ವರದಿ : ಪ್ರಭು ವಿ.ಎಸ್.
ಮದ್ದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಪಿ. ಸ್ವಾಮಿ ಅವರು ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಬಿರುಸಿನ ಮತ ಪ್ರಚಾರ ಕೈಗೊಂಡು ತಮ್ಮನ್ನು ಆಶೀರ್ವದಿಸಿ ಗೆಲ್ಲಿಸುವಂತೆ ಮನವಿ ಮಾಡಿದರು.
ತಾಲೂಕಿನ ಸೊಳ್ಳೇಪುರ, ವಳಗೆರೆಹಳ್ಳಿ, ರಾಂಪುರ, ದೇಶಹಳ್ಳಿ, ಬೆಳತ್ತೂರು ಇನ್ನಿತರೆ ಗ್ರಾಮಗಳಿಗೆ ತೆರಳಿದ ಅಭ್ಯರ್ಥಿ ಎಸ್.ಪಿ. ಸ್ವಾಮಿ ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ ತಮ್ಮನ್ನು ಬೆಂಬಲಿಸಿ ಆಶೀರ್ವದಿಸುವ ಮೂಲಕ ತಮ್ಮಗಳ ಸೇವೆ ಮಾಡಲು ಅವಕಾಶ ಕಲ್ಪಿಸಬೇಕೆಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಯೋಜನೆಗಳ ಕರ ಪತ್ರಗಳನ್ನು ಮತದಾರರಿಗೆ ತಲುಪಿಸಿ ಮಾತನಾಡಿದ ಅಭ್ಯರ್ಥಿ ಎಸ್.ಪಿ. ಸ್ವಾಮಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷವು ಆರ್ಥಿಕವಾಗಿ ಸದೃಢವಾಗಿದ್ದು ಸರ್ಕಾರದ ಹಲವಾರು ಯೋಜನೆಗಳನ್ನು ಮೆಚ್ಚಿ ಇತರೆ ಪಕ್ಷದ ಕಾರ್ಯಕರ್ತರು ಬಿಜೆಪಿ ಪಕ್ಷದತ್ತ ಮುಖ ಮಾಡಿರುವುದು ತಮಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಆಡಳಿತವನ್ನು ತಾವು ನೋಡಿದ್ದು ಈಭಾರಿ ತಮ್ಮನ್ನು ಆಶೀರ್ವದಿಸಿದಲ್ಲಿ ತಮ್ಮಗಳ ಸೇವಕನಾಗಿ ಕರ್ತವ್ಯ ನಿರ್ವಹಿಸಿ ಕ್ಷೇತ್ರದಾದ್ಯಂತ ಇರುವ ಹತ್ತು ಹಲವು ಯೋಜನೆಗಳನ್ನು ಪೂರ್ಣಗೊಳಿಸಿ ರೈತರ, ಮಹಿಳೆಯರ, ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸುವುದಾಗಿ ಹೇಳಿದರು.
ಪ್ರಧಾನಿ ನರೇಂದ್ರಮೋದಿ ಅವರ ಕಾರ್ಯವೈಖರಿಯನ್ನು ಇತರೆ ದೇಶಗಳು ಮೆಚ್ಚಿ ಇವರ ಆಡಳಿತವನ್ನು ಅನುಸರಿಸುತ್ತಿದ್ದು ಕೊರೋನಾ ಸಂದರ್ಭದಲ್ಲಿ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗಲೆಂಬ ಸದುದ್ದೇಶದಿಂದ ಹಲವಾರು ಪ್ಯಾಕೇಜ್ಗಳನ್ನು ಘೋಷಿಸಿ ಸಂಕಷ್ಟದಲ್ಲಿದ್ದ ಕುಟುಂಬಗಳ ನೆರೆವಿಗೆ ಧಾವಿಸಿರುವುದಾಗಿ ಹೇಳಿದರು.
ತಾಲೂಕಿನಾದ್ಯಂತ ಹಲವಾರು ಸಮಾಜಮುಖಿ ಸೇವಾ ಕಾರ್ಯಗಳನ್ನು ಕೈಗೊಂಡು ಕಳೆದ 2 ದಶಕಗಳಿಂದಲೂ ನಿರಂತರವಾಗಿ ತಮ್ಮ ಸೇವೆ ಮಾಡುತ್ತಿದ್ದು ತಮಗೆ ಅಧಿಕಾರ ಸಿಕ್ಕಿದರೆ ಮತ್ತಷ್ಟು ಸೇವಾ ಕಾರ್ಯಗಳನ್ನು ಕೈಗೊಂಡು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವುದಾಗಿ ಹೇಳಿದರು.
ಈ ವೇಳೆ ವಿಧಾನಸಭಾ ಚುನಾವಣಾ ಉಸ್ತುವಾರಿ ಭರತ್ಭೂಷಣ್ಜೀ. ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಸಿ.ಕೆ. ಸತೀಶ್, ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಸಿ. ಮಹೇಂದ್ರ, ಗ್ರಾ.ಪಂ. ಮಾಜಿ ಅಧ್ಯಕ್ಷ ಮೋಹನ್, ವಿಎಸ್ಎಸ್ಎನ್ಬಿ ಅಧ್ಯಕ್ಷ ಕಿಟ್ಟಿ, ಮುಖಂಡರಾದ ಚನ್ನಪ್ಪ, ಮಧು ಇತರರಿದ್ದರು




