”ಅಮಿಷಕ್ಕೆ ಒಳಗಾಗಿ, ಕ್ಷಣಿಕ ಲಾಭದ ಆಸೆಗೆ ಬಿದ್ದು ಯಾರೊಬ್ಬರೂ ಮತವನ್ನು ಮಾರಿಕೊಳ್ಳಬಾರದು, ಮತದಾರ ಒಬ್ಬ ಅಭ್ಯರ್ಥಿಗೆ ಮತ ಹಾಕಲು ಆತನ ಅರ್ಹತೆಯನ್ನೇ ಮಾನದಂಡವಾಗಿಟ್ಟುಕೊಳ್ಳಬೇಕು” ಎಂದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ ಸಲಹೆ ನೀಡಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಂದು ಸಾರ್ವಜನಿಕ ಸ್ಥಾನಕ್ಕೆ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡುವ ಅವಕಾಶ ಸಿಕ್ಕಾಗ ಅರ್ಹ ವ್ಯಕ್ತಿಯನ್ನೇ ಆಯ್ಕೆ ಮಾಡುವುದು ನಮ್ಮ ಕರ್ತವ್ಯ ಆಗಬೇಕು. ಮತದಾನ ನಮ್ಮ ಹಕ್ಕು. ಮತದಾನ ಪ್ರಕ್ರಿಯೆಯಲ್ಲಿ ಶೇ. 20 ನಮ್ಮ ಹಕ್ಕಾದರೆ, ಉಳಿದ ಶೇ 80 ಭಾಗ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಹೀಗಾಗಿ ಮತದಾನ ಅಂದರೆ ನಮ್ಮ ಹಕ್ಕು ಮತ್ತು ಕರ್ತವ್ಯದ ಸಮ್ಮಿಲನವಾಗಿದೆ ಎಂದು ವ್ಯಾಖ್ಯಾನಿಸಿದರು.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ನ್ಯಾಯಮೂರ್ತಿ ಅರಳಿ ನಾಗರಾಜ ಅವರು ಬರೆದಿರುವ ಎಚ್ಚೆತ್ತ ಮತದಾರ ಪ್ರಜಾತಂತ್ರಕ್ಕಾಧಾರ ಪುಸ್ತಕವನ್ನು ಈ ಕೆಳಗಿನ ಅವರ ಫೇಸ್ ಬುಕ್ ಲಿಂಕ್ ನೀಡಲಾಗಿದೆ. ಆಸಕ್ತರು ಡೌನ್ ಲೋಡ್ ಮಾಡಿಕೊಂಡು ಓದುಬಹುದು.
‘ನಾವು ಒಬ್ಬ ಅಭ್ಯರ್ಥಿಯ ಜಾತಿ, ಮತ, ಪಂಥ, ಧರ್ಮ, ಪ್ರಾದೇಶಿಕತೆ, ಸುಳ್ಳು ಭರವಸೆ ಅಥವಾ ಒಂದು ಪಕ್ಷದ ಪುಕ್ಕಟೆ ಆಮಿಷಗಳಿಗೆ ಬಲಿಯಾಗಿ ಆತನಿಗೆ ಮತ ಹಾಕಬಾರದು. ಪ್ರತಿನಿಧಿಸುವ ಕ್ಷೇತ್ರದ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರುವ, ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ತನ್ನ ಯೋಜನೆಗಳೇನು ಎಂಬುದನ್ನು ಮತದಾರರಿಗೆ ತಿಳಿಯಪಡಿಸಿ ಅವುಗಳ ಜಾರಿಗೆ ಬದ್ಧನಾಗಿರುವ, ನಡೆ-ನುಡಿ ಎರಡರಲ್ಲೂ ಒಂದೇ ಆಗಿರುವ ಪ್ರಾಮಾಣಿಕ ವ್ಯಕ್ತಿಗೆ ಮತ ಹಾಕಿ ಗೆಲ್ಲಿಸಬೇಕು’ ಎಂದು ಸೂಚಿಸಿದರು.
‘ಚುನಾವಣೆಗೆ ಸ್ಪರ್ಧಿಸುವ ಪ್ರತಿ ಅಭ್ಯರ್ಥಿಯೂ ಸ್ವ ಘೋಷಣಾ ಪ್ರಮಾಣಪತ್ರ ಪ್ರಕಟಿಸಬೇಕು, ನಾನು ಭ್ರಷ್ಟನಲ್ಲ. ಆಯ್ಕೆಯಾದರೆ ಭ್ರಷ್ಟನಾಗುವುದಿಲ್ಲ. ಭ್ರಷ್ಟಾಚಾರ – ಜಾತೀಯತೆ, ಪಕ್ಷಪಾತಗಳಿಗೆ ಆಸ್ಪದ ಇಲ್ಲದಂತೆ ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸ ಮಾಡುವೆ. ಅಧಿವೇಶನಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ, ಆಯ್ಕೆಯಾದ ಪಕ್ಷದಲ್ಲಿಯೇ ಇರುವ ಎಂಬ ಸ್ವಘೋಷಣಾ ಪತ್ರ ನೀಡಬೇಕು. ಒಂದು ವೇಳೆ ವ್ಯತಿರಿಕ್ತವಾಗಿ ನಡೆದುಕೊಂಡಾಗ ರಾಜೀನಾಮೆಗೆ ಒತ್ತಾಯಿಸುವ ಹಕ್ಕು ಮತದಾರರಿಗೆ ಇರುತ್ತದೆ ಎಂದು ಹೇಳಿದರು.
