Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ವಿಧಾನಸಭಾ ಕ್ಷೇತ್ರ | ಜೆಡಿಎಸ್ ನೆಲಕಚ್ಚುವುದರಲ್ಲಿ ಯಾವುದೇ ಅನುಮಾನವಿಲ್ಲ : ಮುದ್ಧನಘಟ್ಟ ಮಹಾಲಿಂಗೇಗೌಡ

ಮಂಡ್ಯದ ಜೆಡಿಎಸ್ ಅಭ್ಯರ್ಥಿಯಾಗಿ ಬಿ.ಆರ್.ರಾಮಚಂದ್ರು ಅವರಿಗೆ ಬಿ ಫಾರಂ ನೀಡಿರುವುದು ಖಚಿತವಾದ ಮೇಲೆ ಜೆಡಿಎಸ್ ಎಲ್ಲಾ ಮುಖಂಡರು ಇಂದು ಸಂಜೆ ಶಾಸಕ ಎಂ.ಶ್ರೀನಿವಾಸ್ ಅವರ ಬಳಿ ಜಮಾಯಿಸಿ ಮಾತುಕತೆ ನಡೆಸಿದರು.

ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದ ಶಾಸಕ ಎಂ.ಶ್ರೀನಿವಾಸ್ ಅವರ ಹೆಸರನ್ನು ಕೈ ಬಿಟ್ಟು,  ಜೆಡಿಎಸ್ ಪಕ್ಷದ 3ನೇ ಪಟ್ಟಿಯ ಬಿಡುಗಡೆಯ ನಂತರ  ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಅವರಿಗೆ ಬಿ ಫಾರಂ ನೀಡಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಜಿಲ್ಲಾ ಜೆಡಿಎಸ್ ವಕ್ತಾರ ಮುದ್ಧನಘಟ್ಟ ಮಹಾಲಿಂಗೇಗೌಡ ತಿಳಿಸಿದರು.

ಈ ಬಗ್ಗೆ  ಸುದ್ದಿಗಾರರೊಂದಿಗೆ ಮಾತನಾಡಿದ ಮುದ್ದನಘಟ್ಟ ಮಹಾಲಿಂಗೇಗೌಡ, ಶಾಸಕ ಎಂ.ಶ್ರೀನಿವಾಸ್ ಅವರು ಜಿಲ್ಲೆಯ ಅಭಿವೃದ್ದಿಯ ದೃಷ್ಟಿಯಿಂದ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯ ಜಿಲ್ಲೆಯಿಂದ ಸ್ಪರ್ಧಿಸುವುದಾದರೆ, ಕ್ಷೇತ್ರವನ್ನು ಬಿಟ್ಟುಕೊಡಲು ಸಿದ್ದವೆಂದು ಕೆಲದಿನಗಳ ಹಿಂದೆ ಶಾಸಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿ ಆಹ್ವಾನ ಮಾಡಿದ್ದರು.

ಈಗ ಜೆಡಿಎಸ್ ಕಾರ್ಯಕರ್ತರ ಭಾವನೆಗಳಿಗೆ ಯಾವುದೇ ಬೆಲೆ ನೀಡದೆ ಏಕಾಏಕಿ ಅಧಿಕೃತ ಅಭ್ಯರ್ಥಿಯಾಗಿ ಬಿ.ಆರ್. ರಾಮಚಂದ್ರುಅವರನ್ನು ಘೋಷಣೆ ಮಾಡಿರುವುದು ಖಂಡನೀಯವೆಂದು ತಿಳಿಸಿದರು.

