ನನ್ನನ್ನು ಜೈಲಿಗೆ ಹಾಕಿದ್ದಾಯಿತು, ಐಟಿ,ಇಡಿ ಎಂದು ಅಲೆಸಿದ್ದಾಯಿತು. ರಾಹುಲ್ ಗಾಂಧಿಯವರನ್ನೇ ಬಿಡದ ನೀವು ನನ್ನನ್ನು ಬಿಡುತ್ತೀರಾ, ತಿಳ್ಕೊಳ್ಳಿ, ನೀವು ಏನೇ ಮಾಡಿದರೂ ನಾನು ಶರಣಾಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗುಡುಗಿದರು.
ಮಂಡ್ಯ ನಗರದ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ಕಾಂಗ್ರೆಸ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ರಾಜ್ಯದ ಜನರು ನನಗಾಗಿ ಮರುಗಿದರು,ಪ್ರಾರ್ಥನೆ ಮಾಡಿದರು. ನನ್ನನ್ನು ಸಂತೈಸಿದರು. ಅವರ ಪ್ರೀತಿ ರಕ್ಷಣೆಯೇ ನನಗೆ ಮುಖ್ಯ. ಅವರ ಋಣವನ್ನು ತೀರಿಸುವ ಕೆಲಸವನ್ನು ನಾನು ಮಾಡುತ್ತೇನೆ. ಬಿಜೆಪಿ ನಾಯಕರು ನನಗೆ ಏನೇ ಮಾಡಿದರೂ, ನಾನು ಎಂದಿಗೂ ಶರಣಾಗುವುದಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ದೇಶದ ಶಕ್ತಿ
ಕಾಂಗ್ರೆಸ್ ದೇಶದ ಶಕ್ತಿಯಾಗಿದೆ. ಇತಿಹಾಸವೆಂದರೆ ಅದು ಕಾಂಗ್ರೆಸ್ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಜನರು ಅಧಿಕಾರಕ್ಕೆ ಬಂದ ಹಾಗೆ. ಜನರನ್ನು ರಕ್ಷಣೆ ಮಾಡುವುದು ಅವರನ್ನು ಅಭಿವೃದ್ಧಿ ಮಾಡುವುದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದರು.
ಮೇ 10 ನಡೆಯುವ ಚುನಾವಣೆಯಲ್ಲಿ ರಾಜ್ಯದ ಜನರು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕಿದೆ.ಮೇ 10 ರ ಚುನಾವಣೆಯ ದಿನ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ದಿನವಾಗಿದೆ ಎಂದರು.
ಎಲ್ಲರಿಗೂ ಅರ್ಹತೆ ಇತ್ತು
ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಬಯಸಿದ್ದ 16 ಮಂದಿ ಆಕಾಂಕ್ಷಿತರಲ್ಲಿ ಗಣಿಗ ರವಿ ಕುಮಾರ್ ಗಿಂತ 10ಕ್ಕೂ ಹೆಚ್ಚು ಜನ ಹಿರಿಯರಾಗಿದ್ದರು. ಅವರಿಗೂ ಟಿಕೆಟ್ ಪಡೆಯುವ ಎಲ್ಲಾ ಅರ್ಹತೆ ಇತ್ತು. ಆದರೆ ಪಕ್ಷ ಗಣಿಗ ರವಿಕುಮಾರ್ ಅವರನ್ನು ಅಭ್ಯರ್ಥಿ ಮಾಡಿದೆ. ಆತ ಆರ್ಥಿಕವಾಗಿ ಶಕ್ತಿವಂತನಲ್ಲ. ಕೊರೋನಾ ಸಂದರ್ಭದಲ್ಲಿ ಜನರೊಂದಿಗೆ ಇದ್ದು ಸಾಲ- ಸೋಲ ಮಾಡಿ ಅವರಿಗೆ ವಿತರಣೆ ಮಾಡಿದ್ದಾನೆ. ಗ್ರಾಮ ಪಂಚಾಯಿತಿ, ಇನ್ನಿತರ ಸ್ಥಳೀಯ ಪಂಚಾಯತಿ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಜೊತೆ ಇದ್ದು ಹಣಕಾಸಿನ ನೆರವು ನೀಡಿದ್ದಾನೆ ತಮ್ಮ ಕೈಲಾದ ಮಟ್ಟಿಗೆ ಹಣಕಾಸಿನ ನೆರವು ನೀಡಿದ್ದಾನೆ. ಕೆಲವರಿಗೆ ಆತನ ವರ್ತನೆ ಹಿಡಿಸದಿರಬಹು. ಆದರೆ ಎಲ್ಲಾ ಆಕಾಂಕ್ಷಿತರು ಒಗ್ಗಟ್ಟಾಗಿ ಗಣಗ ರವಿ ಕುಮಾರಣ್ಣ ಗೆಲ್ಲಿಸಬೇಕಿದೆ. ಒಗ್ಗಟ್ಟಾಗಿ ಕರೆದುಕೊಂಡು ಹೋಗುವ ಜವಾಬ್ದಾರಿ ನನ್ನ ಚೆಲುವರಾಯಸ್ವಾಮಿ ಹಾಗೂ ರವಿಕುಮಾರ್ ಮೇಲೆ ನಿಂತಿದೆ. ಎಲ್ಲರನ್ನೂ ಒಗ್ಗಟ್ಟಾಗಿ ಕರೆದುಕೊಂಡು ಹೋಗಬೇಕಿದೆ ಎಂದರು.
ಮೈಶುಗರ್ ಪುನಶ್ಚೇತನ
ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಮೈ ಶುಗರ್ ಕಾರ್ಖಾನೆಗೆ ಪರಿಹಾರ ಒದಗಿಸುವ ಕೆಲಸವನ್ನು ನಾನು ಮಾಡುತ್ತೇನೆ.ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಇವುಗಳನ್ನು ಬಗೆಹರಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಲಿದೆ. ಹಾಲಿನ ವಿಚಾರವಾಗಿ ಹಾಗೂ ಹೆದ್ದಾರಿ ವಿಚಾರವಾಗಿ ಜೆಡಿಎಸ್ ಪಕ್ಷದ 7 ಶಾಸಕರು ಒಂದೇ ಒಂದು ಧ್ವನಿಯನ್ನು ವಿಧಾನಸಭೆಯಲ್ಲಿ ಎತ್ತಲಿಲ್ಲ. ಬೆಂಗಳೂರು- ಮೈಸೂರು ಹೆದ್ದಾರಿಯಿಂದ ವ್ಯಾಪಾರ ವಹಿವಾಟಿಗೆ ತೊಂದರೆಯಾಗಿದೆ. ಹೆದ್ದಾರಿ ಕಾಮಗಾರಿ ಗುಣಮಟ್ಟ ಸರಿಯಿಲ್ಲ. ಈ ಬಗ್ಗೆ ಒಂದು ದಿನ ಮಾತನಾಡಲಿಲ್ಲ ನಂದಿನಿ ಅಮೋಲ್ ವಿಲೀನದ ಬಗ್ಗೆ ಅಮಿತ್ ಶಾ ಮಾತನಾಡಿದರೆ ಈ ಬಗ್ಗೆ ಹೆಚ್ಚು ಮಾತನಾಡಲಿಲ್ಲ ರೈತರಿಗೆ ಬೆಂಬಲ ಬೆಲೆ, ವಿಚಾರದಲ್ಲೂ ಜೆಡಿಎಸ್ ನಾಯಕರು ಮಾತನಾಡಲಿಲ್ಲ. ನೀವು ಏನಾದರೂ ಒಪ್ಪಂದ ಮಾಡಿಕೊಂಡಿರಿ. ಆದರೆ ರೈತರ ಋಣ ತೀರಿಸುವ ಕೆಲಸವನ್ನು ಜೆಡಿಎಸ್ ಮಾಡಿಲ್ಲ ಎಂದು ಹರಿಹಾಯ್ದರು.

