ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ವಂಚಿತ ಕೆ.ಎಸ್.ವಿಜಯ್ ಆನಂದ್ ಅವರ ಮನೆಗೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಭೇಟಿ ನೀಡಿ ರಾಜಕೀಯ ವಿದ್ಯಮಾನ ಕುರಿತು ಚರ್ಚೆ ನಡೆಸಿದರು.
ಶನಿವಾರ ಮಧ್ಯಾಹ್ನ ನಗರದ ಬಂದಿಗೌಡ ಬಡಾವಣೆಯಲ್ಲಿರುವ ವಿಜಯಾನಂದ ಅವರ ಮನೆ ತೆರಳಿದ ದರ್ಶನ್ ಪುಟ್ಟಣ್ಣಯ್ಯ ಅವರು ರಾಜಕೀಯ ಚರ್ಚೆ ನಡೆಸಿರುವುದು ಕುತೂಹಲ ಕೆರಳಿಸಿದೆ.

ವಿಜಯಾನಂದ ಅವರಿಗೆ ಮಂಡ್ಯ ಜೆಡಿಎಸ್ ಟಿಕೆಟ್ ತಪ್ಪಲು ಮೇಲುಕೋಟೆ ಜೆಡಿಎಸ್ ಅಭ್ಯರ್ಥಿ ಶಾಸಕ ಸಿ.ಎಸ್.ಪುಟ್ಟರಾಜು ಕಾರಣ ಎಂಬ ಆರೋಪ ಕೇಳಿ ಬರುತ್ತಿರುವ ಬೆನ್ನಲ್ಲೇ ಯುವ ನಾಯಕರ ಭೇಟಿ ಚರ್ಚೆಗೆ ಗ್ರಾಸವಾಗಿದೆ.
ಭೇಟಿ ಬಳಿಕ ಮಾತನಾಡಿದ ದರ್ಶನ್ ಪುಟ್ಟಣ್ಣಯ್ಯ ಅವರು, ನಮಗೆ ಬೆಂಬಲ ಕೋರಿದ್ದೇನೆ, ಅವರು ಬೆಂಬಲ ನೀಡುವ ಬಗ್ಗೆ ಚಿಂತಿಸಲಾಗುವುದು ಎಂದಿದ್ದಾರೆಂದು ತಿಳಿಸಿದರು. ಸುಮಲತಾ ಅಂಬರೀಶ್ ಅವರು ಬೆಂಬಲ ನೀಡುವ ಬಗ್ಗೆ ನಿರ್ಧಾರವಾಗಿಲ್ಲ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಇರುವುದರಿಂದ ಅವರಿಗೆ ನಿರ್ಬಂಧವಿರಬಹುದು ಎಂದು ಅವರು ತಿಳಿಸಿದರು.




