ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ನನಗೆ ಇದು ಕಡೆಯ ಚುನಾವಣೆಯಾಗಿದೆ. ನಾನು ಎರಡು ಭಾರಿ ಸೋತಿದ್ದೇನೆ. ಜೆಡಿಎಸ್ ನಿಂದ ಮೋಸವಾಗಿದೆ ಹಾಗಾಗಿ ಈ ಭಾರಿ ನನ್ನನ್ನು ಗೆಲ್ಲಿಸುವ ಮೂಲಕ ತಾಲ್ಲೂಕಿನ ಜನರ ಸೇವೆ ಮಾಡಲು ನನಗೊಂದು ಅವಕಾಶ ನೀಡುವಂತೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಮತದಾರರಲ್ಲಿ ಮನವಿ ಮಾಡಿದರು.
ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿ ಕೇಂದ್ರದಲ್ಲಿ ನಡೆದ ತಾಲ್ಲೂಕು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು ಸುಮಾರು 43 ವರ್ಷಗಳ ಕಾಲ ಜೆಡಿಎಸ್ ಪಕ್ಷದಲ್ಲಿ ನಿಷ್ಠೆ, ಪ್ರಾಮಾಣಿಕತೆಯಿಂದ ದುಡಿದು ಆ ಪಕ್ಷವು ಸೂಚಿಸಿದ ಹಲವು ಮಂದಿ ಶಾಸಕರಾಗಲು ಪ್ರಾಮಾಣಿಕವಾಗಿ ದುಡಿದಿದ್ದೇನೆ. ಆದರೆ ಜೆಡಿಎಸ್ ವರಿಷ್ಠರಿಗೆ ಕೊನೆಯ ಚುನಾವಣೆ ಎಂದು ಪರಿಗಣಿಸಿ ಟಿಕೆಟ್ ನೀಡುವಂತೆ ಮಾಡಿದ ಮನವಿಗೆ ಸ್ಪಂದಿಸದೇ ಹಣವಂತ ವ್ಯಕ್ತಿಗೆ ಟಿಕೆಟ್ ನೀಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷವು ನನಗೆ ಆಸರೆ ನೀಡಿ ಪಕ್ಷದ ಟಿಕೆಟ್ ನೀಡಿದೆ. ಇದಕ್ಕೆ ಕಾಂಗ್ರೆಸ್ ವರಿಷ್ಠರಿಗೆ ಹಾಗೂ ತಾಲ್ಲೂಕಿನ ಎಲ್ಲಾ ಕಾಂಗ್ರೆಸ್ ಟಿಕೆಟ್ ಆಕಾಂಕ್ಚಿಗಳಿಗೂ ಆಭಾರಿಯಾಗಿದ್ದೇನೆ. ತಾಲ್ಲೂಕಿನಲ್ಲಿ ನನ್ನ ಪರವಾದ ಅನುಕಂಪದ ಅಲೆ ಕಂಡು ಬರುತ್ತಿದೆ. ಮತದಾರರೇ ನನಗೆ ಹಣ ನೀಡಿ ಗೆದ್ದು ಬರುವಂತೆ ಶುಭ ಹಾರೈಸುತ್ತಿದ್ದಾರೆ ಎಂದರು.
ನನಗೆ ದ್ವೇಷದ ರಾಜಕಾರಣ ಗೊತ್ತಿಲ್ಲ. ನಾನು ಯಾರನ್ನು ಯಾವತ್ತೂ ಟೀಕಿಸಿದ ವ್ಯಕ್ತಿಯಲ್ಲ. ಮುಂದೆಯೂ ಯಾರನ್ನೂ ಟೀಕಿಸುವುದಿಲ್ಲ. ರಾಷ್ಟೀಯ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷವು ನನ್ನನ್ನು ಗೌರವದಿಂದ ಸ್ವಾಗತಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತೀ ಮನೆಗೆ ತಿಂಗಳಿಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತದೆ. ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತೀ ಮನೆಯ ಯಜಮಾನಿ ಮಹಿಳೆಯ ಖಾತೆಗೆ ಮಾಸಿಕ 2 ಸಾವಿರ ರೂ. ನಗದು ಜಮೆ ಮಾಡಲಾಗುತ್ತದೆ. ಪ್ರತಿ ಬಿಪಿಎಲ್ ಕುಟುಂಬದ ಪ್ರತೀ ವ್ಯಕ್ತಿಗೂ ತಲಾ 10ಕೆ.ಜಿ. ಉಚಿತ ಅಕ್ಕಿಯನ್ನು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ. 2 ಸಾವಿರ ರೂ. ನಗದು ನೀಡುವುದಕ್ಕೆ ಯೋಜನೆ ರೂಪಿಸಲಾಗಿದೆ. ಇದರಿಂದ ಅಗತ್ಯ ವಸ್ತುಗಳ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಇದು ಬಡವರಿಗೆ ವರದಾನವಾದ ಯೋಜನೆಗಳಾಗಿವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ ಡಿ ಗಂಗಾಧರ್, ಕಾಂಗ್ರೆಸ್ ಮುಖಂಡರಾದ ವಿಜಯ್ ರಾಮೇಗೌಡ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್, ಬಿ.ನಾಗೇಂದ್ರ ಕುಮಾರ್, ಜಿ. ಪಂ ಮಾಜಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ಕಾಂಗ್ರೆಸ್ ಮುಖಂಡರಾದ ಬಿ.ಟಿ.ವೆಂಕಟೇಶ್, ಬಸ್ತಿ ರಂಗಪ್ಪ, ರಾಜಯ್ಯ, ಮಾದವಪ್ರಸಾದ್, ಬಸ್ ಕೃಷ್ಣೇಗೌಡ, ಆಲಂಬಾಡಿಕಾವಲು ಸಿದ್ದಿಕ್, ಹಿರಿಯ ಮುಖಂಡರಾದ ಬೂಕನಕೆರೆ ವೆಂಕಟೇಶ್, ಶ್ಯಾಮಣ್ಣ, ವಿಠಲಾಪುರ ಸುಬ್ಬೇಗೌಡ, ತಾಲ್ಲೂಕು ಪ್ರಚಾರ ಸಮಿತಿ ಅಧ್ಯಕ್ಷ ಸಾಸಲು ಈರಪ್ಪ, ತಾ.ಕಾಂಗ್ರೆಸ್ ಉಸ್ತುವಾರಿ ರಮೇಶ್, ಜಿಲ್ಲಾ ಕಾಂಗ್ರೆಸ್ ಓಬಿಸಿ ಘಟಕದ ಅಧ್ಯಕ್ಷ ಕೃಷ್ಣ ಮತ್ತಿತರರಿದ್ದರು.




