ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಬಯಸಿ ಇಂದು ಸಿ. ಎಸ್. ಪುಟ್ಟರಾಜು ಲೇಟ್ ಸತ್ಯಪ್ಪ ಎಂಬ ವ್ಯಕ್ತಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಮೇಲುಕೋಟೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಹಾಲಿ ಶಾಸಕ ಸಿ.ಎಸ್.ಪುಟ್ಟರಾಜು ಕಣಕ್ಕಿಳಿಯಲಿದ್ದು, ಇನ್ನಷ್ಟೇ ನಾಮಪತ್ರ ಸಲ್ಲಿಸಬೇಕಿದೆ. ಇಂತಹ ಸಂದರ್ಭದಲ್ಲಿ ಇಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಮತ್ತೊಬ್ಬ ವ್ಯಕ್ತಿ ಹೆಸರು ಕೂಡ ಸಿ.ಎಸ್. ಪುಟ್ಟರಾಜು ಆಗಿದ್ದು, ಅವರು ಇಂದು ಮಧ್ಯಾಹ್ನ 1ಗಂಟೆ ಸುಮಾರಿಗೆ ಪಾಂಡವಪುರದ ಮಿನಿ ವಿಧಾನಸೌಧದಲ್ಲಿರುವ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ಪಕ್ಷೇತರ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಎಂಬ ವ್ಯಕ್ತಿ ನಾಮಪತ್ರ ಸಲ್ಲಿಸಿರುವುದು ತೀವ್ರ ಕುತೂಹಲ ಮೂಡಿಸಿದೆ. 163ನೇ ಮತಗಟ್ಟೆಯಲ್ಲಿ ಈತನ ಹೆಸರಿದ್ದು, ಹಾಲಿ ಶಾಸಕ ಸಿ.ಎಸ್. ಪುಟ್ಟರಾಜು ಅವರಿಗೆ ಗೊಂದಲ ಸೃಷ್ಟಿ ಮಾಡುವ ಉದ್ದೇಶದಿಂದಲೇ ಈ ವ್ಯಕ್ತಿಯನ್ನು ಚುನಾವಣೆಗೆ ಸ್ಪರ್ಧಿಸುವಂತೆ ಮಾಡಲಾಗಿದೆ ಎಂಬುದು ಜೆಡಿಎಸ್ ಕಾರ್ಯಕರ್ತರ ಆರೋಪವಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲೂ ಸಹ ಸುಮಲತಾ ಅಂಬರೀಶ್ ಸ್ಪರ್ಧಿಸಿದ್ದಾಗ ಗೊಂದಲ ಮಾಡುವ ಉದ್ದೇಶದಿಂದ ಸುಮಲತಾ ಹೆಸರಿನ ಮೂವರು ಮಹಿಳೆಯರು ಸ್ಪರ್ಧಿಸಿದ್ದರು. ಆದರೆ ಪ್ರಜ್ಞಾವಂತ ಮತದಾರರು ಸುಮಲತಾ ಅಂಬರೀಶ್ ಅವರಿಗೆ ಮತ ನೀಡಿ ಆಯ್ಕೆ ಮಾಡಿದ್ದರು. ಸುಮಲತಾ ಎಂಬ ಮೂವರು ಮಹಿಳಾ ಅಭ್ಯರ್ಥಿಗಳು ಬೆರಳೆಣಿಕೆಯಷ್ಟು ಮತ ಪಡೆದು ಠೇವಣಿ ಕಳೆದುಕೊಂಡಿದ್ದರು.
ಇದೇ ರೀತಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲೂ ಹಾಲಿ ಶಾಸಕ ಸಿ.ಎಸ್. ಪುಟ್ಟರಾಜು ಅವರ ಹೆಸರನ್ನು ಗೊಂದಲ ಮೂಡಿಸಿ ಮತ ಕಬಳಿಸುವ ಹಿನ್ನಲೆಯಲ್ಲಿ ಸಿ.ಎಸ್. ಪುಟ್ಟರಾಜು ಎಂಬ ಮತ್ತೊಬ್ಬ ವ್ಯಕ್ತಿಯನ್ನು ಪಕ್ಷೇತರವಾಗಿ ನಿಲ್ಲಿಸಿದ್ದು, ಮೇಲುಕೋಟೆಯ ಪ್ರಜ್ಞಾವಂತ ಮತದಾರರು ಯಾರಿಗೆ ಎಷ್ಟು ಮತ ನೀಡುತ್ತಾರೆಂಬುದು ಫಲಿತಾಂಶದಿಂದಷ್ಟೇ ತಿಳಿಯಲಿದೆ.




