವುದು ಸಮಂಜಸವಾಗಿದೆ. ರವಿಕುಮಾರ್ ಜಾತಿ ಬೇಧ ಮಾಡದೇ ಎಸ್.ಸಿ., ಎಸ್.ಟಿ. ಜನಾಂಗದ ಹಬ್ಬ ಹರಿದಿನ ಸಾವು ನೋವುಗಳಲ್ಲಿ ಸಭೆ, ಮದುವೆ, ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಮೂಲಕ ಜನಾನುರಾಗಿಯಾಗಿದ್ದಾರೆ ಎಂದರು.
ಪಿ. ರವಿಕುಮಾರ್ ಅವರು ಕೋರೊನಾ ಮಹಾಮಾರಿಯಿಂದ ಕಂಗೆಟ್ಟ ಮಂಡ್ಯ ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಮತ್ತು ನಗರದ ಎಲ್ಲಾ ವಾರ್ಡ್ಗಳಿಗೂ ಫುಡ್ ಕಿಟ್ಗಳನ್ನು ವಿತರಿಸಿದ್ದಲ್ಲದೆ, ರೈತರು ಬೆಳೆದ ತರಕಾರಿಗಳನ್ನು ತಾವೇ ಹಣ ಕೊಟ್ಟು ಖರೀದಿಸಿ ಉಚಿತವಾಗಿ ಹಂಚಿದ್ದಾರೆ. ಕೋರೊನಾಕ್ಕೆ ತುತ್ತಾಗಿ ಔಷಧಿಗೂ ಹಣವಿಲ್ಲದೆ, ಮನೆಯಿಂದ ಹೊರಬರದೇ ಪರಿತಪಿಸುತ್ತಿದ್ದ ಜನರಿಗೆ ಉಚಿತವಾಗಿ ಔಷಧಿಗಳನ್ನು, ಹಣ್ಣು ಹಂಪಲುಗಳನ್ನು ವಿತರಿಸಿ ಮಾದರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರವಿಕುಮಾರ್ ಅವರನ್ನು ನಾವು ಬೆಂಬಲಿಸುವತ್ತೇವೆ ಎಂದರು.
ಗೋಷ್ಠಿಯಲ್ಲಿ ಮಂಡ್ಯ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಲಿಂಗದೇವರು, ಮುಖಂಡರಾದ ಆನಂದ್, ದೀಪಕ್, ಪ್ರಕಾಶ್, ನಿತ್ಯಾನಂದ ಮತ್ತಿತರರಿದ್ದರು.




