ಮದ್ದೂರು ಸಮೀಪದ ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಮಾಲೀಕತ್ವದ ಸೋಮೇಶ್ವರ ಫರ್ಟಿಲೈಸರ್ ಪ್ರೈವೇಟ್ ಲಿಮಿಟೆಡ್ ನಲ್ಲಿ ರೂಫಿಂಗ್ ಶೀಟ್ ಅಳವಡಿಸುವ ವೇಳೆ ಅಕಸ್ಮಿಕವಾಗಿ ಕಾಲು ಜಾರಿ ಕೆಳಕ್ಕೆ ಬಿದ್ದು ಸಾವಿಗೀಡಾದ ಕೂಲಿ ಕಾರ್ಮಿಕ ಮಹಮ್ಮದ್ ನಯೀಂಉಲ್ಲಾ ಕುಟುಂಬಕ್ಕೆ ಪರಿಹಾರ ನೀಡದಿದ್ದಲ್ಲಿ ಎಸ್.ಪಿ.ಸ್ವಾಮಿ ಮನೆ ಮುಂದೆ ಧರಣಿ ನಡೆಸಲಾಗುವುದೆಂದು ಮಂಡ್ಯ ನಗರಸಭೆ 3 ನೇ ವಾರ್ಡಿನ ಸದಸ್ಯ ಜಾಕೀರ್ ಪಾಷ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯನಗರದ ಚಿಕ್ಕಮಂಡ್ಯ ಕೆರಯಂಗಳದಲ್ಲಿ ವಾಸವಾಗಿದ್ದ ಮಹಮ್ಮದ್ ನಯೀಂಉಲ್ಲಾ ಕೂಲಿ ಕಾರ್ಮಿಕನಾಗಿದ್ದು, ಕಳೆದ ಮಾ.14ರಂದು ಮೈಸೂರಿನ ಗುತ್ತಿಗೆದಾರ ಸಂದೀಪ್ ಕುಮಾರವರು ಗುತ್ತಿಗೆ ಪಡೆದಿದ್ದ ಎಸ್.ಪಿ.ಸ್ವಾಮಿ ಮಾಲೀಕತ್ವದ ಸೋಮೇಶ್ವರ ಫರ್ಟಿಲೈಸರ್ ಪ್ರೈವೇಟ್ ಲಿಮಿಟೆಡ್ ನಲ್ಲಿ ರೂಫಿಂಗ್ ಶೀಟ್ ಅಳವಡಿಸುವ ಕಾರ್ಯಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ಆಕಸ್ಮಾತ್ ಕಾಲು ಜಾರಿ ಬಿಟ್ಟು ಸಾವಿಗೀಡಾಗಿದ್ದರು. ಈ ಬಗ್ಗೆ ನಾವು ಮಾ.16ರಂದು ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಆನಂತರ ಗುತ್ತಿಗೆದಾರರಾದ ಸಂದೀಪ್ ಕುಮಾರ್, ಸೋಮೇಶ್ವರ ಫರ್ಟೀಲೈಜರ್ ಪ್ರೈವೈಟ್ ಲಿಮಿಡೆಟ್, ಪಾಷಲಾಲ್ ಹಾಗೂ ಇಮ್ರಾನ್ ಪಾಷ ಎಂಬುವವರು ಒಪ್ಪಿಗೆ ಪತ್ರ ಬರೆದು ಕೊಟ್ಟು ₹ 10 ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿದ್ದರು. ಆದರೆ ಈ ಪೈಕಿ ಕೇವಲ 4 ಲಕ್ಷ ರೂ.ಗಳ ಪರಿಹಾರವನ್ನು ನೀಡಿ, ಇನ್ನೂ 6 ಲಕ್ಷ ರೂ.ಗಳನ್ನು ನೀಡದೇ ಇಲ್ಲದ ಸಬೂಬು ಹೇಳಿ ಸತಾಯಿಸುತ್ತಿದ್ದಾರೆ ಎಂದು ದೂರಿದರು.
ಕೂಡಲೇ ಉಳಿಕೆ 6 ಲಕ್ಷ ರೂ. ಪರಿಹಾರ ನೀಡಬೇಕು, ಇಲ್ಲವಾದಲ್ಲಿ ಎಸ್.ಪಿ.ಸ್ವಾಮಿ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದೆಂದು ಎಚ್ಚರಿಸಿದರು.


ಉಳಿಕೆ ಮೊತ್ತ ಆರು ಲಕ್ಷ ರೂ. ನೀಡುವಂತೆ ಹಲವಾರು ಬಾರಿ ಮನವಿ ಮಾಡುತ್ತಾ ಬಂದಿದ್ದರೂ ಸಹ ಸುಮಾರು ಒಂದು ತಿಂಗಳು ಕಳೆದರೂ ಯಾವುದೇ ಉಳಿಕೆ ಹಣವನ್ನು ನೀಡದೇ ಮೃತ ಮಹಮ್ಮದ್ ನಯೀಂ ಉಲ್ಲಾ ಅವರ ಕುಟುಂಬದವರನ್ನು ಸತಾಯಿಸುತ್ತಾ, ಬಡ ಕೂಲಿ ಕಾರ್ಮಿಕನ ಜೀವಕ್ಕೆ ಬೆಲೆ ಇಲ್ಲದಂತೆ ಮಾಡಿರುತ್ತಾರೆ ಎಂದು ದೂರಿದರು.
ಮೃತನ ಕುಟುಂಬಕ್ಕೆ ನೀಡಬೇಕಾದ ಪರಿಹಾರದ ಹಣವನ್ನು ಇನ್ನು 2 ದಿನಗಳಲ್ಲಿ ನೀಡದಿದ್ದ ಪಕ್ಷದಲ್ಲಿ ಸೋಮೇಶ್ವರ ಫರ್ಟಿಲೈಸರ್ ಮಾಲೀಕರು ಹಾಗೂ ಬಿ.ಜೆ.ಪಿ. ಮುಖಂಡ ಎಸ್.ಪಿ.ಸ್ವಾಮಿರವರ ಮನೆಯ ಮುಂದೆ ನಮ್ಮ ಕುಟುಂಬದ ಎಲ್ಲಾ ಸದಸ್ಯರು ಬಂಧುಗಳು ಹಾಗೂ ಬೀಡಿ ಕಾರ್ಮಿಕರ ಕಾಲೋನಿಯ ಎಲ್ಲಾ ಸಾರ್ವಜನಿಕರೊಂದಿಗೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಮೃತನ ತಂದೆ ಮಹಮ್ಮದ್ ಕಲೀಂವುಲ್ಲಾ, ತಾಯಿ ಸಾಜಿದಾ, ತಂಗಿ ಫಾರನಾ, ಅರ್ಷಿಯಾ, ಜಬೀವುಲ್ಲಾ ಖಾನ್, ಸಾಜದ್ ಪಾಷ ಉಪಸ್ಥಿತರಿದ್ದರು.