ನಿಮಗೆ ಕೈ ಮುಗೀಬೇಕಾ
ಇವತ್ತು ಬೆಲೆ ಏರಿಕೆಯಿಂದ ದೇಶದ ಜನರು ತತ್ತರಿಸಿದ್ದಾರೆ. ಗ್ಯಾಸ್ ಬೆಲೆ 40, 50 ರೂಪಾಯಿ ಹೆಚ್ಚಾದಾಗ,ಗ್ಯಾಸ್ ಒಲೆಗೆ ಕೈ ಮುಗಿದು ಮತ ಕೇಂದ್ರಕ್ಕೆ ಹೋಗಿ ಎಂದು 2013ರ ಚುನಾವಣೆಗೆ ಮುನ್ನ ಮೋದಿಯವರು ಹೇಳಿದ್ದರು. ಈಗ 700 ಗ್ಯಾಸ್ ಬೆಲೆ ಹೆಚ್ಚಾಗಿದೆ. ಈಗ ನಿಮಗೆ ಕೈ ಮುಗಿಯಬೇಕಾ ಎಂದು ಪ್ರಧಾನ ಮಂತ್ರಿ ಮೋದಿ ಅವರ ಬಗ್ಗೆ ವ್ಯಂಗ್ಯವಾಡಿದರು.
ನಾನೇ ಅಭ್ಯರ್ಥಿ
ಮಂಡ್ಯ ಕ್ಷೇತ್ರದಲ್ಲಿ ಗಣಿಗ ರವಿಕುಮಾರ್ ಅಭ್ಯರ್ಥಿಯಲ್ಲ.ನಾನು ಅಭ್ಯರ್ಥಿ ಎಂದು ತಿಳಿದು ರವಿಕುಮಾರ್ ಗೆ ಮತ ನೀಡಿ ಗೆಲ್ಲಿಸಿ. ಜೆಡಿಎಸ್ ಅಭ್ಯರ್ಥಿಯನ್ನು ಮೇಲುಕೋಟೆ ಕ್ಷೇತ್ರದಿಂದ ಕರೆದುಕೊಂಡು ಬಂದಿದ್ದಾರೆ. ಯಾಕೆ ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವವರು ಯಾರೂ ಇರಲಿಲ್ಲವಾ. ರವಿಕುಮಾರ್ ಕೋರೋನಾ ಸಂದರ್ಭದಲ್ಲಿ ಸಾಲ ಮಾಡಿ ಜನರೊಂದಿಗೆ ನಿಂತಿದ್ದಾನೆ.ಇಂತಹ ಉಪಕಾರ ಮಾಡಿದವರ ಸ್ಮರಣೆಯನ್ನು ಕ್ಷೇತ್ರದ ಜನತೆ ಮಾಡಬೇಕಿದೆ. ಹೀಗಾಗಿ ರವಿಕುಮಾರ್ ನನ್ನ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ ಕಳುಹಿಸಬೇಕು ಎಂದರು.
ಜಿಲ್ಲೆಯ ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ನಮ್ಮ ಪಕ್ಷ ಬೆಂಬಲ ನೀಡಿದ್ದು, ಏಳಕ್ಕೆ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಗಣಿಗ ರವಿಕುಮಾರ್, ಕೆಪಿಸಿಸಿ ಉಪಾಧ್ಯಕ್ಷ ಚಲುರಾಯಸ್ವಾಮಿ, ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳೀಗೌಡ, ಮಧು ಮಾದೇಗೌಡ,ಮಾಜಿ ಸಚಿವ ಆತ್ಮಾನಂದ, ಅಮರಾವತಿ ಚಂದ್ರಶೇಖರ್,ಕೀಲಾರ ರಾಧಾಕೃಷ್ಣ,ಸಿದ್ದಾರೂಢ ಸತೀಶ್ ಗೌಡ,ಹಾಲಹಳ್ಳಿ ಅಶೋಕ್, ಚಿದಂಬರ್, ರಾಮಲಿಂಗಯ್ಯ,ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಯುವ ಘಟಕದ ಅಧ್ಯಕ್ಷ ವಿಜಯ್ ಕುಮಾರ್ ಮತ್ತಿತರರಿದ್ದರು.




