ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಷ್ಟ್ರ ಹಾಗೂ ರಾಜ್ಯದಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಧಕ್ಕೆ ಬಂದಿದ್ದ. ಪ್ರಜಾಪ್ರಭುತ್ವ- ಸಂವಿಧಾನ ಉಳಿವಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಅನಿವಾರ್ಯ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ನಾಗಮಂಗಲ ಪಟ್ಟಣದಲ್ಲಿ ಇಂದು ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾದ ಅನಿವಾರ್ಯತೆ ಬಂದೊದಗಿದೆ. ಬಿಜೆಪಿ ಸರ್ಕಾರ ಬಂದ ಮೇಲೆ ಭ್ರಷ್ಟಾಚಾರ ಹೆಚ್ಚಾಗಿದೆ.
ಬೊಮ್ಮಾಯಿ ಸರ್ಕಾರ ಕೇವಲ 40 ಪರ್ಸೆಂಟ್ ಸರ್ಕಾರವಲ್ಲ, 100 ಪರ್ಸೆಂಟ್ ಸರ್ಕಾರವಾಗಿದೆ.ದೇವರಾಜ ಅರಸು ಟ್ರಕ್ ಟರ್ಮಿನಲ್ ನಲ್ಲಿ ಕೆಲಸ ಮಾಡದೆ 47 ಕೋಟಿ ಬಿಲ್ ಪಡೆದಿದ್ದಾರೆ.ಈ ಬಗ್ಗೆ ಲೋಕಾಯುಕ್ತ ತನಿಖೆ ಆಗಬೇಕು.ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ರಾಜ್ಯದ ಆಡಳಿತಕ್ಕೆ ಕ್ಯಾನ್ಸರ್ ತಗುಲಿದ್ದು, 4 ನೇ ಹಂತ ತಲುಪಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.

ಎಲ್ಲರ ಅಭಿವೃದ್ಧಿ
ಕಾಂಗ್ರೆಸ್ ಪಕ್ಷ ಎಲ್ಲ ಜಾತಿ, ಧರ್ಮ, ವರ್ಗದ ಜನರ ಅಭಿವೃದ್ಧಿ ಮಾಡಲಿದೆ.ಎಲ್ಲ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು, ಪ್ರತಿ ಮನೆಗಳಿಗೆ ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್, ಮನೆ ಯಜಮಾನಿಗೆ 2೦೦೦ ರೂ., ಒಬ್ಬ ವ್ಯಕ್ತಿಗೆ 1೦ ಕೆ.ಜಿ. ಅಕ್ಕಿ, ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು 3 ಸಾವಿರ ರೂ., ಡಿಪ್ಲೊಮಾ ಪದವೀಧರರಿಗೆ ಪ್ರತಿ ತಿಂಗಳು 15೦೦ ರೂ, ಹೀಗೆ ಹಲವು ಗ್ಯಾರಂಟಿಗಳನ್ನು ಘೋಷಿಸಿದೆ ಎಂದರು.
ಎಚ್ಡಿಕೆ ಸಿಎಂ ಆದ್ರೂ ಅಭಿವೃದ್ಧಿ ಮಾಡಲಿಲ್ಲ
ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಲು ಪ್ರಮುಖವಾಗಿ ಕೈ ಹಿಡಿದದ್ದು ಮಂಡ್ಯ ಜಿಲ್ಲೆ. ಜಿಲ್ಲೆಯ 7 ಕ್ಷೇತ್ರಗಳಲ್ಲೂ ಜಾ.ದಳದ ಅಭ್ಯರ್ಥಿಗಳನ್ನು ಗೆಲ್ಲಿಸಲಾಯಿತು. ರಾಜ್ಯದಲ್ಲಿ ಮೂರು ಪಕ್ಷಗಳಿಗೂ ಬಹುಮತ ಬಾರದ ಹಿನ್ನೆಲೆಯಲ್ಲಿ ಬಿಜೆಪಿಯನ್ನು ದೂರವಿಡುವ ಸಲುವಾಗಿ ಎಚ್.ಡಿ.ಕುಮಾರಸ್ವಾಮಿ ಅವರ ಮನೆ ಬಾಗಿಲಿಗೇ ಹೋಗಿ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಆದರೆ, ಅವರು ಘೋಷಿಸಿದಂತೆ ಮಹಿಳೆಯರ ಸಾಲವನ್ನು ಮನ್ನಾ ಮಾಡಲಿಲ್ಲ.ಜಿಲ್ಲೆಯ ಅಭಿವೃದ್ಧಿ ಮಾಡಲಿಲ್ಲ ಎಂದು ಆರೋಪಿಸಿದರು.
ಮೈಶುಗರ್ ಕಾರ್ಖಾನೆ ಪ್ರಾರಂಭಿಸಲಿಲ್ಲ,ನೀರಾವರಿ ಯೋಜನೆ ಪೂರ್ಣಗೊಳಿಸಲಿಲ್ಲ,ಬಿಜೆಪಿ ರೈತ ವಿರೋಧಿ ಕಾಯ್ದೆ ಜಾರಿಗೆ ತಂದಾಗ ಬಿಜೆಪಿ ಜೊತೆ ಕೈ ಜೋಡಿಸಿದರು.ವಿಧಾನ ಪರಿಷತ್ ಸಭಾಧ್ಯಕ್ಷ ಸ್ಥಾನ ಪಡೆಯಲು ಅಧಿಕಾರದಿಂದ ಇಳಿಸಿದ ಬಿಜೆಪಿ ಜೊತೆ ಕೈ ಜೋಡಿಸಿದರೆಂದು ಕಿಡಿಕಾರಿದರು.

ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣ ನಮ್ಮ ಪಕ್ಷದ ಕೆಲವರು ಪಕ್ಷ ಬಿಟ್ಟರು. ಅಲ್ಲದೆ, ಜಾ.ದಳದ ಹಿರಿಯ ರಾಜಕಾರಣಿ ಎಚ್.ವಿಶ್ವನಾಥ್, ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣಗೌಡ ಅವರೂ ಸಹ ಪಕ್ಷ ಬಿಟ್ಟು ಬಿಜೆಪಿ ಜತೆ ಕೈ ಜೋಡಿಸಿದರು. ಇದಕ್ಕೆ ಎಚ್.ಡಿ. ಕುಮಾರಸ್ವಾಮಿ ಅವರ ಸ್ವಯಂಕೃತ ಅಪರಾಧವೇ ಕಾರಣ ಎಂದು ಆರೋಪಿಸಿದರು.
ಶಾಸಕರಿಗೆ ಧನ್ಯವಾದ
ಶಾಸಕ ಎಂ.ಶ್ರೀನಿವಾಸ್ ಅವರು ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಎಚ್.ಡಿ.ಕುಮಾರಸ್ವಾಮಿ ಅವರೇ ಮಂಡ್ಯದಿಂದ ಕಣಕ್ಕಿಳಿಯಬೇಕು ಎನ್ನುವ ಮೂಲಕ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿಂದ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲವೆಂದು ಅವರೇ ಒಪ್ಪಿಕೊಂಡಿದ್ದಾರೆ.ಇದಕ್ಕೆ ಶಾಸಕ ಎಂ.ಶ್ರೀನಿವಾಸ್ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಹಾಸನ ಮತ್ತು ರಾಮನಗರ ಜಿಲ್ಲೆಗಳ ಅಭಿವೃದ್ಧಿಗೆ ಒತ್ತು ಕೊಟ್ಟಂತೆ ಮಂಡ್ಯ ಜಿಲ್ಲೆಗೆ ಕಿಂಚಿತ್ತೂ ಗಮನಹರಿಸಲಿಲ್ಲ ಎಂದರು. ಮನ್ಮುಲ್ನಲ್ಲಿ ನಡೆದ ಹಾಲಿನ ಹಗರಣದಲ್ಲೂ ಎಚ್ಡಿಕೆ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು ಮೀನಮೇಷ ಎಣಿಸಿದರು. ಕೊಬ್ಬರಿ ಬೆಲೆಗೆ ಸಂಬಂಧಿಸಿದಂತೆ ಯಾವೊಬ್ಬ ಶಾಸಕರೂ ಮಾತನಾಡಲಿಲ್ಲ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ರಾಮಕೃಷ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ತಾಲ್ಲೂಕು ಅಧ್ಯಕ್ಷ ಎನ್.ಜೆ.ರಾಜೇಶ್, ಮನ್ಮುಲ್ ಮಾಜಿ ಅಧ್ಯಕ್ಷ ಜವರೇಗೌಡ, ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕರಾದ ಬೆಟ್ಟೇಗೌಡ, ಕೃಷ್ಣೇಗೌಡ, ಜಿಪಂ ಮಾಜಿ ಸದಸ್ಯ ಪ್ರಸನ್ನ ಮತ್ತಿರರಿದ್ದರು.
