ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಮಲ್ಲಿಕಾರ್ಜುನ್ (ಫೈಟರ್ ರವಿ) ನಾಗಮಂಗಲ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಮಂಗಳವಾರ ತಮ್ಮ ಸಾಮಾನ್ಯ ಬೆಂಬಲಿಗರೊಂದಿಗೆ ನಾಗಮಂಗಲ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ನಾಗಮಂಗಲದ ವಿಧಾನಸಭಾ ಕ್ಷೇತ್ರದಲ್ಲಿ ಹತ್ತಾರು ಸಮಾಜಸೇವೆ ಕಾರ್ಯಗಳನ್ನು ಕೈಗೊಂಡಿದ್ದ ಅವರು, ಕೆಲ ತಿಂಗಳುಗಳ ಹಿಂದೆ ಬಿಜೆಪಿ ಪಕ್ಷ ಸೇರಿ, ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಪಕ್ಷವು ಫೈಟರ್ ರವಿ ನಂತರ ಬಿಜೆಪಿ ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡರ ಪತ್ನಿ ಸುಧಾ ಶಿವರಾಮೇಗೌಡರಿಗೆ ಟಿಕೆಟ್ ನೀಡಿದ್ದರಿಂದ ಬೇಸತ್ತು ಬಿಜೆಪಿಗೆ ರಾಜೀನಾಮೆ ನೀಡಿ ಪಕ್ಷೇತರವಾಗಿ ಚುನಾವಣಾ ಕಣಕ್ಕೆ ಧುಮುಕಿದ್ದಾರೆ.

ನಾಗಮಂಗಲ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಎನ್.ಚಲುವರಾಯಸ್ವಾಮಿ, ಜೆಡಿಎಸ್ ನಿಂದ ಸುರೇಶ್ ಗೌಡ, ಬಿಜೆಪಿಯಿಂದ ಸುಧಾ ಶಿವರಾಮೇಗೌಡ ಹಾಗೂ ಪಕ್ಷೇತರವಾಗಿ ಫೈಟರ್ ರವಿ ಕಣಕ್ಕೀಳಿದಿರುವುದರಿಂದ ಚುನಾವಣಾ ಕಣ ರಂಗೇರಿದ್ದು, ಮುಂದಿನ ದಿನಗಳಲ್ಲಿ ಯಾವ್ಯಾವ ಬೆಳವಣಿಗೆಗಳು ನಡೆಯಲಿವೆಯೋ ಕಾದು ನೋಡಬೇಕಿದೆ.