ಜೆಡಿಎಸ್ ಘೋಷಿತ ಅಭ್ಯರ್ಥಿಯನ್ನು ಬದಲಾಯಿಸಲು ಕುಮಾರಸ್ವಾಮಿಯವರನ್ನು ಮತ್ತು ಪಕ್ಷದ ವರಿಷ್ಠರನ್ನು ಒತ್ತಾಯಿಸುತೇನೆ. ಈ ಬಗ್ಗೆ ತೀರ್ಮಾನಿಸಲು ಇನ್ನು ಸಮಯವಿದ್ದು, ಅಭ್ಯರ್ಥಿಯನ್ನು ಬದಲಾಯಿಸದಿದ್ದರೆ, ಮಂಡ್ಯ ಜಿಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್  ಪಕ್ಷ ನೆಲಕಚ್ಚುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು.

ಮಂಡ್ಯ ವಿಧಾನಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿಗಳಾದ, ಎಂ.ಶ್ರೀನಿವಾಸ್, ಹೆಚ್.ಎನ್.ಯೋಗೇಶ್, ಕೆ.ಎಸ್ ವಿಜಯ್ ಆನಂದ್, ನಗರಸಭಾ ಆಧ್ಯಕ್ಷ ಮಂಜು ಮತ್ತು  ಮುದ್ದನಘಟ್ಟ ಮಹಾಲಿಂಗೇಗೌಡ  ಇವರೆಲ್ಲರನ್ನು ಹೊರತು ಪಡಿಸಿ, ಬಿ.ಆರ್. ರಾಮಚಂದ್ರು ಗೆ ಟಿಕೆಟ್ ನೀಡಿರುವುದರ ವಿಚಾರವಾಗಿ, ನಾಳೆ ನಾವೆಲ್ಲರೂ ಸಭೆ ಸೇರಿ, ಎಲ್ಲರೂ ಒಂದು ತೀರ್ಮಾನಕ್ಕೆ ಬರುತ್ತೇವೆ. ಅಭ್ಯರ್ಥಿಯನ್ನು ಬದಲಿಸದಿದ್ದರೆ,  ಜಿಲ್ಲಾ ಜೆಡಿಎಸ್ ವಕ್ತಾರ ಹುದ್ದೆಗೆ  ನಾನು ರಾಜೀನಾಮೆಯನ್ನು ನೀಡುತ್ತೇನೆ  ಎಂದು ತಿಳಿಸಿದರು.

ಜೆಡಿಎಸ್ ಬಂಡಾಯ ಸ್ವಾಭಿಮಾನಿ ಪಡೆ ಸ್ಪರ್ಧೆ ಖಚಿತ

ನಾಳೆ ಶಾಸಕ ಎಂ. ಶ್ರೀನಿವಾಸ್ ಅವರ ನೇತೃತ್ವದಲ್ಲಿ ಜೆಡಿಎಸ್ ನ ಎಲ್ಲಾ ಸ್ಪರ್ಧಾಕಾಂಕ್ಷಿಗಳು ಸಭೆ ಸೇರಿ, ಎಲ್ಲಾ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಲಿದ್ದಾರೆ ಎಂದು ಜೆಡಿಎಸ್ ಮುಖಂಡ ಹೆಚ್.ಎನ್.ಯೋಗೇಶ್ ತಿಳಿಸಿದರು.

ನಾಳೆ ಸಭೆಯ ನಂತರ ಎಲ್ಲಾ ಅಭ್ಯರ್ಥಿಗಳು ಪಕ್ಷೇತರವಾಗಿ ನಾಮಪತ್ರವನ್ನು ಸಲ್ಲಿಸುತ್ತೇವೆ. ಅಂತಿಮ ಸುತ್ತಿನಲ್ಲಿ ಯಾವ ಅಭ್ಯರ್ಥಿ ಕಣದಲ್ಲಿ ಉಳಿಯುತ್ತಾರೆ ಅವರಿಗೆ ನಮ್ಮೆಲ್ಲರ ಬೆಂಬಲವಿದ್ದು, ಜೆಡಿಎಸ್ ನಿಂದ ಬಂಡೆದ್ದ ಸ್ವಾಭಿಮಾನಿ ಪಡೆಯು ಈ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವೆಂದು ತಿಳಿಸಿದರು.

 

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