ಈ ಚುನಾವಣೆ ನನಗೆ ಮಾಡು ಇಲ್ಲವೇ ಮಡಿ ಚುನಾವಣೆ.
ನನ್ನ ರಾಜಕೀಯ ಜೀವನದಲ್ಲಿ ಸಂಕ್ರಮಣದ ಕಾಲದಲ್ಲಿ ನಾನಿದ್ದು, ನನ್ನ ಪಾಲಿಗೆ ಜೀವನ್ಮರಣದ ಚುನಾವಣೆಯಾಗಿದೆ. ಜನ ಗೆಲ್ಲಿಸಿದರೆ ರಾಜಕೀಯದಲ್ಲಿ ಮುಂದುವರೆಯುತ್ತೇನೆ. ಸೋತರೆ ಇದೇ ನನ್ನ ಕೊನೆ ಚುನಾವಣೆ ಎಂದು ಎನ್. ಚಲುವರಾಯಸ್ವಾಮಿ ಘೋಷಿಸಿದರು.ನಾನು ಸಚಿವನಾಗಿದ್ದಾಗ ಕ್ಷೇತ್ರದಲ್ಲಿ ಏನೆಲ್ಲ ಅಭಿವೃದ್ಧಿ ಕೆಲಸಗಳು ನಡೆದಿವೆ ಎಂಬುದನ್ನು ನೋಡಿ ನನ್ನ ಸ್ವಾಭಿಮಾನಿ ನಾಗಮಂಗಲ ಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡಲಿದ್ದಾರೆ ಎಂಬ ಸಂಪೂರ್ಣ ನಂಬಿಕೆ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನನ್ನ ಮೇಲೆ ವಿಶ್ವಾಸವಿಟ್ಟು ನನ್ನನ್ನು ರಾಜ್ಯಮಟ್ಟದ ನಾಯಕನ ಸ್ಥಾನ ನೀಡಿರುವ ಕಾಂಗ್ರೆಸ್ ಪಕ್ಷದ ನಾಯಕರ ವಿಶ್ವಾಸವನ್ನು ನಾನು ಉಳಿಸಿಕೊಂಡರೆ ಮುಂದಿನ ದಿನಗಳಲ್ಲಿ ನನಗೆ ಹೆಚ್ಚಿನ ರಾಜಕೀಯ ಅಧಿಕಾರ ದೊರಕಲಿದ್ದು, ನನ್ನ ಕ್ಷೇತ್ರವನ್ನು ಇಡೀ ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡಬೇಕೆಂಬುದು ಕನಸಾಗಿದೆ. ಆದ್ದರಿಂದ ಜನತೆ ನನಗೆ ಈ ಬಾರಿ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.
2018ರಲ್ಲಿ ನನ್ನ ವಿರುದ್ಧ ನಡೆದ ಅಪಪ್ರಚಾರ ಮತ್ತು ಕೆಲ ಗೊಂದಲಗಳಿಂದಾಗಿ ಕ್ಷೇತ್ರದ ಜನರು ನನ್ನ ಕೈಹಿಡಿಯದಿದ್ದರೂ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಕ್ಷೇತ್ರದಲ್ಲಿ ಸಂಚಾರ ಮಾಡಿ, ಜನರ ಜತೆ ಸಂಪರ್ಕದಲ್ಲಿದ್ದು, ಅವರ ಕಷ್ಟ ಕಾರ್ಪಣ್ಯಗಳಿಗೆ ನನ್ನ ಕೈಲಾದಷ್ಟು ಸ್ಪಂದಿಸಿದ್ದೇನೆ ಎಂದು ತಿಳಿಸಿದರು.