ಹೊಸ ಕಾನೂನುಗಳ ರಚನೆಗೆ ಆಗ್ರಹ
ದೇಶದಲ್ಲಿ ನಡೆಯುವ ಚುನಾವಣೆಗಳಿಗೆ ಸಂಬಂಧಿಸಿದಂತೆ ಕಾನೂನಿನಲ್ಲಿ ಕೆಲವೊಂದು ಬದಲಾವಣೆ ಹಾಗೂ ಹೊಸ ಕಾನೂನುಗಳ ರಚನೆ ಆಗಬೇಕಿದೆ ಎಂದು ಅರಳಿ ನಾಗರಾಜ ಅಭಿಪ್ರಾಯಪಟ್ಟರು
ಒಬ್ಬ ವ್ಯಕ್ತಿ ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.
ಒಂದು ಸ್ಥಾನದಲ್ಲಿರುವ ವ್ಯಕ್ತಿ ಅದಕ್ಕೆ ರಾಜೀನಾಮ ನೀಡದೇ ಬೇರೊಂದು ಸ್ಥಾನಕ್ಕೆ ಸ್ಪರ್ಧಿಸುವಂತಿಲ್ಲ ಎಂಬ ನಿಬಂಧನೆ ಅಗತ್ಯ
ನೋಟಾ ಮತಕ್ಕೆ ಮೌಲ್ಯ ಒದಗಿಸಬೇಕು. ಇತರ ಎಲ್ಲ ಅಭ್ಯರ್ಥಿಗಳಿಗಿಂತ ಹೆಚ್ಚು ಮತ ಪಡೆದ ಅಭ್ಯರ್ಥಿಯ ಒಟ್ಟು ಮತಗಳಲ್ಲಿ ನೋಟಾ ಮತಗಳನ್ನು ಕಳೆದು ಆತನ ಆಯ್ಕೆ ನಿರ್ಧರಿಸಬೇಕು.
ಒಂದು ಪಕ್ಷದಿಂದ ಆಯ್ಕೆಯಾಗಿ ಸದಸ್ಯನಾದ ವ್ಯಕ್ತಿ. ಪಕ್ಷಾಂತರ ಮಾಡಿ ಸ್ಥಾನ ಕಳೆದುಕೊಂಡು, ಆ ನಂತರ ಅದೇ ಸ್ಥಾನಕ್ಕೆ ಬೇರೆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅರ್ಹನಲ್ಲ.
ಈ ಜನಪ್ರತಿನಿಧಿಗಳನ್ನೂ ಸಾಮಾನ್ಯ ನಾಗರಿಕರಂತೆಯೇ ತೆರಿಗೆ, ಕಾನೂನುಗಳ ವ್ಯಾಪ್ತಿಗೆ ಒಳಪಡಿಸಬೇಕು.
ಚುನಾವಣೆ ಮುಗಿದ ನಂತರ ಪಕ್ಷಗಳ ಬಲಬಲಾ ಆತಂತ್ರವಾದರೆ, ಅತ್ಯಂತ ಹೆಚ್ಚು ಶಾಸಕರನ್ನು ಹೊಂದಿರುವ ಪಕ್ಷ, ಸರ್ಕಾರ ರಚನೆ ಮಾಡುವಂತಿರಬೇಕು.
70 ವರ್ಷಗಳನ್ನು ಪೂರೈಸಿದ ವ್ಯಕ್ತಿ ಯಾವುದೇ ಸಾರ್ವಜನಿಕ ಸ್ಥಾನ ಹಾಗೂ ಹುದ್ದೆಗೆ ಅರ್ಹವಾಗುವಂತಿಲ್ಲ
ಎಂಬ ಅಂಶಗಳನ್ನು ಕಾನೂನಿನಲ್ಲಿ ಸೇರ್ಪಡೆ ಮಾಡಬೇಕಾಗದ ಅವಶ್ಯಕತೆ ಇದೆ ಎಂದರು.
ಗೋಷ್ಠಿಯಲ್ಲಿ ನಿವೃತ್ತ ಪ್ರಾಧ್ಯಾಪಕ ಎಚ್.ಎಸ್. ಮುದ್ದೇಗೌಡ, ಸಾಹಿತಿ ಪ್ರದೀಪ್ ಕುಮಾರ್ ಹೆಬ್ರಿ, ವಕೀಲ ಗುರುಪ್ರಸಾದ್ ಉಪಸ್ಥಿತರಿದ್ದರು




